Advertisement

Success Story ಬದ್ಧತೆ ಸಾಧನೆಗಳಿಂದ ಸೃಷ್ಠಿ-ಯಶೋಗಾಥೆ

12:30 AM Aug 26, 2023 | Team Udayavani |

ಅವಕಾಶಗಳಿಗೆ ಆಕಾಶವೇ ಮಿತಿ ಎಂಬುದು ಪ್ರಸಿದ್ಧವಾದ ನಾಣ್ಣುಡಿ. ಆದ್ದರಿಂದ ಅವಕಾಶಗಳನ್ನು ಸದುಪಯೋಗಿಸುವುದೇ ಯಶಸ್ಸಿನ ಸಿದ್ಧಸೂತ್ರ. ಹಾಗೆ ನೋಡಿದರೆ ಕಳೆದ ಐದಾರು ದಶಕಗಳಿಂದ ಜೀವನಶೈಲಿಯು ಕ್ರಾಂತಿಕಾರಕ ಎಂಬ ರೀತಿಯಲ್ಲಿ ಬದಲಾಗಿದೆ. ಮಾಹಿತಿ ತಂತ್ರಜ್ಞಾನದ ಸ್ಫೋಟವು ಬದುಕಿನ ಎಲ್ಲ ರಂಗಗಳನ್ನೂ ದಿಢೀರ್‌ ಎಂಬಂತೆ ಬದಲಾಯಿಸಿದೆ. ವೈಯಕ್ತಿಕ, ಕೌಟುಂಬಿಕ, ಔದ್ಯಮಿಕ, ಆಡಳಿತಾತ್ಮಕ ಸಹಿತ ಪ್ರತೀ ವ್ಯಕ್ತಿ ಈ ಬದಲಾವಣೆಯ ಫ‌ಲಾನುಭವಿ ಅನ್ನಬಹುದು. ಆದ್ದರಿಂದಲೇ ಅನೇಕ ಬಾರಿ ಅಸಹಾಯಕತೆಯು ಸ್ಫೂರ್ತಿ ಅನಿಸಬಹುದು. ಸೋಲಿನ ಸರಣಿಯೇ ಯಶಸ್ಸಿನ ಮೆಟ್ಟಿಲುಗಳಾಗಬಹುದು.

Advertisement

ಅನಿವಾರ್ಯತೆಯೂ ಹೊಸ ಶಕ್ತಿಯನ್ನು ಸಂಚ ಯಿಸಬಹುದು. ಭಯವೇ ಧೈರ್ಯವೂ ಆಗ ಬಹುದು. ಛಲವೇ ಯಶಸ್ಸನ್ನು ತಂದುಕೊಡಬಹುದು.

ಈ ಎಲ್ಲ ಅಂಶಗಳೂ ಬೆರೆತಾಗ ಅದು ವಾಸ್ತವಿಕ ಯಶೋಗಾಥೆಯಾಗುತ್ತದೆ. ಆಂಗ್ಲ ಪರಿಭಾಷೆಯಲ್ಲಿ ನಾವು ಹೇಳುವ success stories ಇತರರಿಗೂ ಸ್ಫೂರ್ತಿಯಾಗಿ ಒಟ್ಟು ಜೀವನಶೈಲಿಗೆ ಹೊಸ ಮೆರಗನ್ನು ತುಂಬಬಹುದು.

ಕಡು ಬಡತನದಲ್ಲಿ ಜನಿಸಿ, ಯಾವುದೇ ಸೌಕರ್ಯವಿಲ್ಲದೆ ಛಲವನ್ನೇ ಹಾಸುಹೊದ್ದು ಬದುಕಿನಲ್ಲಿ ಅತ್ಯದ್ಭುತ ಎಂಬ ಯಶಸ್ಸನ್ನು ಸಾಧಿಸಿದ ಅನೇಕಾನೇಕ ಮಂದಿ ಇದ್ದಾರೆ. ಅಂಗವೈಕಲ್ಯವನ್ನು ಮೀರಿ ನಿಂತು ಬದುಕಿನಲ್ಲಿ ಯಶಸ್ಸು ಸಾಧಿಸಿದ- ಸಾಧಿಸುತ್ತಿರುವ ಅನೇಕ ಯಶೋಗಾಥೆಗಳು ನಮ್ಮ ಎದುರಿನಲ್ಲಿದೆ.

ಆತ್ಮವಿಶ್ವಾಸದ ಬಲ
ಸಮಾಜದಲ್ಲಿ ವಿವಿಧ ರಂಗಗಳಲ್ಲಿ ಅಪೂರ್ವ ಯಶಸ್ಸು ಸಾಧಿಸಿದ ಬಹಳಷ್ಟು ನಿದರ್ಶನಗಳು ನಮ್ಮ ಮುಂದಿವೆ. ಅವುಗಳ ಪೈಕಿ ಸಾಂಕೇತಿಕವಾಗಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು.ಆ ಹುಡುಗನದ್ದು ಕಡು ಬಡತನದ ಕುಟುಂಬ. ಮನೆಯಲ್ಲಿ ಸಿಹಿತಿಂಡಿ ತಯಾರಿಸುವ ಕಾಯಕ. ಈ ಹುಡುಗ ತಲೆಯಲ್ಲಿ ತಿಂಡಿಯನ್ನು ಹೊತ್ತು ಅಂಗಡಿ ಅಂಗಡಿಗೆ ತಿರುಗಬೇಕು. ನಡುವೆ ಶಾಲೆ! ಈ ಹುಡುಗ ಶಾಲಾ ಬಿಡುವಿನಲ್ಲಿ ನಡೆಸಿದ ಕಾಯಕದಿಂದ ಆತನ ಮನೆಯವರ ತುತ್ತಿನಚೀಲ ತುಂಬಿತ್ತು. ಛಲ ಹಿಡಿದು ಆ ಹುಡುಗ ಉನ್ನತ ವಿದ್ಯಾಭ್ಯಾಸ ನಡೆಸಿದ. ಆದರೆ ಕುಟುಂಬದ ಪರಂಪರೆಯನ್ನೇ ಮುಂದುವರಿಸಲು ನಿರ್ಧರಿಸಿದ. ಬ್ಯಾಂಕ್‌ ಆತನ ನೆರವಿಗೆ ಬಂತು. ಆತನಿದ್ದ ಮಹಾನಗರದಲ್ಲಿ ಸಿಹಿ ತಿಂಡಿಯ ಮಳಿಗೆ ತೆರೆದ. ಸಿಹಿತಿಂಡಿ ಜತೆಗೆ ಖಾರ ಇತ್ಯಾದಿ ತಿಂಡಿಗಳೂ ಸೇರಿಕೊಂಡು ಅದಕ್ಕಾಗಿ ಸುಸಜ್ಜಿತವಾದ ಫ್ಯಾಕ್ಟರಿ ಸ್ಥಾಪಿಸಿದ. ಈಗ ಆತನ ಸಿಹಿತಿಂಡಿಗಳು ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ ಆಗಿದೆ. ವಯಸ್ಸು 50 ದಾಟುತ್ತಿದ್ದಂತೆಯೇ ಆತನ ಫ್ಯಾಕ್ಟರಿಯಲ್ಲೀಗ ಸುಮಾರು 200 ಮಂದಿ ಉದ್ಯೋಗಿಗಳಿದ್ದಾರೆ.

Advertisement

ಇದೊಂದು ಸಾಂಕೇತಿಕ ಪ್ರಕರಣ ಅಷ್ಟೆ. ಇದೇ ರೀತಿಯಲ್ಲಿ ಮನೆ ಮನೆಗಳಿಗೆ ಜವುಳಿಯನ್ನು ಮಾರಾಟ ಮಾಡಿ ಆ ಕ್ಷೇತ್ರದಲ್ಲಿ ಅಪೂರ್ವ ಯಶಸ್ಸು ಪಡೆದವರಿದ್ದಾರೆ. ಸಾವಿರಾರು ಮಂದಿಗೆ ಅವರು ಉದ್ಯೋಗದಾತರಾಗಿದ್ದಾರೆ. ಈ ಸಾಂಕೇತಿಕ ನಿದರ್ಶನವು ಇಂತಹ ಕೋಟ್ಯಂತರ ಸಾಧನೆಗಳನ್ನು ತೆರೆದಿಡುತ್ತದೆ.ಇನ್ನೊಂದು ಕುತೂಹಲದ ಕಥಾನಕ ಇಲ್ಲಿದೆ.

ಆಕೆ ಮದುವೆಯಾದ ತಿಂಗಳಲ್ಲೇ ಪತಿಯನ್ನು ಕಳೆದುಕೊಂಡಳು. ಆರ್ಥಿಕ ಶಕ್ತಿಯೂ ಇರಲಿಲ್ಲ. ಆದರೆ ಟೈಲರಿಂಗ್‌ನಲ್ಲಿ ಆಕೆ ನುರಿತವಳಾಗಿದ್ದಳು. ವಿಧವೆ ಪಟ್ಟಕಟ್ಟಿದವರ ಕುಹಕಿಗಳಿಗೆ ಆಕೆ ಗಮನಹರಿಸಲಿಲ್ಲ. ಪುಟ್ಟ ಮನೆಯಲ್ಲೇ ಹೊಲಿಗೆ ಕಾರ್ಯ ಆರಂಭಿಸಿದಳು. ಆಕೆಯ ನೈಪುಣ್ಯದಿಂದಾಗಿ ಯಶಸ್ಸು ಸಾಧಿಸಿದಳು. ಕಾಲಾನುಕಾಲಕ್ಕೆ ತಕ್ಕಂತೆ ಬದಲಾವಣೆಯಿಂದ, ಸ್ವಉದ್ಯೋಗ ಸಂಬಂಧಿತ ಆರ್ಥಿಕ ಚೈತನ್ಯದಿಂದ ವಿಸ್ತರಣೆ ನಡೆಸಿದಳು. ರೆಡಿಮೆಂಡ್‌ ಎಂಬ ವಿಶೇಷಣವೂ ಆಕೆಗೆ ಸಿದ್ಧಿಸಿತು. ಸ್ವಂತ ಮನೆ ಖರೀದಿಸಿದ್ದಾಳೆ. ಈಗ ಆರು ಮಂದಿ ಮಹಿಳೆಯರು ಆಕೆಯಲ್ಲಿ ಉದ್ಯೋಗದಲ್ಲಿದ್ದಾರೆ. ದುಡಿಮೆಯಲ್ಲಿಯೇ ಆಕೆ ತನ್ನ ದುಃಖ ಮರೆತು ಸ್ವಾವಲಂಬಿಯಾಗಿದ್ದಾಳೆ. ಪ್ರಶಸ್ತಿಗಳೂ ಆಕೆಗೆ ಲಭಿಸಿದೆ. ಇಂತಹ ಸಹಸ್ರಾರು ಪ್ರಕರಣಗಳನ್ನು ನಮ್ಮ ಅಂದರೆ ಭಾರತೀಯ ಪರಂಪರೆಯಲ್ಲಿ ಗಮನಿಸ ಬಹುದು. ಇದು ಬಡ-ಮಧ್ಯಮ ವರ್ಗಕ್ಕೆ ಸಂಬಂಧಿಸಿದ್ದಾದರೆ, ಇದೇ ರೀತಿಯಲ್ಲಿ ಬೃಹತ್‌ ಸ್ವರೂಪದ ಔದ್ಯಮಿಕ ಮತ್ತಿತರ ರಂಗಗಳಲ್ಲಿ ಯಶಸ್ಸು ಸಾಧಿಸಿದವರನೇಕ.

ಅಪೂರ್ವ ಸಾಧನೆ
ಇದೊಂದು ವಿಶಿಷ್ಟವಾದ ನಿದರ್ಶನ. ಆ ಹುಡುಗ ಸುಮಾರು 60 ವರ್ಷಗಳ ಹಿಂದೆ ಬರಿಗಾಲಿನಲ್ಲಿ ಮುಂಬಯಿಗೆ ತೆರಳಿದ್ದ. ಆಗ 10ರ ಹರೆಯದ ಈ ಹುಡುಗ ಅಲ್ಲಿ ಹೊಟೇಲ್‌ನಲ್ಲಿ ದುಡಿಯಬೇಕಾದ ಬಡತನ. ಹೊಟೇಲ್‌ನ ಮಾಲಕರು ತುಂಬಾ ಒಳ್ಳೆಯವರು. ಹುಡುಗನ ರಾತ್ರಿ ಶಾಲೆಯ ಓದುವಿಕೆಗೆ ಬೆಂಬಲ ನೀಡಿದರು. ಈ ಹುಡುಗ ತರುಣನಾಗುತ್ತಾ ಪದವೀಧರನಾದ. ಹೊಟೇಲ್‌ನ ಮ್ಯಾನೇಜರ್‌ ಆದ. ಕೃತಜ್ಞತಾಪೂರ್ವಕವಾಗಿ ಮಾಲಕರ ಜತೆಯಲ್ಲೇ ಹೊಸ ಜವಾಬ್ದಾರಿ ನಿರ್ವಹಿ ಸಿದ. ಮಾಲಕರು ಈಗ ಆ ಹೊಟೇಲನ್ನು ಆತನಿಗೇ ನೀಡಿದ್ದಾರೆ. 75 ಮಂದಿ ಉದ್ಯೋಗಿಗಳಾಗಿದ್ದಾರೆ.

ಈ ರೀತಿಯಲ್ಲಿ ಯಶಸ್ಸನ್ನು ಪಡೆದವರ ನಿದರ್ಶನವಿದು. ಅಂದರೆ ಸಾಧಿಸುವ ಹಾದಿಯಲ್ಲಿ ಬಡತನ ಅಡ್ಡಿಯಾಗುವುದಿಲ್ಲ. ಸಾಧಿಸುವ ಛಲವಿರ ಬೇಕು. ಡಾ| ಸರ್‌. ಎಂ.ವಿಶ್ವೇಶ್ವರಯ್ಯ ಅವರ ಅತ್ಯ ಪೂರ್ವ ಜೀವನ ಸಾಧನ ಕಥಾನಕ ನಮ್ಮೆದುರಿಗಿದೆ.

ಸರ್ವರಿಗೂ ಆದರ್ಶ
ಇಂತಹ ಸಾಧಕರು ಸರ್ವರಿಗೂ ಆದರ್ಶವಾಗು ತ್ತಾರೆ. ಕ್ರೀಡೆ, ಸಿನೆಮಾ, ಲಲಿತಕಲೆ, ಸಂಗೀತ, ಜನ ಪದ, ಕೃಷಿ, ಉದ್ಯಮ ಮುಂತಾದ ಎಲ್ಲ ರಂಗಗಳಲ್ಲೂ ಈ ಸಾಧಕರು ಪ್ರಶಂಸನೀಯರು. ವೈದ್ಯಕೀಯ, ಎಂಜಿನಿಯರಿಂಗ್‌ ಸಹಿತ ಎಲ್ಲ ವೃತ್ತಿಪರ ಕ್ಷೇತ್ರ ಗಳಲ್ಲೂ ಇದೇ ರೀತಿಯ ಸಾಧಕರು ಇರುತ್ತಾರೆ.ವ್ಯವಹಾರೋದ್ಯಮ ಕ್ಷೇತ್ರಗಳಲ್ಲಿನ ಬಹು ಸಾಧಕರು ಈ ಯಶೋಗಾಥೆ ಎಂಬ ಮಾತಿಗೆ ಅನ್ವರ್ಥರಾಗಿರುತ್ತಾರೆ. ಅವರಲ್ಲಿ ಮೂರು ವಿಭಾಗ ಗಳನ್ನಾಗಿ ವಿಶ್ಲೇಷಿಸಬಹುದು.
1) ವಂಶಪಾರಂಪರಿಕವಾಗಿ ಬಂದ ಸಣ್ಣ ಉದ್ಯಮ ಅಥವಾ ವ್ಯವಹಾರವನ್ನು ಸ್ವ ಸಾಮರ್ಥ್ಯದಿಂದ ವಿಸ್ತರಿಸಿ ಯಶಸ್ವಿಯಾದವರು.
2) ಸ್ವ ನೆಲೆಯಲ್ಲೇ ವ್ಯವಹಾರ, ಉದ್ಯಮ ಸ್ಥಾಪಿಸಿ ಯಶಸ್ವಿಯಾದವರು.
3) ಅಕಸ್ಮತ್ತಾಗಿ ಈ ಕ್ಷೇತ್ರಕ್ಕೆ ಬಂದು ಯಶಸ್ವಿಯಾದವರು.
ಏನಿದ್ದರೂ, ಇಲ್ಲಿನ ಗಮನಾರ್ಹ ಸಂಗತಿ ಅಂದರೆ ಅವರ ಯಶಸ್ಸು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿಯ ಉನ್ನತ ಪರಂಪರೆ ಇದೆ ಅನ್ನುವುದು ಅಭಿಮಾನದ ಸಂಗತಿ. ಕೃಷಿಕಾರ್ಯದಲ್ಲೂ ಜಿಲ್ಲೆ ತನ್ನದೇ ಆದ ವಿಶೇಷಗಳನ್ನು ಹೊಂದಿದೆ.ಅದಕ್ಕೆ ಕಾರಣ ಆ ಕ್ಷೇತ್ರದ ಯಶೋಗಾಥೆಗಳು. ಇಲ್ಲಿನ ಪರಿಸರವೂ ಈ ಎಲ್ಲ ಸಾಧನೆಗಳಿಗೆ ಪೂರಕವಾಗಿರುವುದು ಗಮನಾರ್ಹ. ಈ ಸಾಧನೆಯಿಂದಲೇ ಜಿಲ್ಲೆ ಪ್ರಸಿದ್ಧಿ ಪಡೆದಿದೆ.

ಅಂದ ಹಾಗೆ: ಯಶಸ್ಸನ್ನು ಸವಿಯುವುದೆಂದರೆ, ಬುಧವಾರ ಚಂದ್ರಯಾನವನ್ನು ಪ್ರತೀ ಭಾರತೀಯ ತನ್ನದೇ ಯಾನದಂತೆ ಸಂಭ್ರಮಿಸಿದ ಹಾಗೆ!

-ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next