ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಡಾ. ಕೆ.ನಂದಿನಿದೇವಿ ಹೇಳಿದರು.
ಶಿರಾ ಮಿನಿವಿಧಾನಸೌಧದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು ಹಾಗೂ ಏಜೆಂಟರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
41 ತಂಡ ರಚನೆ: ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಮತದಾರರಿಂದ ನಮೂನೆ - 12 ಡಿ ಫಾರಂ ಹಾಗೂ ಅಂಚೆ ಮತದಾನಕ್ಕಾಗಿ 41 ತಂಡಗಳನ್ನು ರಚಿಸಲಾಗಿದ್ದು, ತಂಡದೊಂದಿಗೆ ಸೆಕ್ಟರ್ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ವಿಡಿಯೋಗ್ರಾಫರ್, ಬಿಎಲ್‌ಒ ಹಾಗೂ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ ಎಂದರು.
ಪ್ರಚಾರಕ್ಕೆ ಅವಕಾಶವಿರುವುದಿಲ್ಲ: ಅಂಚೆ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುವುದು. ಅಂಚೆ ಮತದಾನ ತಂಡದೊಂದಿಗೆ ಅಭ್ಯರ್ಥಿಗಳ ಏಜೆಂಟರುಗಳು ಹಾಜರಿದ್ದು, ವೀಕ್ಷಣೆ ಮಾಡಬಹುದು. ಆದರೆ ಅಂಚೆ ಮತದಾನದ ವೇಳೆ ಯಾವುದೇ ಪ್ರಚಾರಕ್ಕೆ ಅವಕಾಶವಿರುವುದಿಲ್ಲ ಎಂದರು.
ಮತದಾನದ ರಹಸ್ಯ ಕಾಪಾಡಲಾಗುವುದು: ದಿವ್ಯಾಂಗ ಮತ್ತು 80 ವರ್ಷ ವಯಸ್ಸಿನ ಮತದಾರರು ಮತಚಲಾಯಿಸುವಾಗ ಅಂಚೆ ಪತ್ರದಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಮುಂದೆ ಗುರುತು ಮಾರ್ಕ್ ಹಾಕುವ ಮೂಲಕ ತಮ್ಮ ಮತದಾನವನ್ನು ಘೋಷಣೆ ಮಾಡಿಕೊಳ್ಳುತ್ತಾರೆ. ಅಂಚೆ ಮತದಾರರ ತಂಡವು ಅ. 25 ಹಾಗೂ 26ರಂದು ಭೇಟಿ ನೀಡಿದಾಗ ಮತದಾರರು ಇಲ್ಲದಿದ್ದರೆ ಎರಡನೇ ಬಾರಿ ಅ.30 ಮತ್ತು 31ರಂದು ತಂಡ ಮನೆಗೆ ಭೇಟಿ ನೀಡಲಿದೆ. ಅದೇ ಕೊನೆಯ ಬಾರಿಯಾಗಿರುತ್ತದೆ. ಅಂಚೆ ಮತದಾನದ ಸಮಯದಲ್ಲಿ ವ್ಯತ್ಯಾಸವಾದರೂ ಮತದಾನದ ರಹಸ್ಯವನ್ನು ಕಾಪಾಡಲಾಗುವುದು ಎಂದರು.
ಅಭ್ಯರ್ಥಿಗಳಿಗೆ ಮಾಹಿತಿ: 28 ಲಕ್ಷದಿಂದ 30 ಲಕ್ಷದ 80 ಸಾವಿರದವರೆಗೆ ಚುನಾವಣಾ ವೆಚ್ಚ ಅಧಿಕವಾಗಿರುವ ಬಗ್ಗೆ ಸಭೆಗೆ ತಿಳಿಸಿದರು. ಅಲ್ಲದೆ ನಗದು ವಹಿವಾಟನ್ನು 20 ಸಾವಿರ ರೂ. ಗಳಿಂದ 10 ಸಾವಿರ ರೂ.ಗಳಿಗೆ ಇಳಿಕೆ ಮಾಡಿರುವ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಶಿರಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕಿ ಬಿ.ಮಹೇಶ್ವರಿ, ಚುನಾವಣಾ ವೆಚ್ಚ ವೀಕ್ಷಕ ಮೃತ್ಯುಂಜಯ ಸೇನಿ, ತಹಶೀಲ್ದಾರ್ ಮಮತ ಇದ್ದರು.
ಉಪ ಚುನಾವಣೆ ಎಡಗೈನ ಮಧ್ಯದ ಬೆರಳಿಗೆ ಶಾಹಿ : ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನ.3ರಂದು ನಡೆಯಲಿದ್ದು ಚುನಾವಣಾ ಮತದಾನದಂದು ಮತದಾರರಿಗೆ ಎಡಗೈನ ಮಧ್ಯದ ಬೆರಳಿಗೆ ಶಾಹಿ ಹಾಕಲು ಚುನಾವಣಾ ಆಯೋಗ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ
ಶಿರಾ ಉಪ ಚುನಾವಣೆಯಲ್ಲಿ ಕೋವಿಡ್ ನಿಯಮ ಕಡ್ಡಾಯವಾಗಿರುತ್ತದೆ.ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿರ ಬೇಕು, ಕೋವಿಡ್ ನಿಯಮ ಪಾಲಿಸದೇ ಹೋದರೆ ಅಂತಹ ರಾಜಕೀಯ ಪಕ್ಷಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಡಾ.ಕೆ.ನಂದಿನಿದೇವಿ, ಚುನಾವಣಾಧಿಕಾರಿ