Advertisement
“ಚಿತ್ರದ ಫೋಟೋಗಳು ರೆಡಿ ಇತ್ತು. ಜೊತೆಗೆ ರಾಜ್ಯದಲ್ಲಿ ಪೊಲಿಟಿಕಲ್ ವಾತಾವರಣ ಬೇರೆ ಇತ್ತು. ಜನರಿಗೆ ಚಿತ್ರದ ಮೂಡ್ ಗೊತ್ತಾಗಲಿ ಅಂತ ಕೆಲವು ಫೋಟೋಗಳನ್ನ ಬಿಟ್ಟೆ. ಇದೊಂದು ತುಂಬಾ ರೆಸ್ಪಾನ್ಸಿಬಲ್ ಚಿತ್ರ. ಈಗಾಗಲೇ 50 ಪರ್ಸೆಂಟ್ ಚಿತ್ರೀಕರಣ ಆಗಿದೆ. ನವೆಂಬರ್ ಒಂದಕ್ಕೆ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಹಾಗಂತ, ಈ ಚಿತ್ರಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಇದು ಪೊಲಿಟಿಕಲ್ ಸಿನಿಮಾ ಅಲ್ಲ. ಒಂದಿಷ್ಟು ಪೊಲಿಟಿಕಲ್ ಪಾತ್ರಗಳಿರುತ್ತವೆ. ಇದೊಂದು ತಂದೆ-ಮಗಳ ಕಥೆ. ಚಿತ್ರದಲ್ಲಿ ನಾನು ಕ್ರಿಮಿನಲ್ ಲಾಯರ್ ಆಗಿರುತ್ತೀನಿ. ಅಲ್ಲಿ ಬೇರೆ ಪಾತ್ರಗಳು ಬಂದು ಹೋಗುತ್ತವೆ’ ಎನ್ನುತ್ತಾರೆ ರವಿಚಂದ್ರನ್. “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ಒಂದೊಳ್ಳೆಯ ಮೆಸೇಜ್ ಇದೆ ಎನ್ನುತ್ತಾರೆ ರವಿಚಂದ್ರನ್.
Related Articles
Advertisement
ವಿಲನ್ ಪಾತ್ರ ಮಾಡು ಎಂದರೂ ನಾನು ರೆಡಿ: ಇನ್ನು ಅವರು ಶ್ರೇಯಸ್ ಅಭಿನಯದ “ಪಡ್ಡೆಹುಲಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. “ಕೆ. ಮಂಜು ನಮ್ಮ ರೆಗ್ಯುಲರ್ ನಿರ್ಮಾಪಕರು. ಅವರು ಬಂದು ಚಿತ್ರದಲ್ಲಿ ತಂದೆ ಪಾತ್ರ ಮಾಡಿ ಎಂದರು. ಬಂದಿದ್ದೀನಿ. ಮಾಡ್ತಿದ್ದೀನಿ. ಮಂಜು ಮಗನಿಗಾಗಿ ಮಾಡ್ತಿದ್ದೀನಿ. ಒಳ್ಳೇದಾದರೆ ಆಗಲಿ ಅಷ್ಟೇ’ ಎನ್ನುತ್ತಾರೆ ಅವರು. ಇದೊಂದೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಅವರು ಹಲವು ಚಿತ್ರಗಳಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಾನೀಗ ತಂದೆಯಾಗಿ ಕಾಣಿಸ್ತೀನಿ. ಎಷ್ಟೋ ಜನ ಬಂದು ಅವರಿಗೊಂದು ಸಪೋರ್ಟ್ ಆಗ್ತಿàನಿ ಅಂತ ಕರೀತಾರೆ. ನನ್ನ ಬಳಸಿಕೊಂಡರೆ ಉಪಯೋಗ ಆಗತ್ತೆ, ಬಳಸಿಕೊಳ್ಳದಿದ್ದರೆ ಇಲ್ಲ. ತಂದೆ ಅಂದರೆ ಅಶ್ವತ್ಥ್ ಅವರು ಮಾಡುತ್ತಿದ್ದ ಪಾತ್ರಗಳ ಸ್ಪಾಟ್‌ಗೆ ಹಾಕಿದರೆ ಪ್ರಯೋಜನವಿಲ್ಲ. ನನ್ನದೇ ಆದಂತಹ ಒಂದು ಇಮೇಜ್ ಇದೆ. ಅದನ್ನು ಇದಕ್ಕೆ ಬಳಸಿಕೊಳ್ಳೋದರ ಜೊತೆಗೆ, ಒಂದಿಷ್ಟು ಒಳ್ಳೆಯ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡಿದರೆ, ಹೆಲ್ಪ್ ಆಗುತ್ತೆ. ನನಗೆ ಅದೇ ಮಾಡಬೇಕು, ಇದೇ ಮಾಡಬೇಕು ಅಂತೇನಿಲ್ಲ. ನಾನು ಏನು ಕೊಟ್ಟರೂ ಮಾಡೋಕೆ ರೆಡಿಯಾಗಿದ್ದೀನಿ. ತಾತನ ಪಾತ್ರ ಕೊಟ್ಟರೂ ಓಕೆ. ನಾನು ಯಾವುದೇ ಕಟ್ಟುಪಾಡುಗಳನ್ನ ಹಾಕಿಕೊಂಡಿಲ್ಲ. ನಮ್ಮ ಕೈಲೂ ಏನೇನು ಮಾಡೋಕೆ ಆಗುತ್ತದೆ, ಅದನ್ನೆಲ್ಲಾ ಮಾಡೋಣ. ಈ ತರಹ ಎಲ್ಲರೂ ಮುಂದೆ ಬರಲ್ಲ. ಆದರೆ, ನಾನು ಒಬ್ಬ ಕಲಾವಿದ. ಒಬ್ಬ ಕಲಾವಿದ ಆದ್ಮೇಲೆ, ಅದು ಮಾಡಲ್ಲ, ಇದು ಮಾಡಲ್ಲ ಅನ್ನಬಾರದು. ನಾಳೆ ಯಾರಾದರೂ ಬಂದು ವಿಲನ್ ಪಾತ್ರ ಮಾಡು ಎಂದರೂ ನಾನು ರೆಡಿ. ಹೀರೋ ಇಮೇಜ್‌ಗೆ ನನ್ನ ಚಿತ್ರಗಳು ಇದ್ದೇ ಇದೆ. ಅಲ್ಲಿ ನನ್ನಿಷ್ಟದ ಪ್ರಕಾರ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ ರವಿಚಂದ್ರನ್.
ಬೇರೆ ಚಿತ್ರಗಳಲ್ಲಿ ತಾವೊಬ್ಬ ವಿಧೇಯ ನಟ ಮಾತ್ರ ಎನ್ನುತ್ತಾರೆ ರವಿಚಂದ್ರನ್. “ನಾನು ಬೇರೆಯವರ ಸಿನಿಮಾಗಳಲ್ಲಿ ನಟಿಸುವಾಗ, ಏನು ಮಾತಾಡಿದರೂ ತಪ್ಪಾಗಿ ಕಾಣಿಸಬಹುದು. ಬೇರೆ ತರಹವೂ ಕಾಣಿಸಬಹುದು. ಆದರೆ, ಇಲ್ಲಿ ನಾನೊಬ್ಬ ನಟ ಅಷ್ಟೇ. Involvement ಇರುವುದಿಲ್ಲ. Interference ಅಂತೂ ಇರುವುದೇ ಇಲ್ಲ. ಎಲ್ಲವೂ ಅವರಿಗೆ ಬಿಟ್ಟಿದ್ದು. ಒಬ್ಬ ವಿಧೇಯ ನಟನ ತರಹ ಬರುತ್ತೀನಿ. ಪಾತ್ರದಲ್ಲಿ Involvement ಇರುತ್ತೆ. ಕಥೆಯಲ್ಲಿ ಇರಲ್ಲ. ಬೊಟ್ಟು ಇಡು ಅಂದ್ರೆ ಇಡ್ತೀನಿ. ತೆಗಿ ಅಂದರೆ ತೆಗೀತೀನಿ. ಅವರೇನಂದುಕೊಂಡಿದ್ದಾರೋ, ಅದನ್ನು ಮಾಡೋದಷ್ಟೇ ಕೆಲಸ. ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಮೆಷೀನ್ ತರಹ’ ಎಂದು ನಗುತ್ತಾರೆ ಅವರು.
ಆದರೂ ಎಲ್ಲೋ ಒಂದು ಕಡೆ ತಪ್ಪಾದಾಗ, ತಿದ್ದಬೇಕು ಎನಿಸುವುದಿಲ್ಲವಾ? “ಸಿನಿಮಾ ಚೆನ್ನಾಗಿ ಮಾಡಲಿಲ್ಲ ಎಂದರೆ ನನಗೆ ಕಷ್ಟವೇ. ಎಲ್ಲೋ ತಪ್ಪಾಗುತ್ತಿದೆ ಅಂತ ಗೊತ್ತಿರುತ್ತದೆ. ಬಟ್ ಮಾತಾಡುವ ಹಾಗಿಲ್ಲ. ಮಾತಾಡಿದರೆ, ಅದನ್ನು ಅರ್ಥವಾಗೋಕಿಂತ ಬೇಜಾರ್ ಮಾಡಿಕೊಳ್ಳುವುದೇ ಹೆಚ್ಚು. ನನಗೆ Involvement, ಅವರಿಗೆ Interference ಆಗುತ್ತದೆ. ದುಡ್ಡು ಹಾಕೋನು ನಾನು, ಸಿನಿಮಾ ತೆಗೆಯೋನು ನಾನು ಅಂತ ಅವರಿಗೂ ಜವಾಬ್ದಾರಿ ಇರುತ್ತೆ. ಅದರ ಮಧ್ಯೆ ಹೋದರೆ, ಗೊಂದಲ ಆಗುತ್ತೆ. ಅದರ ಬದಲು ಅವರಿಗೆ ಇಷ್ಟವಾಗುವ ಹಾಗೆ ಬಿಟ್ಟುಬಿಡೋದು ಬೆಸ್ಟು. ಅವರ ದುಡ್ಡಿಗೆ, ಅವರ ಪ್ರಾಡಕ್ಟ್ಗೆ ಅವರೇ ಜವಾಬ್ದಾರಿ. ಹೀಗಿರುವಾಗ ನಾನು ಮಧ್ಯೆ ಹೋದರೆ, Interference ಅಂತ ಆಗುತ್ತೆ. ಹಾಗಾಗಿ ನಾನು ಕೆಲಸ ಮಾಡಿ ಬರ್ತೀನಿ’ ಎಂದು ಮಾತು ಮುಗಿಸುತ್ತಾರೆ ರವಿಚಂದ್ರನ್.
ಚೇತನ್ ನಾಡಿಗೇರ್