Advertisement

ಸಿರಿಧಾನ್ಯ ಬೇಕರಿ, ಆರೋಗ್ಯಕ್ಕೆ ಇವೇ ಬೇಕುರಿ!

04:42 PM Jun 03, 2017 | Team Udayavani |

 ಯಾವುದು ನಾಲಗೆಗೆ ಹಿತವೋ ಅದು ದೇಹಕ್ಕೆ ಮಾರಕ, ಯಾವುದು ನಾಲಗೆಗೆ ರುಚಿಸುವುದಿಲ್ಲವೋ ಅದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಿಯಮ ಅನ್ವಯವಾಗದಂಥ ಕೆಫೆಯೊಂದು ನಗರದಲ್ಲಿ ಇತ್ತೀಚಿಗಷ್ಟೆ ಪ್ರಾರಂಭಗೊಂಡಿದೆ. ನೋ ಮೈದಾ, ನೋ ಶುಗರ್‌ ಪರಿಕಲ್ಪನೆಯಲ್ಲಿ ತೆರೆದಿರುವ ಅದರ ಹೆಸರು “ಹನಿ ಕೆಫೆ’. ಇಲ್ಲಿ ಸಿಗುವುದೆಲ್ಲವೂ ನಾಲಗೆಗೂ, ಆರೋಗ್ಯಕ್ಕೂ ಹಿತಕರ.

Advertisement

ಕೇಕ್‌, ಪೇಸ್ಟ್ರಿ, ಪಿಜ್ಜಾ, ಬರ್ಗರ್‌, ವೆಜ್‌ ರೋಲ್ಸ್‌… ಇದನ್ನೆಲ್ಲಾ ಕೇಳಿ ನಿಮ್ಮಲ್ಲಿ ಹಲವರಿಗೆ ಬಾಯಲ್ಲಿ ನೀರು ಬಂದಿರಲೇಬೇಕು. ಈ ನಾಲಗೆಗೆ ರುಚಿಕರವೆನಿಸುವ ತಿಂಡಿ ತಿನಿಸುಗಳನ್ನು ತಿನ್ನುವ ಮಂದಿ ತಮಗೆ ತಾವೇ ಒಂದು ಅಲಿಖೀತ ಶರತ್ತೂಂದನ್ನು ಸಾಮಾನ್ಯವಾಗಿ ಹಾಕಿಕೊಂಡಿರುತ್ತಾರೆ. ಅದೇನಪ್ಪಾ ಅಂದರೆ ನಾಲಗೆಗೆ ಹಿತವೆನಿಸುವ ತಿಂಡಿಯನ್ನು ಹೇಗೆ ತಯಾರಿಸುತ್ತಾರೆ, ಏನೆಲ್ಲಾ ಸಾಮಗ್ರಿಗಳನ್ನು ಬಳಸಿ ತಯಾರಿಸುತ್ತಾರೆ, ಅದು ಆರೋಗ್ಯಕ್ಕೆ ಒಳ್ಳೆಯದೇ, ಕೆಟ್ಟದ್ದೇ? ಎಂಬಿತ್ಯಾದಿ ಚಿಂತನೆಗಳನ್ನು ಇದೊಂದು ಸಲಕ್ಕೆ ಪಕ್ಕಕ್ಕೆ ಇಡಬೇಕೆಂಬುದೇ ಆ ಶರತ್ತು. ಆಮೇಲೆಯೇ ಅವರು ನಿಶ್ಚಿಂತರಾಗಿ ಕೇಕ್‌, ಪಿಜ್ಜಾ, ರೋಲ್ಸ್‌ ಇಂಥ ಅನೇಕ ತಿನಿಸುಗಳನ್ನು ನಿಶ್ಚಿಂತರಾಗಿ ಸವಿಯುವುದು. ಇದು ನಾಲಗೆಗೆ ಸೋತ ಆಹಾರಪ್ರಿಯರು ಮಾಡಿಕೊಳ್ಳುವ ಕಾಂಪ್ರಮೈಸ್‌. ಆ ತಿನಿಸುಗಳು ಆರೋಗ್ಯಕ್ಕೆ ಕೆಟ್ಟದ್ದೇ ಆಗಿದ್ದರೂ ಒಂದು ಸಲ ತಾನೇ ಎಂದು ತಮ್ಮನ್ನು ತಾವು ಸಂತೈಸಿಕೊಳ್ಳುವರು. 

ಯಾವುದು ನಾಲಗೆಗೆ ಹಿತವೋ ಅದು ದೇಹಕ್ಕೆ ಮಾರಕ, ಯಾವುದು ನಾಲಗೆಗೆ ರುಚಿಸುವುದಿಲ್ಲವೋ ಅದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಿಯಮ ಅನ್ವಯವಾಗದಂಥ ಕೆಫೆಯೊಂದು ಚಂದ್ರಾ ಲೇಔಟಿನಲ್ಲಿ  ಹೊಸದಾಗಿ ಪ್ರಾರಂಭಗೊಂಡಿದೆ. ನೋ ಮೈದಾ ಪರಿಕಲ್ಪನೆಯಲ್ಲಿ ತೆರೆದಿರುವ ಅದರ ಹೆಸರು “ಹನಿ ಕೆಫೆ’. ಇಲ್ಲಿ ಸಿಗುವುದೆಲ್ಲವೂ ನಾಲಗೆಗೂ, ಆರೋಗ್ಯಕ್ಕೂ ಹಿತಕರ. ಈ ನೂತನ ಪರಿಕಲ್ಪನೆ ಮಾಲಕಿ ಶೋಭಾ ಸತೀಶ್‌ ಅವರದು. ಅಡುಗೆಯಲ್ಲಿ ಆಸಕ್ತಿ ಮತ್ತು ತರಬೇತಿಯನ್ನು ಪಡೆದಿರುವ ಅವರು ಆಹಾರಪ್ರಿಯರ ನಾಡಿಮಿಡಿತವನ್ನು ಅರಿತವರು. ಕರ್ನಾಟಕದ ಸಾಂಪ್ರದಾಯಿಕ ಅಡುಗೆ ತಯಾರಿಕಾ ವಿಧಾನಗಳನ್ನು ಬಳಸಿ ಕಾಂಟಿನೆಂಟಲ್‌ ಖಾದ್ಯಗಳು ಮತ್ತು ಸಿರಿಧಾನ್ಯ ಖಾದ್ಯಗಳನ್ನು ಇವರ ಹನಿ ಕೆಫೆಯಲ್ಲಿ ತಯಾರಿಸಲಾಗುತ್ತದೆ. ಇವರಿಗೆ ಜೊತೆಯಾಗಿರುವವರು ಹನಿ ಕೆಫೆಯ ಬಾಣಸಿಗರಾದ ಸುರೇಶ್‌ ನಾಯ್ಕ ಅವರು.

ಸಕ್ಕರೆ, ಮೈದಾ, ಕೃತಕ ಫ್ಲೇವರ್‌ಗಳು ಇಲ್ಲಿನ ಯಾವುದೇ ತಿನಿಸುಗಳಲ್ಲಿ ಕಾಣಲು ಸಾಧ್ಯವಿಲ್ಲ. ಶುದ್ಧ ಆಲಿವ್‌ ಎಣ್ಣೆಯನ್ನೇ ಇಲ್ಲಿ ಬಳಸಲಾಗುತ್ತದೆ. ರುಚಿ ಮತ್ತು ಆರೋಗ್ಯ, ಇವೆರಡರ ನಡುವೆ ಯಾವುದೇ ಕಾಂಪ್ರಮೈಸ್‌ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಆತಿಥ್ಯವನ್ನು ನೀಡುವುದು ಹನಿ ಕೆಫೆಯ ವೈಶಿಷ್ಟé. ಇಲ್ಲಿನ ಕೌಂಟರ್‌ ಬಳಿ ನಿಂತರೆ ಚಿಮಣಿ ಒಲೆಯೊಂದು ಕಾಣುತ್ತದೆ. ಗ್ರಾಹಕರು ಕೆಫೆಯ ವಿಶೇಷ ತಿನಿಸುಗಳಲ್ಲೊಂದಾದ ಮಿಲ್ಲೆಟ್‌(ನವಣೆ) ಪಿಜ್ಜಾ ತಯಾರಿಕೆಯನ್ನು ಲೈವ್‌ ಆಗಿ ನೋಡಬಹುದು. ನೈಸರ್ಗಿಕವಾದ ಈ ಪಿಜ್ಜಾ ತಿನ್ನಲು ಬಲು ರುಚಿ. ಆರೆಂಜ್‌, ಮ್ಯಾಂಗೋ, ಬಟರ್‌ ಸ್ಕಾಚ್‌, ಕಾಫಿ ಮುಂತಾದ ಹತ್ತು ಬಗೆಯ ಪೇಸ್ಟ್ರಿಗಳು, ಇಟಾಲಿಯನ್‌, ಸ್ಪೈಸಿ, ಸ್ವಿಸ್‌ ಗ್ರಿಲ್‌, ಮೆಕ್ಸಿಕನ್‌ ಇನ್ನೂ ಹತ್ತು ಬಗೆಯ ಸ್ಯಾಂಡ್‌ವಿಚ್‌ಗಳು, ಆ್ಯಪಲ್‌ ಸಿನಾಮನ್‌, ಬೀಟ್‌ರೂಟ್‌ ಬ್ರೌನಿ, ಪಿಜ್ಜಾ ಐಸ್‌ಕ್ರೀಮ್‌ನಂಥ ಹತ್ತು ಹಲವು ಡೆಸರ್ಟ್‌ಗಳು, ಪರಾಟಾ ರೋಲ್‌ಗ‌ಳು ಇಲ್ಲಿನ ಮೆನುನಲ್ಲಿ ನಿಮ್ಮ ಆಯ್ಕೆಗೆ ಲಭ್ಯ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಆರಿಸಿದ ತಿನಿಸು ಹೇಗಿರಬೇಕೆಂದು(customised) ಬೇಡಿಕೆ ಸಲ್ಲಿಸಬಹುದು. ಅದರಂತೆಯೇ ತಯಾರಿಸಿಕೊಡುತ್ತಾರೆ.

ಬರಿಯ ಖಾದ್ಯಗಳ ಕುರಿತು ಹೇಳಿ ಪಾನೀಯಗಳನ್ನು ಬಿಟ್ಟುಬಿಟ್ಟರೆ ಅಪೂರ್ಣವಾಗುತ್ತದೆ. ತುಳಸೀ ಟೀ, ಹರ್ಬಲ್‌ ಟೀ, ಲೆಮನ್‌ ಗ್ರಾಸ್‌ ಟೀ ಚೀ ಪ್ರಿಯರಿಗಾಗಿ. ಹಣ್ಣಿನ ಪೇಯಗಳಲ್ಲಿ ವೀಟಾ ಸಿ ಬ್ಲೆಂಡ್‌ ಜೂಸ್‌, ಕ್ಯಾರೆಟ್‌, ಬೀಟ್‌ರೂಟ್‌, ಟೊಮೆಟೋ ಸೇರಿದಂತೆ ವಿವಿಧ್ಯಮಯ ಹಣ್ಣು- ತರಕಾರಿಗಳ ಪೇಯ ಇಲ್ಲಿ ಸಿಗುತ್ತವೆ. ಆನ್‌ಲೈನ್‌ ಡೆಲಿವರಿ ಸೌಲಭ್ಯ ಕೂಡಾ ಇರುವುದರಿಂದ ಮನೆ ಬಾಗಿಲಿಗೇ ಹನಿ ಕೆಫೆಯ ತಿನಿಸುಗಳನ್ನು ತರಿಸಿಕೊಳ್ಳಬಹುದು.

Advertisement

ಎಲ್ಲಿ?: 3ನೇ ಕ್ರಾಸ್‌, 2ನೇ ಸ್ಟೇಜ್‌, ಚಂದ್ರಾ ಲೇಔಟ್‌
ಮೊಬೈಲ್‌:  9008399998

– ಹವನ

Advertisement

Udayavani is now on Telegram. Click here to join our channel and stay updated with the latest news.

Next