Advertisement

ಮನೆಗಳಲ್ಲಿ ಕಳವು, ಸುಲಿಗೆ, ವಾಹನಗಳ ಕಳವು : ಸಹೋದರರ ಸಹಿತ ಮೂವರ ಬಂಧನ

11:06 PM Aug 06, 2022 | Team Udayavani |

ಕಾಪು: ಮನೆಗಳಲ್ಲಿ ಕಳವು, ಸುಲಿಗೆ, ವಾಹನ ಕಳವು ಮಾಡುತ್ತಿದ್ದ ಮೂವರನ್ನು ಕಾಪು ವೃತ್ತದ ಪೊಲೀಸರು ಬಂಧಿಸಿದ್ದಾರೆ.

Advertisement

ಕಾಪು ಪೊಲೀಸ್‌ ವೃತ್ತ ವ್ಯಾಪ್ತಿಯ ನಂದಿಕೂರಿನ ಯುಪಿಸಿಎಲ್‌ ಬಳಿಯ ಮನೆಯಲ್ಲಿದ್ದ ವೃದ್ಧೆಯೊಬ್ಬರ ಕುತ್ತಿಗೆ ಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ – ಪಣಿಯೂರು ರಸ್ತೆ ಬದಿಯ ಮನೆಯೊಂದರಿಂದ 2.52 ಲಕ್ಷ ರೂ. ನಗದು ಕಳವು ಮತ್ತು ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿ ಸಹೋದರರ ಸಹಿತ ಮೂವರನ್ನು ನಗದು ಸಹಿತ 2,99,190 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಡುಬಿದ್ರಿಯಲ್ಲಿ ಬೆನ್ನಟ್ಟಿ
ಹಿಡಿದಿದ್ದ ಕ್ರೈಂ ಎಸ್‌ಐ ಪ್ರಕಾಶ್‌
ಅನುಮಾನಾಸ್ಪದ ರೀತಿಯಲ್ಲಿ ರಿಕ್ಷಾದಲ್ಲಿ ತಿರುಗಾಡುತ್ತಿದ್ದ ಸುಲಿಗೆ, ಮನೆಗಳಲ್ಲಿ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಮೂವರನ್ನು ಪಡುಬಿದ್ರಿ ಕ್ರೈಂ ಎಸ್‌ಐ ಪ್ರಕಾಶ್‌ ಸಾಲ್ಯಾನ್‌ ಮತ್ತವರ ತಂಡ ನಂದಿಕೂರಿನಿಂದ ಬೆನ್ನಟ್ಟಿಕೊಂಡು ವಾಹನದಲ್ಲಿ ಬಂದು ಪಡುಬಿದ್ರಿಯಲ್ಲಿ ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡಿದ್ದರು. ಮಂಗಳೂರು ಬಜಪೆ ಮೂಲದ ಮಹಮ್ಮದ್‌ ಆರೀಫ್‌ ಅಲಿಯಾಸ್‌ ಮುನ್ನ (37), ಮಹಮ್ಮದ್‌ ಮುನೀರ್‌ (24) ಮತ್ತು ಅಕ್ಬರ್ (36) ನನ್ನು ವಶಕ್ಕೆ ತೆಗೆದುಕೊಂಡಿದ್ದ ಪಡುಬಿದ್ರಿ ಪೊಲೀಸರು ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಮೇಲಧಿಕಾರಿಗಳ ನಿರ್ದೇಶನದಂತೆ ಬೃಹತ್‌ ಕಾರ್ಯಾಚರಣೆ ನಡೆಸಿದ್ದಾರೆ.

ನಗ, ನಗದು, ಸೊತ್ತು ವಶ
ವಶಕ್ಕೆ ಪಡೆದ ಆರೋಪಿಗಳ ತೀವ್ರ ವಿಚಾರಣೆ ನಡೆಸಿದ ಪೊಲೀಸರ ತಂಡ ನಡೆಸಿದ ಯಶಸ್ವಿ ಕಾರ್ಯಾಚರಣೆ ವೇಳೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಎರಡೂವರೆ ಪವನ್‌ ತೂಕದ ಚಿನ್ನದ ಸರ, 1 ಮೊಬೈಲ್‌, 61 ಸಾವಿರ ರೂ. ನಗದು, 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿûಾ, ಬೈಕ್‌ ಸಹಿತ ವಿವಿಧ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ಎನ್‌. ವಿಷ್ಣುವರ್ಧನ್‌, ಹೆಚ್ಚುವರಿ ಎಸ್ಪಿ ಎಸ್‌.ಟಿ. ಸಿದ್ದಲಿಂಗಪ್ಪ ಅವರ ನಿರ್ದೇಶನದಂತೆ ಕಾರ್ಕಳ ಡಿವೈಎಸ್ಪಿ ಎಸ್‌. ವಿಜಯ ಪ್ರಸಾದ್‌, ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಪಡುಬಿದ್ರಿ ಕ್ರೈಂ ಎಸ್ಸೆ ಪ್ರಕಾಶ್‌ ಸಾಲ್ಯಾನ್‌ ಮತ್ತು ಸಿಬಂದಿ ಪ್ರವೀಣ್‌ ಕುಮಾರ್‌, ರಾಜೇಶ್‌, ಹೇಮರಾಜ್‌, ಸಂದೇಶ, ಸುಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

ಇವರ ಮೇಲಿತ್ತು 28 ಪ್ರಕರಣ!
ಬಂಧಿತರ ಪೈಕಿ ಮಹಮ್ಮದ್‌ ಆರೀಫ್‌ ಅಲಿಯಾಸ್‌ ಮುನ್ನ ಮತ್ತು ಮಹಮ್ಮದ್‌ ಮುನೀರ್‌ ಸಹೋದರರಾಗಿದ್ದು, ಅಕ್ಬರ್ ಸಹೋದರರ ಪರಿಚಿತ ಮತ್ತು ಸಂಬಂಧಿ. ಮೊದಲ ಆರೋಪಿಯ ವಿರುದ್ಧ ಬ್ರಹ್ಮಾವರ, ಮೂಲ್ಕಿ, ಬಜಪೆ, ಮಂಗಳೂರು ಗ್ರಾಮಾಂತರ ಮತ್ತು ಹಾಸನ ಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 18 ಪ್ರಕರಣಗಳು ದಾಖಲಾಗಿವೆ.

ಎರಡನೇ ಆರೋಪಿ ಮಹಮ್ಮದ್‌ ಮುನೀರ್‌ ವಿರುದ್ಧ ಬ್ರಹ್ಮಾವರ ಮತ್ತು ಹಾಸನ ಸಿಟಿ ಪೊಲೀಸ್‌ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, ಮತ್ತೋರ್ವ ಆರೋಪಿ ಅಕ್ಬರ್ ನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next