ಥಿಂಪು (ಭೂತಾನ್): ಕೊರೊನಾವನ್ನು ತಡೆಗಟ್ಟಲು ನಾನಾ ದೇಶಗಳ ಪ್ರಧಾನಿ, ರಾಷ್ಟ್ರಾಧ್ಯಕ್ಷರು ಕೆಲವು ವಿಶೇಷ ರೀತಿಯ ಕ್ರಮಗಳನ್ನು ಕೈಗೊಂಡಿದ್ದನ್ನು ಓದಿದ್ದೇವೆ, ಕೇಳಿದ್ದೇವೆ. ಭೂತಾನ್‌ನ ಮಹಾರಾಜ ಜಿಗ್ಮೆ ಖೇಸರ್ ನಮಗ್ಯೆಲ್ ವಾಂಗ್ಚುಕ್ ಅವರು ಕೊಂಚ ವಿಭಿನ್ನ ಪ್ರಯತ್ನ ಮಾಡಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಅವರೇ ಖುದ್ದು ಕಣಕ್ಕಿಳಿದಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಭೂತಾನ್‌ಗೆ ಕೊರೊನಾ ಬಂದರೆ ಅದು ಚೀನಾ, ಭಾರತದಿಂದಲೇ ಬರಬಹುದು ಎಂದು ಅಂದಾಜಿಸಿದ್ದ ಅವರು, ಕೊರೊನಾ 2ನೇ ಅಲೆ ಉತ್ತುಂಗದಲ್ಲಿದ್ದಾಗ ಭಾರತ ಮತ್ತು ಚೀನಾಕ್ಕೆ ಅಂಟಿಕೊಂಡಿರುವ ಭೂತಾನ್‌ನ ಗಡಿ ಪ್ರಾಂತ್ಯಗಳಿಗೆ ಭೇಟಿ ಕೊಟ್ಟು, ಜನರನ್ನು ಕೊರೊನಾ ಬಗ್ಗೆ ಎಚ್ಚರಿಸಿದ್ದಾರೆ.
ರಾಜಧಾನಿ ಥಿಂಪುವಿನಲ್ಲಿರುವ ತಮ್ಮ ಅರಮನೆಯಲ್ಲಿ ತಾವು ಹೊಂದಿರುವ ಸುಖಜೀವನವನ್ನು ತ್ಯಜಿಸಿ ಹೊರಬಂದಿದ್ದ ಅವರು, ಮೊದಲಿಗೆ, ಭಾರತದ ಅಸ್ಸಾಂ, ಅರುಣಾಚಲ ಪ್ರದೇಶಗಳಿಗೆ ಹೊಂದಿಕೊಂಡಿರುವ ಭೂತಾನ್‌ನ ಗಡಿ ಭಾಗದ ಹಳ್ಳಿಗಳಿಗೆ ಹಾಗೂ ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದ ಅವರು, 4,032 ಮೀಟರ್ ಎತ್ತರದಲ್ಲಿರುವ ಆ ಗುಡ್ಡಗಾಡು ಪ್ರದೇಶಗಳಲ್ಲಿ ಚಳಿಗಾಳಿ, ಮಳೆಯನ್ನು ಲೆಕ್ಕಿಸದೆ ಸುತ್ತಾಡಿದ್ದಾರೆ. ಪ್ರತಿ ಹಳ್ಳಿಗಳಿಗೂ ಹೋಗಿ ಕೊರೊನಾ ತಡೆಯಲು ಜನರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಸಿ ಮುನ್ನಡೆದಿದ್ದಾರೆ.
ಇದನ್ನೂ ಓದಿ :ವಾರಾಂತ್ಯದ ಕರ್ಫ್ಯೂ : ಮಣಿಪಾಲ ಸೇರಿದಂತೆ ಉಡುಪಿ ನಗರದಲ್ಲಿ ಹೆಚ್ಚಿದ ವಾಹನ ಓಡಾಟ
ವೈಚಾರಿಕತೆಯೇ ಮೂಲ
ವಾಂಗ್ಚುಕ್ ಅವರು ಭಾರತದಲ್ಲೇ ಓದಿದವರು. 2005ರಲ್ಲಿ ದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದವರು. ದೆಹಲಿಯಲ್ಲಿ ಸಾಮಾಜಿಕ ಚಿಂತಕರ ಸಾಂಗತ್ಯಕ್ಕೆ ಬಂದಿದ್ದ ಅವರು ಅರಮನೆಯಲ್ಲೂ ಸಾಮಾನ್ಯ ವ್ಯಕ್ತಿಯಂದೇ ಬದುಕುತ್ತಿದ್ದಾರೆ. ಆ ವ್ಯಕ್ತಿತ್ವವೇ ಅವರಿಂದ ಇಂಥ ಸೇವೆ ಮಾಡಿಸಿದೆ ಎಂದು ಹೇಳಲಾಗುತ್ತಿದೆ.