ಅಹಮದಾಬಾದ್: ಕ್ರಿಕೆಟ್ ಆಡುವ ವೇಳೆ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ಭಾನುವಾರ (ಫೆ. 26 ರಂದು) ನಡೆದಿದೆ.
ವಸಂತ ರಾಥೋಡ್ (34) ಮೃತ ಆಟಗಾರ.
ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST) ಇಲಾಖೆಯ ಹಿರಿಯ ಸಿಬ್ಬಂದಿಯಾಗಿದ್ದ ವಸಂತ ರಾಥೋಡ್ ಭಾನುವಾರ ಭದಾಜ್‌ನಲ್ಲಿನ ದಂತ ಕಾಲೇಜಿನ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಫೀಲ್ಡಿಂಗ್ ಮಾಡಿದ ಬಳಿಕ, ಬೌಲಿಂಗ್ ಮಾಡಲು ಬಂದಾಗ ಎದೆನೋವು ಕಾಣಿಸಿಕೊಂಡಿದೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ. ಡೆಂಟಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಸಿಬಿಐ ಮುಂದೆ ಹಾಜರಾಗುವ ಮುನ್ನ ಸಿಸೋಡಿಯಾ ರೋಡ್ ಶೋ: ಬಿಜೆಪಿ ಆಕ್ರೋಶ
ವಸಂತ ರಾಥೋಡ್ ಉತ್ತಮ ಕ್ರಿಕೆಟರ್ ಆಗಿದ್ದರು. ಆ ಭಾಗದಲ್ಲಿ ಕ್ರಿಕೆಟಿಗನಾಗಿ ಒಳ್ಳೆಯ ಹೆಸರು ಗಳಿಸಿದ್ದರು.
ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತಿನಲ್ಲಿ ಕಳೆದ 10 ದಿನದೊಳಗೆ ಮೂರನೇ ಬಾರಿ ಆಗಿರುವುದುಆಘಾತಕಾರಿ. ಇತ್ತೀಚೆಗೆ ರಾಜ್ ಕೋಟ್ ನಿವಾಸಿ ಪ್ರಶಾಂತ್ ಭರೋಲಿಯಾ (27), ಸೂರತ್ ಮೂಲದ ಜಿಗ್ನೇಶ್ ಚೌಹಾಣ್ (31) ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು.