Advertisement

ಬೃಹತ್‌ ಕಾರು ಮಾರಾಟ ಜಾಲ ಪತ್ತೆ ಆರೋಪಿ ಬಂಧನ : 20 ಕಾರು ವಶ

08:52 PM Jul 14, 2021 | Team Udayavani |

ಬೆಂಗಳೂರು: ಮೂರು ವರ್ಷಗಳ ಹಿಂದೆ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ವಾಹನ ಚಾಲಕನ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಬೃಹತ್‌ ಕಳವು ಕಾರುಗಳ ಮಾರಾಟ ಜಾಲ ಪತ್ತೆಯಾಗಿದೆ.

Advertisement

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು ಹೊಸೂರು ಮೂಲದ ಶಬ್ಬೀರ್‌ ಖಾನ್‌ (41) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 1,80 ಕೋಟಿ ರೂ.ಮೌಲ್ಯದ 5 ಇನ್ನೋವಾ, 2 ಟೆಂಪೋ ಟ್ರಾವೆಲರ್‌, 1 ಮಹಿಂದ್ರಾ ಎಕ್ಸ್‌.ಯು.ವಿ, 1 ಮಹಿಂದ್ರಾ ವೆರಿಟ್ಟೊ, 5 ಟಯೋಟಾ ಟಿಯೋಸ್‌, 3 ಸ್ವಿಪ್ಟ್ ಡಿಜೈರ್‌, 1 ಹೊಂಡಾ ಅಸೆಂಟ್‌, 1 ಟಾಟಾ ವಿಸ್ತಾ, ಮತ್ತು 1 ಮಾರುತಿ ಜೆನ್‌ ಸೇರಿ 20 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಸ್ನೇಹಿತರಾದ ತಮಿಳುನಾಡು ಮೂಲದ ಶಕ್ತಿವೇಲು ಹಾಗೂ ಶರಣ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲಿಸರು ಹೇಳಿದರು.

ತಮಿಳುನಾಡಲ್ಲಿ ಮಾರಾಟ
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಾದ ಶಕ್ತಿವೇಲು, ಶರಣ್‌ ಎಂಬುವವರು ಈ ಜಾಲದಲ್ಲಿ ಸಕ್ರಿಯವಾಗಿದ್ದರು. ಕದ್ದ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅದರ ಆರ್‌ಸಿ ಬುಕ್‌ ಹಾಗೂ ಚಾರ್ಸಿ ನಂಬರ್‌ನ್ನು ಬದಲಿಸುತ್ತಿದ್ದರು. ಕರ್ನಾಟಕದ ವಾಹನಕ್ಕೆ ತಮಿಳುನಾಡು ವಾಹನದ ನಕಲಿ ಚಾರ್ಸಿ ನಂಬರ್‌, ನಂಬರ್‌ ಪ್ಲೇಟ್‌ ಅಳವಡಿಸಿ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 2537 ಸೋಂಕಿತರು ಗುಣಮುಖ; 1990 ಹೊಸ ಪ್ರಕರಣ ಪತ್ತೆ

ಮೈಸೂರು ಹಾಗೂ ಬೆಂಗಳೂರಿನ ಹಲವು ಕಾರುಗಳು ಆರೋಪಿಗಳ ಕೈ ಸೇರಿರುವುದು ಗೊತ್ತಾಗಿದೆ. ಅಂದಾಜು 75ಕ್ಕೂ ಅಧಿಕ ವಾಹನಗಳನ್ನು ಇದೇ ಮಾದರಿಯಲ್ಲಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ತಮಿಳುನಾಡು ಆರ್‌ಟಿಓ ಅಧಿಕಾರಿಗಳ ಒಡನಾಟ ಹೊಂದಿರುವ ಅನುಮಾನ ವ್ಯಕ್ತವಾಗಿದೆ. ಶಬ್ಬಿರ್‌ನಿಂದ ಇದುವರೆಗೆ ಕಾರು ಖರೀದಿಸಿದವರನ್ನು ಸಂಪರ್ಕಿಸಿದ ಗೋವಿಂದಪುರ ಪೊಲೀಸರು ತಮಿಳುನಾಡಿಗೆ ತೆರಳಿ 20 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಹೊಸೂರಲ್ಲೇ ಡೀಲ್‌
ಕರ್ನಾಟಕ-ತಮಿಳುನಾಡು ಗಡಿ ಪ್ರದೇಶವಾದ ಹೊಸೂರಿನಲ್ಲಿ ಕದ್ದ ಕಾರುಗಳ ಚಾರ್ಸಿ ನಂಬರ್‌ ಬದಲಿಸುವ ಕಾರ್ಯ ನಡೆಸುತ್ತಿದ್ದರು. ಅಲ್ಲೇ ಕಳ್ಳರಿಂದ ಕಡಿಮೆ ಬೆಲೆಗೆ ಕಾರು ಖರೀದಿಸಿದ ಕೂಡಲೇ ಕರ್ನಾಟಕ ನೋಂದಣಿ ಫ‌ಲಕ ಬದಲಾಯಿಸಿ ತಮಿಳುನಾಡು ನೊಂದಣಿಯ ನಂಬರ್‌ಗಳನ್ನು ಅಳವಡಿಸುತ್ತಿದ್ದರು. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಕಡಿಮೆ ಬೆಲೆಗೆ ನಮ್ಮ ಕಾರು ಮಾರಾಟ ಮಾಡುತ್ತಿರುವುದಾಗಿ ಗ್ರಾಹಕರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಚೀನಾದಿಂದ ಸಣ್ಣ ರಿಯಾಕ್ಟರ್‌ ನಿರ್ಮಾಣ ಶುರು : ಉಪಗ್ರಹ ಚಿತ್ರಗಳ ಪರಿಶೀಲನೆಯಿಂದ ದೃಢ

ಪ್ರಕರಣದ ಹಿನ್ನೆಲೆ?
2018 ನ.5ರಂದು ಕೆ.ಜಿ.ಹಳ್ಳಿಯ ನಾಗವಾರ ಮುಖ್ಯರಸ್ತೆಯಲ್ಲಿರುವ ಆಕ್ಸಿಸ್‌ ಬ್ಯಾಂಕ್‌ ಎಟಿಎಂಗೆ ಸಿಬ್ಬಂದಿ ಹಣ ತುಂಬಿಸಲು ಹೋಗಿದ್ದರು. ಎಟಿಎಂ ವಾಹನ ಚಾಲಕ ಅಬ್ದುಲ್ ಶಾಹೀದ್‌ಗೆ 5 ಲಕ್ಷ ರೂ. ಕೊಡುವುದಾಗಿ ಆಮಿಷವೊಡ್ಡಿದ್ದ ಎನ್‌.ಕುಮಾರ್‌, ಮಧುಸೂದನ್‌, ಪ್ರಸನ್ನ, ಮಹೇಶ್‌ ಎಟಿಎಂ ವಾಹನ ಸಮೇತ ಪರಾರಿಯಾಗಿದ್ದರು. ನಂತರ ಎಟಿಎಂ ವಾಹನದಲ್ಲಿದ್ದ 75 ಲಕ್ಷ ರೂ. ಪಡೆದು, ತಮ್ಮ ಸ್ವಿಫ್ಟ್‌ ಕಾರಿನಲ್ಲಿ ಅಬ್ದುಲ್‌ ಶಾಹಿದ್‌ನ್ನು ಕರೆದೊಯ್ದು ಆತನನ್ನು ಹತ್ಯೆ ಮಾಡಿ ಮೃತದೇಹವನ್ನು ಸಕಲೇಶಪುರ ಘಾಟ್‌ನಲ್ಲಿ ಎಸೆದಿದ್ದರು. ಈ ಪ್ರಕರಣದಲ್ಲಿ ಕಳೆದ ಮೇ ನಲ್ಲಿ ಗೋವಿಂದಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ವಿಫ್ಟ್‌ ಕಾರನ್ನು ಶಬ್ಬಿರ್‌ ಖಾನ್‌ ಎಂಬಾತನಿಗೆ ಹೊಸೂರು ಬಳಿ ಮಾರಾಟ ಮಾಡಿರುವ ಸಂಗತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next