ನವದೆಹಲಿ: ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳಿಗೆ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 275 ರೂ. ಮತ್ತು ಹೆಚ್ಚುವರಿಯಾಗಿ ಸೇವಾ ಶುಲ್ಕವೆಂದು 150 ರೂ. ವಿಧಿಸುವ ಸಾಧ್ಯತೆಗಳು ಇವೆ.
ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ)ಕ್ಕೆ ಲಸಿಕೆಗಳಿಗೆ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಕೇಂದ್ರ ಸರ್ಕಾರದಿಂದ ಸೂಚನೆ ಜಾರಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ಬುಧವಾರ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ 1,200 ರೂ., ಪ್ರತಿ ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂ. ಇದೆ. ಅದರಲ್ಲಿ 150 ರೂ. ಸೇವಾಶುಲ್ಕವೂ ಸೇರಿದೆ. ಜ.19ರಂದು ನಡೆಸಲಾಗಿದ್ದ ಸಭೆಯಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಲಸಿಕೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಬಗ್ಗೆ ಪ್ರಸ್ತಾಪಿಸಿತ್ತು.
ಇದನ್ನೂ ಓದಿ:ಹಿಜಾಬ್ ವಿವಾದ: ವಿದ್ಯಾರ್ಥಿನಿಯರು ಒಪ್ಪದಿದ್ದರೆ ಆನ್‌ಲೈನ್ ತರಗತಿ: ಶಾಸಕ ರಘುಪತಿ ಭಟ್
ಪುಣೆಯ ಸೀರಂ ಇನ್ಸಿಟ್ಟಿಟ್ಯೂಟ್ ಆಫ್ ಇಂಡಿಯಾ ಭಾರತದ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) 2021ರ ಅ.25ರಂದೇ ಮಾರುಕಟ್ಟೆಯಲ್ಲಿ ಲಸಿಕೆ ಮಾರಾಟ ಮಾಡುವುದರ ಬಗ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಕೆಲವು ವಾರಗಳ ಹಿಂದೆ ಭಾರತ್ ಬಯೋಟೆಕ್ ಕೂಡ ಅರ್ಜಿ ಸಲ್ಲಿಕೆ ಮಾಡಿತ್ತು.
ಸಕ್ರಿಯ ಕೇಸುಗಳ ಸಂಖ್ಯೆ ಇಳಿಕೆ:
ದೇಶದಲ್ಲಿ ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 2,85,914 ಹೊಸ ಸೋಂಕು ಪ್ರಕರಣ ಮತ್ತು 665 ಮಂದಿ ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ 13,824 ಸಕ್ರಿಯ ಸೋಂಕು ಸಂಖ್ಯೆಗಳು ಇಳಿಕೆಯಾಗಿ, 22,23,018ಕ್ಕೆ ತಲುಪಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.16.16 ಆಗಿದೆ. ಚೇತರಿಕೆ ಪ್ರಮಾಣ ಶೇ.93.23 ಆಗಿದೆ.