Advertisement

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

03:28 PM Nov 08, 2024 | Team Udayavani |

ಮಹಾನಗರ: ನಗರದಲ್ಲಿ ಸಂಚರಿಸುವ ಕೆಲವೊಂದು ಬಸ್‌ಗಳು ಸಿಗ್ನಲ್‌ಗ‌ಳಲ್ಲೇ ಪ್ರಯಾಣಿ ಕರನ್ನು ಹತ್ತಿಸಲು ಮತ್ತು ಇಳಿಸಲು ನಿಲ್ಲುತ್ತಿದ್ದು, ಅಪಾಯಕ್ಕೆ ಕಾರಣವಾಗುತ್ತಿದೆ. ಸಿಗ್ನಲ್‌ಗ‌ಳಲ್ಲಿ ಬಸ್‌ ನಿಲ್ಲಿಸಿರುವಾಗಲೇ ಪ್ರಯಾಣಿಕರು ಕೂಡ ಬಸ್‌ ಏರುತ್ತಿದ್ದು, ಅವಘಡಕ್ಕೆ ಎಡೆಮಾಡಿದೆ.

Advertisement

ನಗರದಲ್ಲಿ ಸದಾ ಟ್ರಾಫಿಕ್‌ ಒತ್ತಡದಿಂದ ಕೂಡಿರುವ ಲಾಲ್‌ಬಾಗ್‌ ಜಂಕ್ಷನ್‌ನಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ. ಲಾಲ್‌ಬಾಗ್‌ನಿಂದ ಬಿಜೈ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಬಿಗ್‌ಜಾರ್‌ ಬಳಿ ಬಸ್‌ ತಂಗುದಾಣ ಇದೆ. ಲಾಲ್‌ಬಾಗ್‌ ಜಂಕ್ಷನ್‌, ಮಹಾನಗರ ಪಾಲಿಕೆ ಹಾಗೂ ಆಸುಪಾಸಿನಲ್ಲಿ ಕೆಲಸ ಕಾರ್ಯ ಇರುವವರು ಬಿಗ್‌ಬಜಾರ್‌ ಬಳಿ ಇಳಿದು ಮತ್ತೆ ನಡೆದುಕೊಂಡು ಹಿಂದಕ್ಕೆ ಬರಬೇಕು. ಈ ಕಾರಣಕ್ಕೆ ಬಹುತೇಕ ಮಂದಿ ಸಿಗ್ನಲ್‌ನಲ್ಲಿಯೇ ಇಳಿಯುತ್ತಾರೆ.

ಇದೇ ರಸ್ತೆಯ ಮೂಲಕ ಲೇಡಿಹಿಲ್‌ ಕಡೆಗೆ ಸಾಗುವ ವಾಹನಗಳೂ ಸಿಗ್ನಲ್‌ ತುಸು ದೂರದಲ್ಲಿ ಬಸ್‌ ನಿಲ್ದಾಣ ಇದ್ದರೂ ಕೆಲವು ಮಂದಿ ಸಿಗ್ನಲ್‌ನಲ್ಲೇ ಬಸ್‌ನಿಂದ ಇಳಿಯಲು ಹೇಳುತ್ತಾರೆ ಎನ್ನುತ್ತಾರೆ ಸಾರ್ವಜನಿಕರು. ಈ ಸಂದರ್ಭ ಬಸ್‌ನಿಂದ ಇಳಿಯುವ ಮಂದಿಗೆ ಹಿಂದೆ ಇರುವ ವಾಹನಗಳು ಅಚಾನಕ್‌ ಎದುರಿಗೆ ಬಂದು ಢಿಕ್ಕಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಪಿವಿಎಸ್‌ ಜಂಕ್ಷನ್‌ನಲ್ಲೂ ಅಪಾಯ
ನಗರದ ಪಿವಿಎಸ್‌ ಜಂಕ್ಷನ್‌ನಲ್ಲಿಯೂ ಇದೇ ರೀತಿ ಅಪಾಯ ವಲಯ ನಿರ್ಮಾಣವಾಗಿದೆ. ಪಿವಿಎಸ್‌ನಿಂದ ಕೆಲವು ವಾಹನಗಳು ನೇರವಾಗಿ ನವಭಾರತ ವೃತ್ತದತ್ತ ಸಾಗಿದರೆ, ಕೆಲವೊಂದು ವಾಹನ ಎಂ.ಜಿ. ರಸ್ತೆಗೆ ಸಾಗುತ್ತದೆ. ಜಂಕ್ಷನ್‌ ಬಳಿ ಬಸ್‌ ನಿಲ್ದಾಣ ಇದ್ದರೂ ಕೆಲವು ಬಸ್‌ ಅಲ್ಲಿ ನಿಲ್ಲದೆ, ಸಿಗ್ನಲ್‌ನಲ್ಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿ, ಇಳಿಸುತ್ತಾರೆ. ಈ ರಸ್ತೆಯಲ್ಲಿ ಸಾಮಾನ್ಯವಾಗಿ ಉಡುಪಿ, ಕುಂದಾಪುರ ಕಡೆಗೆ ಸಾಗುವ ಬಸ್‌ಗಳಲ್ಲಿ ಪ್ರಯಾಣಿಕರು ಸಿಗ್ನಲ್‌ಗ‌ಳಲ್ಲಿಯೇ ಬಸ್‌ಗೆ ಹತ್ತುತ್ತಾರೆ. ಸಿಗ್ನಲ್‌ ತೆರೆದಿದ್ದರೆ ಸಿಗ್ನಲ್‌ ತಪ್ಪಿಸುವ ಉದ್ದೇಶಕ್ಕೆ ಉಪ್ಪಿನಂಗಡಿ, ಧರ್ಮಸ್ಥಳ, ಚಿಕ್ಕಮಗಳೂರು, ಬೆಂಗಳೂರು ಸಹಿತ ನಗರ ವ್ಯಾಪ್ತಿಯಿಂದ ಆಗಮಿಸುವ ಕೆಲವೊಂದು ಬಸ್‌ಗಳಲ್ಲಿ ಪಿವಿಎಸ್‌ ಸಿಗ್ನಲ್‌ ದಾಟಿ ಎಂ.ಜಿ. ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಅಚಾನಕ್‌ ಆಗಿ ಬಸ್‌ ನಿಲ್ಲಿಸುವ ವೇಳೆ ಪ್ರಯಾಣಿಕರಿಗೆ ಹಿಂದಿನ ವಾಹನಗಳು ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

ಹಂಪನಕಟ್ಟೆ ಜಂಕ್ಷನ್‌
ಹಂಪನಕಟ್ಟೆಯಲ್ಲಿ ಜಂಕ್ಷನ್‌ ಬಳಿ ಪ್ರಯಾಣಿ ಕರನ್ನು ಬಸ್‌ಗಳಿಗೆ ಹತ್ತಿಸುವ ವ್ಯವಸ್ಥೆ ಈ ಹಿಂದೆ ಇತ್ತು. ವಾಹನ ದಟ್ಟಣೆ ಉದ್ದೇಶಕ್ಕೆ ಕೆಲವು ವರ್ಷಗಳ ಹಿಂದೆ ಇಲ್ಲಿ ಬಸ್‌ ನಿಲುಗಡೆ ಸ್ಥಗಿತಗೊಳಿಸಲಾಗಿತ್ತು. ಆದರೂ ಸದ್ಯ ಇಲ್ಲಿನ ಜಂಕ್ಷನ್‌ನಲ್ಲೇ ಪ್ರಯಾಣಿಕರಿಗೆ ಬಸ್‌ ನಿಲ್ಲಿಸಲಾಗುತ್ತಿದೆ.

Advertisement

ಸ್ಮಾರ್ಟ್‌ ಸಿಗ್ನಲ್‌; ಸಮಸ್ಯೆ
ನಗರದ ಹಲವು ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ ಸಿಗ್ನಲ್‌ ಅಳವಡಿಸಲಾಗಿದೆ. ಇದರಲ್ಲಿ ಸಿಗ್ನಲ್‌ ಬದಲಾವಣೆಯ ಸೂಚನೆ ಕೊನೆಯ 5 ಸೆಕೆಂಡ್‌ ಇರುವಾಗ ಬರುತ್ತದೆ. ಜಂಕ್ಷನ್‌ಗಳಲ್ಲಿ ನಿಂತ ವಾಹನಗಳು ಸಿದ್ಧಗೊಳ್ಳಲು ಸಮಯ ಇರದ ಕಾರಣ, ಈ ರೀತಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ಇಳಿಸುವುದರಿಂದ ಅಪಘಾತ ಉಂಟಾಗುವ ಸಾಧ್ಯತೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next