Advertisement

CBI ಕೋರ್ಟ್‌ ದೃಶ್ಯ ಸೃಷ್ಟಿಸಿ ವೈದ್ಯರಿಗೆ ಪಂಗನಾಮ!; ಘಟನೆಯೇನು?

12:09 AM Apr 02, 2024 | Team Udayavani |

ಪುತ್ತೂರು: ದೂರವಾಣಿ ಕರೆ ಮಾಡಿ ಪುತ್ತೂರಿನ ಆಸ್ಪತ್ರೆಯ ವೈದ್ಯರೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ ಪ್ರಕ ರಣದಲ್ಲಿ ವಂಚಕರು ಸಿಬಿಐ ಕೋರ್ಟ್‌ ದೃಶ್ಯ ಸೃಷ್ಟಿಸಿ ನಂಬಿಸಿ ಕೃತ್ಯ ಎಸಗಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ಬಗ್ಗೆ ದೂರು ನೀಡಿರುವ ವೈದ್ಯರೇ ಬಹಿರಂಗಪಡಿಸಿದ್ದಾರೆ.
ಈ ವೈದ್ಯರಿಗೆ ಮಾ. 28ರಂದು ಬೆಳಗ್ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಇದನ್ನು ನಂಬಿ ವೈದ್ಯರು 16 ಲಕ್ಷ ರೂ. ಪಾವತಿಸಿದ್ದರು.

Advertisement

ದಾಖಲೆ ಕಳುಹಿಸಿದರು!
ತಾವು ಸಿಬಿಐ ಪೊಲೀಸರೆಂದು ವೈದ್ಯರಿಗೆ ನಂಬಿಕೆ ಹುಟ್ಟುವಂತೆ ಮಾಡಲು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ವೈದ್ಯರ ವ್ಯಾಟ್ಸ್‌ಅಪ್‌ಗೆ ಅವರ ಪಾನ್‌, ಆಧಾರ್‌ ಮತ್ತಿತರ ದಾಖಲೆಗಳ ಫೋಟೋ, ಆಸ್ಪತ್ರೆಯ ಚಿತ್ರಗಳನ್ನು ಕಳುಹಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೂಡ ರವಾನಿಸಿದ್ದ. ಹೀಗಾಗಿ ತಾನು ಆತಂಕಕ್ಕೆ ಒಳಗಾಗಿ ಹಣ ಪಾವತಿಸಿದೆ ಎಂಬ ಅಂಶವನ್ನು ವೈದ್ಯರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ನಂಬಿಕೆ ಹುಟ್ಟಿಸಿದ್ದರು!
ಅಪರಿಚಿತರು ವೈದ್ಯರಿಗೆ ಅರಿವಿಗೆ ಬಾರದ ಹಾಗೆ ಅವರ ಪೋನ್‌ ಕರೆಗಳನ್ನು ಬ್ಲಾಕ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೆಲಸ ಮಾಡುವ ಆಸ್ಪತ್ರೆಯ ಇತರ ಕೆಲವು ವೈದ್ಯರು ಅವರಿಗೆ ಕರೆ ಮಾಡಿದಾಗ “ನಾಟ್‌ ರೀಚಬಲ್‌’, “ಬ್ಯುಸಿ’ ಮೊದಲಾದ ಸಂದೇಶ ಬರುತ್ತಿತ್ತು ಎನ್ನಲಾಗಿದೆ. ಒಟ್ಟು ಅರ್ಧ ತಾಸಿನೊಳಗೆ ಮಾತುಕತೆ ನಡೆದು ವೈದ್ಯರು ಹಣ ಪಾವತಿಸಿಯೂ ಆಗಿತ್ತು.

ಎರಡನೇ ಬಾರಿಗೆ ಹಣದ ಬೇಡಿಕೆ ಬಂದಾಗ ವೈದ್ಯರು ತನ್ನ ಆಪ್ತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದೊಂದು ವಂಚಕರ ಜಾಲ ಆಗಿರಬಹುದು ಎಂದು ಅವರು ಸಲಹೆ ನೀಡಿದ್ದರೂ ಅದಾಗಲೇ ವೈದ್ಯರು ಹಣ ಪಾವತಿಸಿ ಆಗಿತ್ತು. ಜತೆಗೆ ಅಪರಿಚಿತ ವ್ಯಕ್ತಿಯು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ ಎಲ್ಲ ದಾಖಲೆಪತ್ರಗಳು ಕೂಡ “ಡಿಲೀಟ್‌ ಫಾರ್‌ ಎವರಿ ವನ್‌’ ಆಗಿದ್ದವು.

ಘಟನೆಯೇನು?
ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿದ್ದ ವಂಚಕರು
ತಾವು ದಿಲ್ಲಿ ಪೊಲೀಸರು ಎಂದು ನಂಬಿಸಿ 16.5 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ
ನಿಮ್ಮ ಮೇಲೆ ದಿಲ್ಲಿಯಲ್ಲಿ ಮಾದಕ ವಸ್ತು, ಅಕ್ರಮ ಹಣ, ಮಾನವ ಕಳ್ಳಸಾಗಾಟ ಕುರಿತು ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದರು
ಬಂಧಿಸುವಂತೆ ವಾರಂಟ್‌ ಕೂಡ ಆಗಿದೆ ಎಂದು ಹೇಳಿದ್ದರು

Advertisement

ಕೋರ್ಟ್‌ ದೃಶ್ಯ ತೋರಿಸಿದ್ದರು!
ನೀವು ದಿಲ್ಲಿಯ ಸಿಬಿಐ ಕೋರ್ಟ್‌ಗೆ ಹಾಜ ರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್‌ಲೈನ್‌ ಮೂಲಕ ಕೇಸ್‌ ನಡೆಸುತ್ತೇವೆ ಎಂದು ವಂಚಕ ಹೇಳಿದ್ದ. ಬಳಿಕ ವೀಡಿಯೋ ಕರೆ ಮಾಡಿ ಸಿಬಿಐ ಪೊಲೀಸರನ್ನು ಹೋಲುವ ವ್ಯಕ್ತಿಗಳನ್ನು ತೋರಿಸಿದ್ದ. ವೀಡಿಯೋ ಕರೆ ಮಾಡಿ ನ್ಯಾಯಾಧೀಶರು ಕುಳಿತಿರುವ ಕೋರ್ಟ್‌ ಸಭಾಂಗಣದ ದೃಶ್ಯಗಳನ್ನು ತೋರಿಸಿದ್ದ. ಇದ ರಿಂದ ನಿಜ ಇರಬಹುದು ಎಂದು ವೈದ್ಯರು ನಂಬಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next