ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟವು ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ರವಿವಾರ ಅಹಮದಾಬಾದ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಹನ್ನೆರಡು ವರ್ಷಗಳ ಬಳಿಕ ಕಪ್ ಗೆಲ್ಲಲು ಭಾರತ ಯೋಜನೆ ರೂಪಿಸಿದ್ದರೆ, ದಾಖಲೆಯ ಆರನೇ ಬಾರಿಗೆ ಕಪ್ ಗೆಲ್ಲುವ ಯೋಚನೆಯಲ್ಲಿದೆ ಕಾಂಗರೂ ಪಡೆ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವನ್ನು ಭರ್ಜರಿಯಾಗಿ ನಡೆಸಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ಈ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಅವರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ ಹಲವು ಗಾಯಕರು ಫೈನಲ್ ಪಂದ್ಯದ ವೇಳೆ ವರ್ಣರಂಜಿತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ಇದೀಗ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಪಂದ್ಯಕ್ಕೂ ಮೊದಲು, ಟಾಸ್ ಬಳಿಕ ಅಂದರೆ 1.35ರಿಂದ 1.50ರವರೆಗೆ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲೋಹದ ಹಕ್ಕಿಗಳು ಹಾರಾಟ ನಡೆಸಲಿದ್ದಾವೆ.
ಮೊದಲು ಇನ್ನಿಂಗ್ ನ ಡ್ರಿಂಕ್ಸ್ ಬ್ರೇಕ್ ವೇಳೆ ಆದಿತ್ಯ ಗಧ್ವಿ ಅವರು ಪ್ರದರ್ಶನ ನೀಡಲಿದ್ದಾರೆ. ಮೊದಲು ಇನ್ನಿಂಗ್ ಮುಗಿದ ಬಳಿಕ ಸಿಗುವ ಸಮಯದಲ್ಲಿ ಪ್ರೀತಮ್ ಚಕ್ರವರ್ತಿ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಮಿತ್ ಮಿಶ್ರಾ, ಅಕಾಸ ಸಿಂಗ್ ಮತ್ತು ತುಷಾರ್ ಜೋಶಿ ಪ್ರದರ್ಶನಗಳು ನಡೆಯಲಿದೆ.
ಎರಡನೇ ಇನ್ನಿಂಗ್ಸ್ ನ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಖ್ಯಾತ ಗಾಯಕಿ ದುವಾ ಲಿಪಾ ಅವರು ಪ್ರದರ್ಶನ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು, ಆದರೆ ಬಿಸಿಸಿಐ ಇಂದು ಬಿಡುಗಡೆ ಮಾಡಿ ಪಟ್ಟಿಯಲ್ಲಿ ದುವಾ ಲಿಪಾ ಹೆಸರಿಲ್ಲ.
ಈವರೆಗಿನ ವಿಶ್ವಕಪ್ ವಿಜೇತ ತಂಡಗಳ ನಾಯಕರೆಲ್ಲರಿಗೂ ಆಹ್ವಾನ ನೀಡಲಾಗಿದೆ. ಈ ನಾಯಕರೆಂದರೆ ಕ್ಲೈವ್ ಲಾಯ್ಡ್, ಕಪಿಲ್‌ದೇವ್, ಅಲನ್ ಬಾರ್ಡರ್, ಇಮ್ರಾನ್ ಖಾನ್, ಅರ್ಜುನ ರಣತುಂಗ, ಸ್ಟೀವ್ ವಾ, ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್, ಇಯಾನ್ ಮಾರ್ಗನ್. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹವಾಗ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ ಮೊದಲಾದವರು ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.
ತಾರೆಗಳಾದ ಅಮಿತಾಭ್ ಬಚ್ಚನ್, ರಜನೀಕಾಂತ್, ಕಮಲಹಾಸನ್, ಮೋಹನ್‌ಲಾಲ್, ರಾಮ್‌ಚರಣ್ ಕೂಡ ಸ್ಟೇಡಿಯಂಗೆ ಆಗಮಿಸಲಿದ್ದಾರೆ.