ವಾರಾಣಸಿ : ಗೋವಿನ ಬಗ್ಗೆ ಮಾತನಾಡುವುದನ್ನು ಕೆಲವರು “ಪಾಪದ ವಿಷಯ” ಮಾಡಿದ್ದಾರೆ ಆದರೆ “ಇದು ನಮಗೆ ತಾಯಿ ಮತ್ತು ಪವಿತ್ರ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಡೈರಿ ಯೋಜನೆ ಸೇರಿದಂತೆ 27 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಂತರ ಪ್ರಧಾನಿ ಇಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಹಸುಗಳು ಮತ್ತು ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಎಂಟು ಕೋಟಿ ಕುಟುಂಬಗಳ ಜೀವನೋಪಾಯವು “ಪಶುಧನ್” (ಜಾನುವಾರು) ಮೇಲೆ ಅವಲಂಬಿತವಾಗಿದೆ ಎಂಬುದನ್ನು ಮರೆತುಬಿಡುತ್ತಾರೆ.ಗೋವಿನ ಬಗ್ಗೆ ಮಾತನಾಡುವುದು, ಗೋಬರ್ಧನ್ (ಗೋವಿನ ಸಗಣಿ) ಬಗ್ಗೆ ಮಾತನಾಡುವುದನ್ನು ಕೆಲವರು ಪಾಪವನ್ನಾಗಿ ಮಾಡಿದ್ದಾರೆ. ಗೋವು ಕೆಲವರಿಗೆ ಪಾಪವಾಗಬಹುದು, ನಮಗೆ ಅದು ತಾಯಿ, ಪವಿತ್ರ ಎಂದು ಮೋದಿ ಹೇಳಿದರು.
ಕಳೆದ 10 ದಿನಗಳಲ್ಲಿ ತಮ್ಮ ಸಂಸದೀಯ ಕ್ಷೇತ್ರಕ್ಕೆ ಪ್ರಧಾನಿಯ ಎರಡನೇ ಭೇಟಿ ಇದಾಗಿದೆ. ಇದಕ್ಕೂ ಮುನ್ನ ನಗರದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ್ದರು. ಬೆಳಗ್ಗೆ ಇಲ್ಲಿಗೆ ಆಗಮಿಸಿದ ಬಳಿಕ 2095 ಕೋಟಿ ರೂ.ಗಳ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಫುಡ್ ಪಾರ್ಕ್, ಕಾರ್ಖಿಯೋನ್‌ನಲ್ಲಿರುವ “ಬನಾಸ್ ಡೈರಿ ಸಂಕುಲ್” ಅನ್ನು ಒಳಗೊಂಡಿದ್ದು, 30 ಎಕರೆಯಲ್ಲಿ ವ್ಯಾಪಿಸಿರುವ ಈ ಡೈರಿಯನ್ನು ಸುಮಾರು 475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು , ಮತ್ತು ದಿನಕ್ಕೆ ಸುಮಾರು 5 ಲಕ್ಷ ಲೀಟರ್ ಹಾಲು ಸಂಸ್ಕರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿಯವರು 1.7 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಸುಮಾರು 35 ಕೋಟಿ ರೂಪಾಯಿಗಳ ಬೋನಸ್ ಅನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು.