ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರೈಸಿಂಗ್ ಸ್ಟಾರ್ಸ್ ಆರ್ಟ್ ಆ್ಯಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಸಂಗೀತ, ನೃತ್ಯ, ಜಾನಪದ ಹಾಗೂ ವೈವಿಧ್ಯಮಯ ಕಲಾ ಪ್ರಕಾರಗಳ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾಮೇಳ ಕಾರ್ಯಕ್ರಮವನ್ನು ಕವಿಸಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ನಮ್ಮ ನಾಡಿನ ಕಲೆಗಳು ಜನಪ್ರಿಯವಾಗಿವೆ. ಕಲೆಗಳನ್ನು ಆರಾಧಿಸುವ ಹಲವಾರು ಮಹನೀಯರು ನಮ್ಮ ಜಿಲ್ಲೆಯ ಮೂಲಕ ಪ್ರಸಿದ್ಧರಾಗಿದ್ದಾರೆ. ನಾಡಿನ ಯುವ ಜನತೆಗೆ ದೇಶಿಯ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುಚಟಿಕೆಗಳ ಕುರಿತು ಅರಿವು ಮೂಡಿಸುವುದು ಅವಶ್ಯವಿದೆ.
ರೈಸಿಂಗ್ ಸ್ಟಾರ್ಸ್ ಸಂಸ್ಥೆಗೆ ಹುಡಾದಿಂದ ಮಂಜೂರಾದ ಸಿಎ ನಿವೇಶನದಲ್ಲಿ ಸುಸಜ್ಜಿತ ಕಲಾ ತರಬೇತಿ ಹಾಗೂ ಪ್ರದರ್ಶನಾತ್ಮಕ ಕಲಾ ಕೇಂದ್ರ ನಿರ್ಮಿಸಲು ಪಾಲಿಕೆ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಧಾರವಾಡ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ, ಕವಿವಿ ಸಿಂಡಿಕೇಟ್ ಸದಸ್ಯ ಕಲ್ಮೇಶ ಹಾವೇರಿಪೇಟ್ ಮಾತನಾಡಿದರು. ಬಸವರಾಜ ಮಲಕಾರಿ ಅಧ್ಯಕ್ಷತೆ ವಹಿಸಿದ್ದರು. ಅಮರ ಕಾಳೆ, ಹಾವೇರಿ ಜಿಲ್ಲೆಯ ಸ್ಯಾಕ್ಸೋಪೋನ್ ವಾದಕ ಬಸವರಾಜ ಸಾವಕ್ಕನವರ, ವಿದುಷಿ ವಿಜೇತಾ ವೆರ್ಣೇಕರ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.
ಡಾ| ಪ್ರಕಾಶ ಮಲ್ಲಿಗವಾಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಜಯ ಕುಮಾರ ಬಿರಾದಾರ ನಿರೂಪಿಸಿದರು. ದೇವರಾಜ ಲಮಾಣಿ ವಂದಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾ ತಂಡಗಳಿಂದ ನೃತ್ಯ, ಗಾಯನ, ಜಾನಪದ ಹಾಗೂ ವೈವಿಧ್ಯಮಯ ಕಲಾ ಪ್ರದರ್ಶನಗಳು ಜರುಗಿದವು.