Advertisement

ತೆರಿಗೆ ಇಲಾಖೆಗೆ ವಂಚನೆ: ಇಬ್ಬರ ವಿರುದ್ಧ ದೂರು ದಾಖಲು

12:27 AM Jan 20, 2023 | Team Udayavani |

ಮಂಗಳೂರು: ಬೈಕಂಪಾಡಿಯ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಕಂಪನಿಯೊಂದಕ್ಕೆ ಸಂಬಂಧಪಟ್ಟ ಸಲಹೆಗಾರರಿಬ್ಬರು ತೆರಿಗೆ ಪಾವತಿಸುವ ನೆಪದಲ್ಲಿ ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ ಇಲಾಖೆ ಕಚೇರಿಯಲ್ಲಿ ಮೋಸ ಮಾಡಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜಯರಾಮ್ ಪಿ. ಮತ್ತು ಅಂಕಿತ್‌ ಬನ್ಸಾಲ್‌ ಪ್ರಕರಣದ ಆರೋಪಿಗಳು. ಬೈಕಂಪಾಡಿಯ ಕಂಪನಿಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್‌ ದತ್ತಾಂಶ ಮತ್ತು ದಾಖಲಾತಿಗಳನ್ನು ತನಿಖೆಯ ಸಂಬಂಧ ಮಹಜರು ಮೂಲಕ 2022 ಸೆ.28-29ರಂದು ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನು ಬಂಟ್ಸ್‌ ಹಾಸ್ಟೆಲ್ ರಸ್ತೆಯಲ್ಲಿರುವ ಕಮಿಷನರ್‌ ಆಫ್‌ ಸೆಂಟ್ರಲ್ ಎಕ್ಸೈಸ್‌ ಮತ್ತು ಸೆಂಟ್ರಲ್ ಟ್ಯಾಕ್ಸ್‌ ಕಟ್ಟಡದ 6ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಇರಿಸಲಾಗಿತ್ತು.

ಇತ್ತೀಚೆಗೆ ಮಹಜರು ಸಮಯ ವಶಪಡಿಸಿಕೊಂಡ ದಾಖಲಾತಿಗಳನ್ನು ಪರಿಶೀಲಿಸಿದಾಗ ಕೆಲವೊಂದು ರಶೀದಿಗಳನ್ನು ಹಾಗೂ ನೋಟ್ ಬುಕ್‌ನಲ್ಲಿರುವ ಹಾಳೆಗಳನ್ನು ಬದಲಾಯಿಸಿರುವುದು ಹಾಗೂ ಕೆಲವೊಂದು ಹಾಳೆಗಳನ್ನು ಹರಿದು ಹಾಕಿರುವುದು ಕಂಡು ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ ಕಂಪನಿಯ ತೆರಿಗೆ ಸಲಹೆಗಾರರಾದ ಜಯರಾಮ್ ಮತ್ತು ಅಂಕಿತ್‌ ಎಂಬವರು ತೆರಿಗೆ ಪಾವತಿಸುವ ನೆಪದಲ್ಲಿ ಕಚೇರಿಗೆ ಬಂದು, ವಶಪಡಿಸಿಕೊಂಡ ದಾಖಲಾತಿಗಳನ್ನು ಬದಲಾಯಿಸಿ ಅದರಲ್ಲಿರುವ ಸಹಿಗಳನ್ನು ನಕಲು ಮಾಡಿ ಮೋಸ ಮಾಡಿರುವುದು ಕಂಡು ಬಂದಿದೆ. ಈ ಕುರಿತಂತೆ ಸೆಂಟ್ರಲ್‌ ಟ್ಯಾಕ್ಸ್‌ ಡೆಪ್ಯುಟಿ ಕಮಿಷನರ್‌ ಹನುಮಂತ ರಾಜು ಅವರು ಬಂದರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next