Advertisement

ಬಲವಾದ ಸಾಕ್ಷಿಯೊಂದಿಗೆ ಸಂಶೋಧನಾ ಕೃತಿ ರಚಿಸಿ

11:49 AM Jun 18, 2018 | |

ಬೆಂಗಳೂರು: ಸಂಶೋಧನಾ ಪ್ರಬಂಧವು ಆಧಾರ ಹಾಗೂ ಸತ್ಯನಿಷ್ಠೆಯ ಅಂಶಗಳನ್ನು ಒಳಗೊಂಡಾಗ ಮಾತ್ರ ಚರಿತ್ರೆಯಾಗಲು ಸಾಧ್ಯ ಎಂದು ಪುರಾತತ್ವ ಶಾಸ್ತ್ರಜ್ಞ ಡಾ.ಎಸ್‌.ನಾಗರಾಜು ಹೇಳಿದ್ದಾರೆ.

Advertisement

ನಗರದ ಕನ್ನಡ ಸಾಹಿತ್ಯ ಪರಿಷತ್‌ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ “ಚಿದಾನಂದ ಪ್ರಶಸ್ತಿ – 2018′ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕಿ ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಯಾವುದೇ ವಿಷಯದ ಕುರಿತು ಸಂಶೋಧನ ಕೃತಿ ಅಥವಾ ಲೇಖನ ಬರೆಯುವಾಗ ಅದರ ಹಿಂದೆ ಒಂದು ಬಲವಾದ ಸಾಕ್ಷಿ ಇರಬೇಕು. ಆಗ ಮಾತ್ರ ಓದುಗರಲ್ಲಿ ಕೃತಿಯ ಬಗ್ಗೆ ಆಸಕ್ತಿ ಮೂಡುತ್ತದೆ. ಆದರೆ, ಇಂದು ಸಂಶೋಧಕರು ದಾಖಲೆಗಳಿಲ್ಲದ ಮಾಹಿತಿಗಳನ್ನು ತಮ್ಮ ಪ್ರಬಂಧಗಳಲ್ಲಿ ಉಲ್ಲೇಖೀಸುತ್ತಿದ್ದು, ಇದರಿಂದ ಬರವಣಿಗೆ ಸತ್ವ ಕಳೆದುಕೊಳ್ಳುತ್ತಿದೆ ಎಂದರು.

ಯಾವುದೇ ವಿಚಾರದ ಕುರಿತು ಸಂಶೋಧನೆ ಎಷ್ಟು ಮುಖ್ಯವೋ ಅದರ ದಾಖಲೀಕರಣವೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಧ್ಯಕಾಲಿನ ಕರ್ನಾಟಕ ಮತ್ತು ಭಾರತಕ್ಕೆ ಸಂಬಂಧಿಸಿದ ಇತಿಹಾಸ ಹಾಗೂ ಸಾಂಸ್ಕೃತಿಕ ಅಂಶಗಳ ಕುರಿತ ವಿವರಗಳನ್ನು ಚಿತ್ರಗಳ ಸಹಿತ ಸಂಶೋಧನೆ ನಡೆಸಿ ಅದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಅಂತರ್ಜಾಲದ ಮೂಲಕ ಜನರಿಗೆ ತಲುಪುವಂತೆ ಸಂಶೋಧಕರಾದ ಕೃಷ್ಣಾನಂದ ಕಾಮತ್‌ ದಂಪತಿ ಮಾಡಿದ್ದಾರೆ.

ಇನ್ನು ಜ್ಯೋತ್ಸ್ನಾಕೃಷ್ಣಾನಂದ ಕಾಮತ್‌ ಅವರು ಸಾಮಾಜಿಕ ಇತಿಹಾಸದ ಹಲವು ಮಗ್ಗಲುಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಸಂಶೋಧಕಿಯಾಋಗಿದ್ದು, ಅವರ ಬರಹದಲ್ಲಿ ಎಲ್ಲಿಯೂ ತಪ್ಪು ಹಾಗೂ ಊಹಾಪೋಹಗಳಿಗೆ ಅವಕಾಶವಿಲ್ಲ. ಅವರು ಸತ್ಯನಿಷ್ಠೆ ಮಾಹಿತಿಯನ್ನಷ್ಟೇ ಆಧರಿಸಿ ಕೃತಿಗಳನ್ನು ಬರೆಯುತ್ತಾರೆ ಎಂದು ಪ್ರಶಂಸಿಸಿದರು.

Advertisement

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಆರ್‌.ಶೇಷಶಾಸ್ತ್ರಿ ಮಾತನಾಡಿ, ಜ್ಯೋತ್ಸ್ನಾಅವರು ಕನ್ನಡ, ಇಂಗ್ಲಿಷ್‌ ಹಾಗೂ ಕೊಂಕಣಿ ಭಾಷೆಗಳಲ್ಲಿ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡದ ಅನೇಕ ಮಹಿಳಾ ಸಂಶೋಧಕರಿಗೆ ಅವರು ಮಾದರಿ ಎಂದರು.
ಸಂಶೋಧಕ  ಡಾ.ಎಂ. ಚಿದಾನಂದ ಮೂರ್ತಿ, ವಿಶಾಲಾಕ್ಷಿ ಚಿದಾನಂದ ಮೂರ್ತಿ, ಸಮಿತಿ ಅಧ್ಯಕ್ಷ ಡಾ. ಸಿ.ಯು.ಮಂಜುನಾಥ್‌, ಕಾರ್ಯದರ್ಶಿ ಎಸ್‌.ಎಲ್‌.ಶ್ರೀನಿವಾಸ ಮೂರ್ತಿ, ಖಜಾಂಚಿ ಶಿವಕುಮಾರ್‌ ಉಪಸ್ಥಿತರಿದ್ದರು.

ಇಂದು ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿಗಳನ್ನೇ ಸತ್ಯ ಹಾಗೂ ನಿಖರ ದತ್ತಾಂಶಗಳು ಎಂದು ಜನರಿಗೆ ನಂಬಿಸಲಾತ್ತಿದೆ. ಅಲ್ಲದೇ ಕೃತಿಚೌರ್ಯವು ಹೆಚ್ಚಾಗುತ್ತಿದ್ದು, ಇತರರು ಬರೆದ ಕೃತಿ ಹಾಗೂ ಬರಹಗಳಿಗೆ ಕೆಲವರು ತಮ್ಮ ಹೆಸರುಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಇಂತಹ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.
-ಡಾ.ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್‌, ಹಿರಿಯ ಸಂಶೋಧಕಿ

Advertisement

Udayavani is now on Telegram. Click here to join our channel and stay updated with the latest news.

Next