Advertisement
ಅದು 1988ನೇ ಇಸವಿಯ ಬೇಸಿಗೆಯ ಒಂದು ದಿನ. ನಾನು ಗುಲ್ಬರ್ಗಾದಲ್ಲಿ ಎಂ. ಎ. ಓದುತ್ತಿದ್ದೆ. ಆ ವರ್ಷ ರಣಜಿ ಕ್ರಿಕೆಟ್ ಪಂದ್ಯ ಗುಲ್ಬರ್ಗಾದಲ್ಲಿ ನಡೆಯಿತು. ನಮ್ಮ ಹಾಸ್ಟೆಲ್ ಹುಡುಗರೆಲ್ಲಾ ರಣಜಿ ಪಂದ್ಯ ವೀಕ್ಷಣೆಗೆ ಬೆಳ್ ಬೆಳಗ್ಗೆಯೇ ಸ್ಟೇಡಿಯಂ ಹತ್ತಿರ ಜಮಾಯಿಸುತ್ತಿದ್ದರು. ಪಂದ್ಯವೀಕ್ಷಣೆಗೆ ಸಾಥ್ ಕೊಡುವಂತೆ ಗೆಳೆಯರು ಒತ್ತಾಯಿಸುತ್ತಿದ್ದರೂ, ನಾನು ಒಂದಿಷ್ಟೂ ಆಸಕ್ತಿ ತೋರಿಸಿರಲಿಲ್ಲ. ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆನಾದರೂ, ನಾನು ಕಡೆಯ ಆಟಗಾರನಾಗಿರುತ್ತಿದ್ದೆ. ಹೀಗಾಗಿ ಗೆಳೆಯರು ಎಷ್ಟೇ ಒತ್ತಾಯಿಸಿದರೂ, ರಣಜಿ ಪಂದ್ಯ ವೀಕ್ಷಣೆಯಿಂದ ದೂರವೇ ಉಳಿದಿದ್ದೆ.
ಆಟಗಾರರು ಉಳಿದುಕೊಂಡಿದ್ದ ಪರಿವಾರ್ ಹೋಟೆಲ್ ನಲ್ಲಿ ನನ್ನ ಸ್ನೇಹಿತರೊಬ್ಬರು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸಹಾಯ ಪಡೆದು ಕೀರ್ಮಾನಿಯವರನ್ನು ಭೇಟಿ ಮಾಡಿ, ಕ್ಯಾರಿಕೇಚರ್‌ಗೆ ಅವರ ಸಹಿ ಪಡೆದುಕೊಂಡರೆ ಹೇಗೆ ಎಂಬ ಯೋಚನೆ ಬಂತು. ಮಿತ್ರರಿಗೆ ನನ್ನ ಉದ್ದೇಶ ತಿಳಿಸಿ, ನೀವೂ ಬನ್ನಿ ಅಂತ ಕರೆದಾಗ, ಗೊಳ್ಳೆಂದು ನಕ್ಕರು. “ಮಗನಾ, ಕೀರ್ಮಾನಿನ ಮೀಟ್ ಮಾಡೋದಿರ್ಲಿ, ಅವರ ಮುಖ ನೋಡ್ಲಿಕ್ಕೂ ಸಿಗಂಗಿಲ್ಲ’ ಅಂದರು. ಇರಲಿ, ಒಂದು ಪ್ರಯತ್ನ ಮಾಡೋಣ ಅಂತ ತೀರ್ಮಾನಿಸಿ ಕೀರ್ಮಾನಿ ಕ್ಯಾರಿಕೇಚರ್‌ನ ಒಂದು ಹಾರ್ಡ್ ಬೋರ್ಡ್‌ಗೆ ಸಿಕ್ಕಿಸಿಕೊಂಡು ಪರಿವಾರ್ ಹೋಟೆಲ್ ತಲುಪಿದೆ.
Related Articles
ಹೋಟೆಲ್‌ನ ಹೊರಗೆ ಜನವೊ ಜನ. ಹೋಟೆಲ್ ಕಾಂಪೌಂಡ್‌ನ ಒಳಗೂ ಯಾರನ್ನೂ ಬಿಟ್ಟುಕೊಳ್ತಿರಲಿಲ್ಲ. ಆಟ ಮುಗಿಸಿ ಆಟಗಾರರು ಹೋಟೆಲ್‌ಗೆ ಹಿಂದಿರುಗುವ ಸಮಯ ಅದು. ನಾನು ಹಾರ್ಡ್ ಬೋರ್ಡ್‌ನ್ನು ಗಟ್ಟಿಯಾಗಿ ಹಿಡಿದುಕೊಂಡು ಹೇಗೊ ಗೇಟ್‌ನ ಸಮೀಪಕ್ಕೆ ಬಂದು ನಿಂತೆ. ಅಲ್ಲಿ ಪೊಲೀಸರ ಸರ್ಪಗಾವಲು! ಪೊಲೀಸ್ ಅಧಿಕಾರಿಯೊಬ್ಬರು ನನ್ನ ಕೈಯ್ಯಲ್ಲಿದ್ದ ಕ್ಯಾರಿಕೇಚರ್ ಗಮನಿಸಿ, “ನೀನೇ ಬರೆದದ್ದಾ ? ಅಂತ ಕೇಳಿದರು.
Advertisement
“ಹೌದು ಸರ್, ಇದಕ್ಕೆ ಕೀರ್ಮಾನಿಯವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕಿತ್ತು’ ಎಂದೆ. “ಇಲ್ಲೆ ನನ್ನ ಪಕ್ಕದಲ್ಲಿಯೇ ನಿಂತುಕೊಂಡಿರು. ಕೀರ್ಮಾನಿ ಬರ್ತಿದ್ದ ಹಾಗೆ ಥಟ್ಟನೆ ಈ ಚಿತ್ರವನ್ನು ಅವರ ಮುಂದೆ ಹಿಡಿಯಬೇಕು. ತಿಳೀತಾ..?’ ಎಂದರು ಆ ಅಧಿಕಾರಿ. ಇತರ ಪೊಲೀಸ್ ಸಿಬ್ಬಂದಿಗಳೂ ಕ್ಯಾರಿಕೇಚರ್ ನೋಡಿ ಪ್ರಶಂಸಿಸಿದರು. ಹೀಗೇ ಹತ್ತು ನಿಮಿಷ ಕಾದಿದ್ದಿರಬೇಕು. ಅಷ್ಟರಲ್ಲೇ ಒಂದು ಟಿ. ಟಿ. ತುಂಬಾ ಬಂದ ಒಂದಷ್ಟು ಜನ, ವಾಹನ ಇಳಿದು ಹೋಟೆಲ್ ಕಡೆ ನಡೆದರು. ಅವರಲ್ಲೇ ಒಬ್ಬರು ಕೀರ್ಮಾನಿ ಆಗಿರಬಹುದೆಂದು ಊಹಿಸಿ ಕಾರ್ಡ್ ಬೋರ್ಡ್‌ನ್ನು ಮುಂದೆ ಚಾಚಿ ಹಿಡಿದಿದ್ದೆ.
ಅಪರಿಚಿತ, ಆಪದ್ಬಾಂಧವ !ಅವರ್ಯಾರೂ ಆಟಗಾರರಾಗಿರಲಿಲ್ಲ, ಅವರೆಲ್ಲಾ ಪಂದ್ಯದ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸುವವರಾಗಿದ್ದರು. ಅವರಲ್ಲೊಬ್ಬ ಅಧಿಕಾರಿ ನನ್ನ ಕೈಯಲ್ಲಿದ್ದ ಕೀರ್ಮಾನಿ ಕ್ಯಾರಿಕೇಚರ್ ನೋಡಿ ಒಂದು ಕ್ಷಣ ನಿಂತರು. ಹಾರ್ಡ್ ಬೋರ್ಡ್ ಎತ್ತಿಕೊಂಡು – “ನೀನೇ ಬರೆದಿದ್ದಾ ?’ ಅಂತ ಕೇಳಿದರು. “ಹೌದು ಸರ್, ಕೀರ್ಮಾನಿಯವರ ಆಟೋಗ್ರಾಫ್ ಹಾಕಿಸಿಕೊಳ್ಳೋಣಾಂತ ಕಾಯ್ತಿದೀನಿ’ ಎಂದೆ.
“ಬಾ ನಂಜೊತೆ’ ಅಂತ ಹೇಳಿ, ನನ್ನ ಹೆಗಲಮೇಲೆ ಕೈ ಹಾಕಿಕೊಂಡು ಹೋಟೆಲ್ ಕಡೆ ನಡೆದೇಬಿಟ್ಟರು. ಅವರು ಆ ದಿನಗಳಲ್ಲಿ ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡುತ್ತಿದ್ದರು. (ತಮ್ಮ ಹೆಸರು ರಮೇಶ್ ಚಂದ್ರ ಎಂದು ಅವರು ಪರಿಚಯಿಸಿಕೊಂಡಿದ್ದ ಅಸ್ಪಷ್ಟ ನೆನಪು) ಬೆರಗಾದರು ಕಿರ್ಮಾನಿ…
ಮುಂದಿನ ಸರಿ ಸುಮಾರು ಒಂದು ಗಂಟೆ ಕಾಲ ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳು! ಈ ಕಾಮೆಂಟೇಟರ್, ನನ್ನನ್ನು ನೇರವಾಗಿ ಕೀರ್ಮಾನಿಯವರ ರೂಮಿಗೇ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ಕೀರ್ಮಾನಿಯವರು ಆಶ್ಚರ್ಯಚಕಿತರಾಗಿ ಅವರ ಕ್ಯಾರಿಕೇಚರ್‌ನೊಮ್ಮೆ, ನನ್ನನ್ನೊಮ್ಮೆ ನೋಡಿದರು. ಕನ್ನಡಿಯ ಮುಂದೆ ನಿಂತು ತಮ್ಮನ್ನೇ ನೋಡಿಕೊಂಡು, ಕ್ಯಾರಿಕೇಚರ್ ಸರಿಯಾಗಿದೆಯೇ ಇಲ್ಲವೇ ಎಂದು ಚೆಕ್ ಮಾಡಿಕೊಂಡರು! ಬಕ್ಕ ತಲೆಯ ಮೇಲೆ ಕೈ ಆಡಿಸಿಕೊಂಡು- “ಕ್ಯಾರಿಕೇಚರ್‌ನಲ್ಲೇನಾದರೂ ಸ್ವಲ್ಪ ಕ್ರಾಪ್ ಬರೀಬಹುದಿತ್ತಲ್ಲ…’ ಎಂದರು. ಎಲ್ಲರೂ ಬೆನ್ನು ತಟ್ಟಿದರು!
ನೋಡನೋಡುತ್ತಿದ್ದಂತೆ, ಈ ಕ್ಯಾರಿಕೇಚರ್ ವಿಷಯ ಹೋಟೆಲ್ ತುಂಬಾ ಹರಿದಾಡಿ ಬೇರೆ ಬೇರೆ ಆಟಗಾರರೆಲ್ಲಾ ಕೀರ್ಮಾನಿಯವರ ಕೋಣೆಯಲ್ಲಿ ಜಮಾಯಿಸಿದರು. ಅವರಲ್ಲಿ ಕೆಲವರನ್ನಷ್ಟೇ ಗುರುತಿಸಲು ಸಾಧ್ಯವಾಯಿತು. ನನ್ನನ್ನು ಕೀರ್ಮಾನಿಯವರಿಗೆ ಪರಿಚಯಿಸಿದ ವೀಕ್ಷಕ ವಿವರಣೆಕಾರರೇ ಯಾರಿಗೊ ತಿಳಿಸಿ, ಒಂದೈದಾರು ಅ4 ಅಳತೆಯ ಶೀಟ್ ತರಿಸಿದರು. ಅಲ್ಲಿರುವ ಎಲ್ಲಾ ಆಟಗಾರರ ಕ್ಯಾರಿಕೇಚರ್ ಬರೆಯಬೇಕೆಂದು ಕೀರ್ಮಾನಿ ಒತ್ತಾಯಿಸಿದರಾದರೂ, ಅದು ಸಾಧ್ಯವಿರಲಿಲ್ಲ. ವಿಶೇಷ ಮುಖಚರ್ಯೆ ಹೊಂದಿದ್ದ ಕೆಲವರನ್ನಷ್ಟೇ ಬರೆಯಲು ಸಾಧ್ಯವಾಯಿತು. ಬ್ರಿಜೇಶ್ ಪಟೇಲ್‌ರ ವಿಶೇಷ ಗಡ್ಡ ಮೀಸೆಯಿಂದಾಗಿ, ರೋಜರ್ ಬಿನ್ನಿಯವರ ಸಣ್ಣ ಕಣ್ಣುಗಳು ಮತ್ತು ಮಂಗೋಲಿಯನ್ನರ ಮೀಸೆಯನ್ನೇ ಹೋಲುವ ಮೀಸೆಯಿಂದಾಗಿ ,ಇಬ್ಬರ ಕ್ಯಾರಿಕೇಚರ್ ಚೆನ್ನಾಗಿ ಮೂಡಿದವು. ಸದಾನಂದ ವಿಶ್ವನಾಥ್ ಮತ್ತು ಇನ್ನೊಂದಿಬ್ಬರ ಕ್ಯಾರಿಕೇಚರ್ ಅಷ್ಟೇನೂ ಚೆನ್ನಾಗಿ ಮೂಡಲಿಲ್ಲ. ಕ್ಯಾರಿಕೇಚರ್ ಚೆನ್ನಾಗಿ ಮೂಡಿದರೂ, ಮೂಡದಿದ್ದರೂ ಅವರ್ಯಾರೂ ಬೇಸರ ಮಾಡಿಕೊಳ್ಳಲಿಲ್ಲ. ಚೆನ್ನಾಗಿದೆ ಅಂತಲೇ ಹೇಳಿ ನನ್ನ ಬೆನ್ನು ತಟ್ಟಿದರು. ಮರೆಯಲಾಗದ ಆ ದಿನ…
ಕೀರ್ಮಾನಿಯವರಂತೂ ತುಂಬಾ ಖುಷಿಪಟ್ಟರು. ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬರಬೇಕೆಂದು ಆಮಂತ್ರಿಸಿದ್ದರು. ಆ ಹೋಟೆಲಿನಲ್ಲಿ ಕಾಫಿ ನೀಡಿ ಸತ್ಕರಿಸಿ, ಕ್ಯಾರಿಕೇಚರ್ ಮೇಲೆ ಮೂರ್ನಾಲ್ಕು ಸಾಲುಗಳ “ಪೋ›ತ್ಸಾಹ ತುಂಬಿದ ಶುಭಾಶಯ’ ಬರೆದು ಸಹಿ ಮಾಡಿ ಕಳಿಸಿಕೊಟ್ಟರು. ಹಾಸ್ಟೆಲ್‌ಗೆ ಹಿಂದಿರುಗಿ, ಸ್ನೇಹಿತರಿಗೆ ಕೀರ್ಮಾನಿಯವರ ಆಟೋಗ್ರಾಫ್ ತೋರಿಸಿ, ಅಲ್ಲಿ ನಡೆಡಿದ್ದನ್ನೆಲ್ಲಾ ವಿವರಿಸಿದಾಗ ಅಚ್ಚರಿಪಟ್ಟರು. “ನಾವೂ ನಿನ್ ಜೋಡಿ ಬಂದಿದ್ರ, ಕೀರ್ಮಾನಿ ನೋಡಿಬರಬಹುದಿತ್ತು’ ಅಂತ ಪೇಚಾಡಿದರು. ಮರುದಿನ ಈ ಸುದ್ದಿ ಕಾಲೇಜಿನಲ್ಲೆಲ್ಲಾ ಹರಡಿತು. ವಿದ್ಯಾರ್ಥಿ ಮಿತ್ರರು ಮಾತ್ರವಲ್ಲ, ನಮ್ಮ ಪೊ›ಫೆಸರ್ ಕೂಡ ಕ್ಯಾರಿಕೇಚರ್ ನೋಡಿ ಮೆಚ್ಚಿಕೊಂಡರು. ಈ ಘಟನೆ ನಡೆದು ಸುಮಾರು 35 ವರ್ಷಗಳೇ ಸಂದವು. ಇಂದಿಗೂ ನಿನ್ನೆ ಮೊನ್ನೆ ನಡೆದ ಘಟನೆ ಎಂಬಂತೆ ಹಚ್ಚ ಹಸುರಿನ ನೆನಪಾಗಿ ಉಳಿದಿದೆ. – ನಟರಾಜ್ ಅರಳಸುರಳಿ