ಮುಂಬಯಿ : ಭಾರತೀಯ ಕ್ರಿಕೆಟಿಗ ಶಾರ್‌ದೂಲ್ ಠಾಕೂರ್ ಅವರ ತಂದೆ – ತಾಯಿ ನಿನ್ನೆ ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಪಾಲಗಢ ಜಿಲ್ಲೆಯಲ್ಲಿ ಮುಂಬಯಿ ಸಮೀಪ ಬೈಕಿನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೆ ಗುರಿಯಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹಾಗಿದ್ದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಾರ್‌ದೂಲ್ ಠಾಕೂರ್ ಅವರ ತಂದೆ ನರೇಂದ್ರ ಠಾಕೂರ್ ಮತ್ತು ತಾಯಿ ಹಂಸಾ ಠಾಕೂರ್ ಅವರು ಹೋಗುತ್ತಿದ್ದ ಬೈಕ್ ಸ್ಕಿಡ್ ಆಯಿತು. ಗಾಯಗೊಂಡ ಅವರನ್ನು ಸ್ಥಳೀಯ ಪೊಲೀಸರು ಪಾಲಗಢದಲ್ಲಿನ ಧವಳೆ ಆಸ್ಪತ್ರೆಗೆ ದಾಖಲಿಸಿದರು.
ಶಾರ್‌ದೂಲ್ ಠಾಕೂರ್ ಅವರು ಪ್ರಕೃತ ನಡೆಯುತ್ತಿರುವ ಐಪಿಎಲ್ ಕೂಟದಲ್ಲಿ ಚೆನ್ನೈ ತಂಡದ ಪರವಾಗಿ ಆಡುತ್ತಿದ್ದಾರೆ. ಅವರು 2.60 ಕೋಟಿ ರೂ.ಗಳಿಗೆ ಚೆನ್ನೈ ತಂಡಕ್ಕೆ ಸೇಲಾಗಿದ್ದರು.