ವಿಧಾನ ಪರಿಷತ್ತು: ವಿಧಾನಸಭೆಯಲ್ಲಿ ಕಳೆದ ಅಧಿವೇಶನದಲ್ಲಿ ಅಂಗೀಕೃತವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ (ಗೋಹತ್ಯೆ ನಿಷೇಧ) ಮೇಲ್ಮನೆಯಲ್ಲಿ ಸೋಮವಾರ ಪ್ರತಿಪಕ್ಷಗಳ ಪ್ರತಿರೋಧದ ನಡುವೆ ಅನುಮೋದನೆ ನೀಡಲಾಯಿತು.
ಕಾಂಗ್ರೆಸ್, ಜೆಡಿಎಸ್ ಸದಸ್ಯರ ವಿರೋಧದ ನಡುವೆಯೇ ವಿಧೇಯಕ ಮಂಡಿಸಿ ಧ್ವನಿ ಮತದ ಮೂಲಕ ಅನುಮೋದನೆ ಪಡೆಯುವಲ್ಲಿ ಆಡಳಿತಾರೂಢ ಬಿಜೆಪಿ ಯಶಸ್ವಿಯಾಯಿತು. ಆ ಮೂಲಕ ರಾಜ್ಯದಲ್ಲಿ 13 ವರ್ಷದೊಳಗಿನ ಹಸು, ಕರು, ಎತ್ತು, ಕೋಣ, ಎಮ್ಮೆ ಹತ್ಯೆ ನಿಷೇಧ ಜಾರಿ ಜತೆಗೆ ನಿರಂತರವಾಗಿ ಕಾಯ್ದೆ ಉಲ್ಲಂಘನೆಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿರುವ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತಂತಾಗಿದೆ.
ಸದನದಲ್ಲಿ ಸೋಮವಾರ ಸಂಜೆ 5 ಗಂಟೆ ಹೊತ್ತಿಗೆ ಸಚಿವ ಪ್ರಭು ಚೌಹಾಣ್ ವಿಧೇಯಕ ಮಂಡಿಸಿದರು. ಬಳಿಕ ಸಚಿವ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಧೇಯಕದ ಉದ್ದೇಶ, 1964ರ ಕಾಯ್ದೆಗೆ ಪ್ರಸ್ತಾಪಿಸಿರುವ ತಿದ್ದುಪಡಿಗಳ ಬಗ್ಗೆ ವಿವರ ನೀಡಿದರು. ನಂತರ ಕಾಂಗ್ರೆಸ್, ಜೆಡಿಎಸ್‌ನ ಹಲವು ಸದಸ್ಯರು ವಿಧೇಯಕದ ಬಗೆಗಿನ ಆಕ್ಷೇಪಗಳನ್ನು ಸದನಕ್ಕೆ ತಿಳಿಸಿದರು.
ಇದನ್ನೂ ಓದಿ:ಭಾಷಾ ವೈವಿಧ್ಯತೆ ಸಂರಕ್ಷಣೆಗೆ ಮೋದಿ ಸರ್ಕಾರ ಬದ್ಧ : ಕೇಂದ್ರ ಸಚಿವ ಸದಾನಂದ ಗೌಡ
ಸುಮಾರು ಎರಡೂವರೆ ತಾಸು ಚರ್ಚೆಯಲ್ಲಿ ರಾಜಕೀಯ ಆರೋಪ- ಪ್ರತ್ಯಾರೋಪಕ್ಕೂ ಸದನ ಸಾಕ್ಷಿಯಾಯಿತು. ರಾತ್ರಿ 7.15ರ ಹೊತ್ತಿನಲ್ಲಿ ಇನ್ನಷ್ಟು ಹೊತ್ತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಒತ್ತಡ ಹೇರುತ್ತಿದ್ದಂತೆ ಉಪಸಭಾಪತಿ ಎಂ.ಕೆ.ಪಾಣೇಶ್ ವಿಧೇಯಕ ಅಂಗೀಕಾರ ಪ್ರಕ್ರಿಯೆಗೆ ಸೂಚನೆ ನೀಡಿದರು.
ಇದನ್ನು ವಿರೋಧಿಸಿದ ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ವಿಧೇಯಕ ಪ್ರತಿಯನ್ನು ಹರಿದು ಸದನದ ಬಾವಿಯತ್ತ ಎಸೆದರು. ಸದನದ ಬಾವಿಗಿಳಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಪ್ರತಿರೋಧದ ನಡುವೆ ಸದನ ವಿಧೇಯಕಕ್ಕೆ ಒಪ್ಪಿಗೆ ನೀಡಿತು.
ಬಳಿಕ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಬಿಜೆಪಿ ಸದಸ್ಯರು “ಗೋ ಮಾತಾ ಕಿ ಜೈ’, “ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.