Advertisement

ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

01:33 PM Apr 26, 2017 | |

ಧಾರವಾಡ: ಸರಿಯಾಗಿ ಮಾಹಿತಿ ನೀಡದ ಹಾಗೂ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒಕ್ಕೊರಲಿನಿಂದ ಆಗ್ರಹಿಸಿದ ತಾಪಂ ಸದಸ್ಯರು..ಅಕ್ರಮ ಮದ್ಯ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ ಮನಸೂರ ಗ್ರಾಪಂ ಅಧ್ಯಕ್ಷೆಯ ಮನವಿಗೆ ತಾಪಂ ಸದಸ್ಯೆಯರ ಸಾಥ್‌..

Advertisement

ಇದಕ್ಕೆ ಮಣಿದ ತಾಪಂ ಅಧ್ಯಕ್ಷರ ಸೂಚನೆ ಮೇರೆಗೆ ತಾಪಂ ಇಒ ಆದೇಶ.. ಸಾಮಾನ್ಯ ಸಭೆಗೆ ಇದೇ ಮೊದಲ ಬಾರಿಗೆ ಪುತ್ರನನ್ನು ಕರೆದುಕೊಂಡ ಬಂದ ಗರಗ ತಾಪಂ ಸದಸ್ಯೆ..! ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯ ಝಲಕ್‌ ಗಳಿವು.  

ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಆಗಿರುವ ಹಾರೋಬೆಳವಡಿ ಗ್ರಾಮದಲ್ಲಿ ಪೈಪ್‌ಲೈನ್‌ ಅಳವಡಿಸಿ ಅದರ ಮೇಲೆ ಕಾಂಕ್ರೀಟ್‌ ರಸ್ತೆ ಮಾಡುವುದರ ಬದಲು ರಸ್ತೆ ಮಾಡಿ ನಂತರ ಮತ್ತೆ ಪೈಪ್‌ಲೈನ್‌ ಅಳವಡಿಸುತ್ತಿರುವುದು ಅವೈಜ್ಞಾನಿಕವಾಗಿದ್ದು, ಇದರಿಂದ ರಸ್ತೆ ಹಾಳಾಗಲಿದೆ.

ಈ ಬಗ್ಗೆ ಸ್ಥಳೀಯ ತಾಪಂ ಸದಸ್ಯರ ಗಮನಕ್ಕೂ ತಂದಿಲ್ಲ. ಬೇಕಾಬಿಟ್ಟಿ ಆಗಿ ತಮಗೆ ತಿಳಿದಂತೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಹಾರೋ ಬೆಳವಡಿ ತಾಪಂ ಸದಸ್ಯರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ಇತರ ತಾಪಂ ಸದಸ್ಯರು,

ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜನಿಯರ್‌ ಬೆಟದೂರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷರನ್ನು ಒತ್ತಾಯಿಸಿದರು. ಈ ಒತ್ತಡಕ್ಕೆ ಮಣಿದ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅವರು, ಅಧಿಕಾರಿಯ ವರ್ತನೆ ಖಂಡಿಸಿ ಈ ಬಗ್ಗೆ ತಾಪಂ ಇಒ ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಕಳೆದ ಒಂದು ವರ್ಷದಿಂದ ಹೇಳುತ್ತ ಬರುತ್ತಿದ್ದರೂ ಯಾವೊಬ್ಬ ಅಧಿಕಾರಿಯ ವಿರುದ್ಧ ಸಹ ನೀವು ಶಿಸ್ತು ಕ್ರಮ ಕೈಗೊಂಡಿಲ್ಲ. ಸರಿಯಾದ ಮಾಹಿತಿ ನೀಡಿಲ್ಲ. ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಗಳಿಗೆ ಸರಿಯಾದ ವೇಳೆಗೆ ಅಧಿಕಾರಿಗಳು ಬರುತ್ತಿಲ್ಲ. ಅಲ್ಲದೇ ಕೆಲವೊಂದಿಷ್ಟು ಅಧಿಕಾರಿಗಳು ಸಭೆಗಳಿಂದ ದೂರ ಉಳಿದಿದ್ದರೂ ಅಂತಹ ಅಧಿಕಾರಿಗಳ ವಿರುದ್ಧ ಕ್ರಮವೇ ಕೈಗೊಳ್ಳುತ್ತಿಲ್ಲ ಎಂದು ತಾಪಂ ಅಧ್ಯಕ್ಷರು ವಾಗ್ಧಾಳಿ ಮಾಡಿದರು. 

ತಾಪಂ ಅಧ್ಯಕ್ಷರು ಹಾಗೂ ತಾಪಂ ಸದಸ್ಯರ ತೀವ್ರ ಒತ್ತಡಕ್ಕೆ ಮಣಿದ ತಾಪಂ ಇಒ ಜೋಶಿ ಅವರು, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜನಿಯರ್‌ ಬೆಟದೂರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದರ ಜೊತೆಗೆ ಸಭೆಗೆ ಗೈರಾಗುತ್ತಿರುವ ಇಲಾಖಾ ಅಧಿಕಾರಿಗಳ ಮೇಲೂ ಶಿಸ್ತು ಕ್ರಮಕ್ಕೆ ಆದೇಶಿಸಿದರು. 

ಅಕ್ರಮಗಳ ಕಡಿವಾಣಕ್ಕೆ ಆಗ್ರಹ: ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದೆ, ಇದಲ್ಲದೇ ಜೂಜಾಟದಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ  ಗೊತ್ತಿದ್ದರೂ ಕಮೀಷನ್‌ ಆಸೆಗೆ ಬಿದ್ದು ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಮನಸೂರಿನ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ತೇಗೂರ ಸಭೆಯ ಗಮನ ಸೆಳೆದರು.  

ಇದಕ್ಕೆ ಧ್ವನಿಗೂಡಿಸಿದ ಇತರ ತಾಪಂ ಸದಸ್ಯೆಯರು, ಗ್ರಾಮಗಳಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಅಕ್ರಮ ಮದ್ಯ ಮಾರಾಟ  ಆಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಗ್ರಾಮೀಣ ದೇಶದಲ್ಲಿ ನಡೆದಿರುವ ಧ್ವನಿವರ್ಧಕಗಳ ಭರಾಟೆಗೆ ಕಡಿವಾಣ ಹಾಕುವಂತೆಯೂ ತಾಪಂ ಸದಸ್ಯರೊಬ್ಬರು ಗಮನ ಸೆಳೆದರು. 

ಇದಕ್ಕೆ ಸ್ಪಂದಿಸಿದ ತಾಪಂ ಅಧ್ಯಕ್ಷರು,  ಈ ಎರಡೂ ವಿಷಯಗಳ ಕುರಿತಂತೆ ಸಭೆಯಲ್ಲಿ ಠರಾವು ಪಾಸ್‌ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next