ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್‌ವೊಂದರಲ್ಲಿ ಬಿರುಕು ಬಂದಿರುವುದಾಗಿ ಹೇಳಲಾಗಿದ್ದು, ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಟ್ರಿನಿಟಿ ಸರ್ಕಲ್‌ನಲ್ಲಿರುವ 155 ನಂಬರ್‌ನ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಆ ಭಾಗದಲ್ಲಿ 45 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲು 20 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದೆ.
ಪಿಲ್ಲರ್ ಅಡಿಯಲ್ಲಿ ಜಾಕ್‌ಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೆಟ್ರೋ ನಿಗಮ ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ, ಆದರೆ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ಒಂದು ಕಡೆ ಪಿಲ್ಲರ್ ಕುಸಿದಿರುವ ಕುರಿತು ಮೊನ್ನೆಯೇ ಮಾಹಿತಿ ಬಂದಿದೆ. ಈಗಾಗಲೇ ತಜ್ಞರನ್ನು ಕರೆಸಿ ತನಿಖೆಯೂ ನಡೆಸಿದ್ದೇವೆ. ಸಾರ್ವಜನಿಕರಿಗೆ ಯಾವುದೇ ತೊಂದರ ಆಗಬಾರದು ಎಂದು ನಾನು ರೈಲು ಸಂಚಾರ ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ ತಜ್ಞರು ವೇಗ ಕಡಿಮೆ ಮಾಡಿ ಓಡಿಸಿದರೆ ಪರಿಣಾಮ ಇಲ್ಲ ಎಂದ ಕಾರಣಕ್ಕೆ ರೈಲುಗಳು ಸಂಚರಿಸುತ್ತಿವೆ. ಸಣ್ಣ ಲೋಪ ಸರಿಪಡಿಸಿಕೊಳ್ಳಲು ಸಾಧ್ಯ ಇದೆ ಎಂದು ಅವರು ಹೇಳಿದ್ದಾರೆ ಎಂದರು.