Advertisement

ತೈಲ ಬೆಲೆ ಏರಿಕೆಗೆ ಸಿಪಿಐ ಕಾರ್ಯಕರ್ತರ ಆಕ್ರೋಶ

03:59 PM Oct 26, 2018 | |

ಚಿತ್ರದುರ್ಗ: ಬೆಳೆ ವಿಮೆ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಭಾರತ್‌ ಕಮ್ಯೂನಿಸ್ಟ್‌ ಪಕ್ಷದ (ಮಾರ್ಕವಾದಿ) ಕಾರ್ಯಕರ್ತರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದೆ. ಇದರಿಂದ ಜೀವನಾವಶ್ಯಕ ವಸ್ತುಗಳು, ಬಸ್‌ ದರ ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳು ತುಟ್ಟಿಯಾಗಲಿವೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಅಡುಗೆ ಅನಿಲ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
 
ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅಚ್ಛೇ ದಿನ್‌ ತರುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಆಡಳಿತ ನಡೆಸಲು ಪ್ರಾರಂಭಿಸಿದ ನಂತರ ಪೆಟ್ರೋಲ್‌, ಡೀಸೆಲ್‌ ಬೆಲೆ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ದರ ಏರಿಕೆಯಾಗಿದ್ದರಿಂದ ಜನಸಾಮಾನ್ಯರು ಜೀವನ
ನಡೆಸುವುದು ಕಷ್ಟವಾಗಿದೆ. ಅಚ್ಛೇ ದಿನ್‌ ಅವರಿಗೆ ಮಾತ್ರ ಬಂದಿದ್ದು ಬಡವರಿಗೆ ಎಂದೂ ಬರಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಫೇಲ್‌ ಹಗರಣ ಎಸಗಿದ್ದು ಅದರ ತನಿಖೆ ಕೈಗೆತ್ತಿಕೊಂಡ ಸಿಬಿಐನಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಒಂದೇ ಒಂದು ಉದ್ಯೋಗ ಸೃಷ್ಟಿ ಮಾಡದೆ ಕಾರ್ಪೊರೇಟ್‌ ಕಂಪನಿಗಳ ಪರ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶ ಬಿಟ್ಟು ಓಡಿ ಹೋಗುವವರ ಪರವಾಗಿದ್ದಾರೆ ಎಂದು ಆರೋಪಿಸಿದರು. 

ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಪ್ರತಿ ಎಕರೆ ಶೇಂಗಾ ಬೆಳೆಗೆ 20 ಸಾವಿರ ರೂ.ಗಳ ಪರಿಹಾರದ ಪ್ಯಾಕೇಜ್‌ ನೀಡಬೇಕು. ಮೆಕ್ಕೆಜೋಳಕ್ಕೆ 15 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಬೇಕು. ಕಳೆದ ಹತ್ತು ವರ್ಷಗಳಿಂದ ಸತತ ಬರ ಎದುರಿಸುತ್ತಿರುವ ಜಿಲ್ಲೆಯ ಎಲ್ಲ ವರ್ಗದವರ ಭೂ ಕಂದಾಯ, ವಿದ್ಯುತ್‌ ಬಿಲ್‌, ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ರೈತ ಮತ್ತು ಕೂಲಿ ಕಾರ್ಮಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
 
ನರೇಗಾ ಯೋಜನೆ ಅಡಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕಾಮಗಾರಿಗಳನ್ನು ಗ್ರಾಪಂನಲ್ಲಿನ ಬಲಿಷ್ಠರು ಗುತ್ತಿಗೆ ಮಾಡುತ್ತಿದ್ದು ರೈತಾಪಿ ವರ್ಗ, ಕೂಲಿ ಕಾರ್ಮಿಕರಿಗೆ ಆ ಕಾಮಗಾರಿಗಳನ್ನು ನೀಡಬೇಕು. ಪಿಡಿಒಗಳು ಸಕಾಲದಲ್ಲಿ ಕೂಲಿ ನೀಡುತ್ತಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾದ್ಯಂತ ಗೋಶಾಲೆಗಳನ್ನು ತೆರೆಯಬೇಕು. ಎಂದರು. 

ಸಿಪಿಐ (ಎಂ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ, ಮುಖಂಡರಾದ ಟಿ. ತಿಪ್ಪೇಸ್ವಾಮಿ, ಟಿ. ಲಿಂಗಣ್ಣ, ನಿಂಗಮ್ಮ, ಸಿ.ಕೆ. ಗೌಸ್‌ಪೀರ್‌, ಬಸವರಾಜ್‌ ಇತರರು ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next