ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 01) ತಿಳಿಸಿದ್ದು, ಯಾರು ಗೋವನ್ನು ಹಿಂಸಿಸುತ್ತಾರೋ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎರಡೇ ಶೌಚಾಲಯ | ಅನೈತಿಕ ಚಟುವಟಿಕೆಗಳ ತಾಣವಾಗಿರುವ ಶಾಲೆ
ಭಾರತೀಯ ಸಂಸ್ಕೃತಿಯಲ್ಲಿ ಗೋವು ಪ್ರಮುಖವಾದ ಭಾಗವಾಗಿದೆ ಎಂದು ತಿಳಿಸಿರುವ ಅಲಹಬಾದ್ ಹೈಕೋರ್ಟ್ ಪೀಠ, ಗೋ ಮಾಂಸ ಭಕ್ಷಣೆ ಮಾಡುವವರಿಗಷ್ಟೇ ಅದು ಮೂಲಭೂತ ಹಕ್ಕಲ್ಲ. ಆದರೆ ಗೋವುಗಳನ್ನು ಯಾರು ಪೂಜಿಸುತ್ತಾರೋ ಹಾಗೂ ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವವರ ಮೂಲಭೂತ ಹಕ್ಕಾಗಿದೆ.
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಯಾರು ಗೋವನ್ನು ಹತ್ಯೆಗೈಯುತ್ತಾರೋ ಅಂತವರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನನ್ನು ರೂಪಿಸಬೇಕು ಎಂದು ಹೈಕೋರ್ಟ್ ಪೀಠದ ಜಸ್ಟೀಸ್ ಶೇಖರ್ ಕುಮಾರ್ ಯಾದವ್ ಸಲಹೆ ನೀಡಿರುವುದಾಗಿ ವರದಿ ಹೇಳಿದೆ.
ಕೊಲ್ಲುವ ಹಕ್ಕಿಗಿಂತ ಬದುಕುವ ಹಕ್ಕು ಎಲ್ಲಕ್ಕಿಂತ ದೊಡ್ಡದಾದದ್ದು. ಗೋ ಮಾಂಸ ತಿನ್ನುವುದನ್ನು ಯಾವುದೇ ಕಾರಣಕ್ಕೂ ಮೂಲಭೂತ ಹಕ್ಕು ಎಂದು ಪರಿಗಣಿಸಬಾರದು ಎಂದು ಹೈಕೋರ್ಟ್ ಪೀಠ ತಿಳಿಸಿದೆ.
ಸಂಭಾಲ್ ಜಿಲ್ಲೆಯ ಜಾವೇದ್ ಎಂಬಾತ ಗೋವನ್ನು ಕದ್ದು, ಬಳಿಕ ಹತ್ಯೆಗೈದ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯವ್ಯಕ್ತಪಡಿಸಿದೆ. ಜಾವೇದ್ ಗೆ ಜಾಮೀನು ನಿರಾಕರಿಸಿರುವ ಕೋರ್ಟ್, ಇದು ಮೊದಲ ಬಾರಿ ಮಾಡುತ್ತಿರುವ ಅಪರಾಧವಲ್ಲ, ಈ ಹಿಂದೆಯೂ ಗೋವನ್ನು ಹತ್ಯೆಗೈದಿದ್ದು, ಇದು ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆ ತರಲಿದೆ ಎಂದು ಕೋರ್ಟ್ ಹೇಳಿದೆ.