Advertisement

ಸೇತುವೆಯಲ್ಲಿ ಬಿರುಕು; ಕುಸಿಯುವ ಭೀತಿ

02:15 AM Jun 06, 2018 | Team Udayavani |

ಎಡಪದವು: ಗಂಜಿಮಠ ಕುಪ್ಪೆಪದವು ರಸ್ತೆಯಿಂದ ಬಂಟ್ವಾಳಕ್ಕೆ ಸಂಪರ್ಕ ಕಲ್ಪಿಸುವ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಭೀತಿ ವ್ಯಕ್ತವಾಗಿದೆ. ಕುಪ್ಪೆಪದವು – ಪಟ್ಣ ಸಮೀಪದ ನೋಣಲ್‌ ಓಡದಕರ್ಯ ಎಂಬಲ್ಲಿ 1981ರಿಂದ 1982ರ ವೇಳೆ ಈ ಸೇತುವೆ ಕಟ್ಟಲಾಗಿದೆ. ಆದರೆ ಈಗ ಸೇತುವೆಯ ಮೇಲ್ಭಾಗದ ಎರಡು ಕಡೆಗಳಲ್ಲಿ ಬಿರುಕು ಮೂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆ ಗಂಜಿಮಠ, ಕುಪ್ಪೆಪದವು ಮೂಲರಪಟ್ಣ, ಮಳಲಿಯಿಂದ ನೇರವಾಗಿ ಬಂಟ್ವಾಳಕ್ಕೆ ಸಂಬಂಧ ಕಲ್ಪಿಸುತ್ತದೆ. ಕಳೆದ 35 ವರ್ಷಗಳಿಂದ ಈ ಸೇತುವೆಯಲ್ಲೇ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ.

Advertisement

ಕಳಪೆ ಕಾಮಗಾರಿ
ಸಾಮಾನ್ಯವಾಗಿ ಸಿಮೆಂಟ್‌ ನಿಂದ ಮಾಡಿದ ಸೇತುವೆಗೆ 100 ವರ್ಷಗಳ ಬಾಳಿಕೆ  ಸಾಮರ್ಥ್ಯವಿರುತ್ತದೆ. ಆದರೆ ಈ ಸೇತುವೆ ಮಾತ್ರ 35 ವರ್ಷ ಪೂರ್ಣವಾಗುವ ಮೊದಲೇ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸಿದೆ. ಇದರಿಂದ ಲಕ್ಷಾಂತರ ರೂ. ಹಣ ಪೋಲಾದಂತಾಗಿದೆ.  ಕೂಡಲೇ ಇಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕಿದೆ. ಸೇತುವೆಯ ಮೇಲೆ ವಾಹನಗಳು ಸಂಚರಿಸುವಾಗ ಭಯವಾಗುತ್ತದೆ. ಸೇತುವೆಯ ಅಡಿಭಾಗದಲ್ಲಿ ಕಬ್ಬಿಣದ ಸಲಕರಣೆ, ಸ್ತಂಭಗಳಲ್ಲಿ ತುಕ್ಕು ಹಿಡಿದಿದೆ. ಪಕ್ಕದಲ್ಲೇ ಇನ್ನೊಂದು ಸೇತುವೆ ನಿರ್ಮಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.


ಎತ್ತರದ ಸೇತುವೆ

ಈ ಸೇತುವೆ ನೀರಿನ ಮಟ್ಟದಿಂದ ತುಂಬಾ ಎತ್ತರದಲ್ಲಿದ್ದು, ನದಿಯಲ್ಲಿ ನೀರೂ ಕೂಡ ಅಧಿಕವಾಗಿದೆ. ಸೇತುವೆ ಮುರಿದರೆ ಅಪಾಯವಷ್ಟೇ ಅಲ್ಲ ಸಂಪರ್ಕವೂ ಕಡಿತಗೊಳ್ಳುತ್ತದೆ. ಈ ನದಿಯಲ್ಲಿ ಮುಳುಗಿ ಅನೇಕ ಮಂದಿ ಪ್ರಾಣಬಿಟ್ಟ ಘಟನೆಯೂ ನಡೆದಿದೆ. ಆದ್ದರಿಂದ ಈ ಸೇತುವೆಯ ದುರಸ್ತಿ, ಹೊಸ ಸೇತುವೆ ನಿರ್ಮಾಣಕ್ಕೆ ಕೂಡಲೇ ಕಾರ್ಯ ಆರಂಭವಾಗಬೇಕಿದೆ. 

ಪರಿಶೀಲನೆ ನಡೆಸಿ ಕ್ರಮ
ಸೇತುವೆಯಲ್ಲಿ ಬಿರುಕು ಮೂಡಿರುವುದರ ಬಗ್ಗೆ ಪರಿಶೀಲನೆ ನಡೆಸಿದ್ದು, ಅದು ಅಷ್ಟೊಂದು ಅಪಾಯಕಾರಿಯಾಗಿಲ್ಲ. ಬಿರುಕನ್ನು ಮಗದೊಮ್ಮೆ ಪರಿಶೀಲಿಸಿ ಬಿರುಕು ಸಣ್ಣದಿದ್ದರೆ ಅದನ್ನು ಸರಿಪಡಿಸಲಾಗುವುದು. ದೊಡ್ಡದಾಗಿ, ಅಪಾಯಕಾರಿಯಾಗಿದ್ದರೆ ಪರಿಣತರನ್ನು ಕರೆಸಿ ಮುಚ್ಚಿಸಲಾಗುವುದು. ಸೆಕ್ಷನ್‌ ಆಫೀಸರ್‌ಗಳು ಪರಿಶೀಲನೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ.
– ರವಿಕುಮಾರ್‌, ಅಸಿಸ್ಟೆಂಟ್‌ ಎಕ್ಸ್‌ಕ್ಯೂಟಿವ್‌ ಎಂಜಿನಿಯರ್‌, PWD

— ಗಿರೀಶ್‌ ಮಳಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next