ಬಳ್ಳಾರಿ: ಡಯಾಬಿಟಿಸ್, ಹೈಪರ್ ಟನ್ಷನ್, ಡಯಾಲಿಸಿಸ್, ಗರ್ಭಿಣಿ, ಎಚ್‌ಐವಿ ಸೇರಿದಂತೆ ಇನ್ನಿತರೆ ಕೋಮೋರ್ಬಿಡಿಟಿ ಕಾಯಿಲೆ ಇರುವ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಲ್ಲಿ ಅಂತವರನ್ನು ಇನ್ನುಮುಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಹಾಗೂ ಉಳಿದ ಕೋವಿಡ್ ಸೊಂಕಿತರನ್ನು ಒಪಿಜೆ ಸಂಜೀವಿನಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟ ಸಂದರ್ಭದಲ್ಲಿ ಈ ರೀತಿಯಂತೆ ಸೋಂಕಿತರನ್ನು ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಸಂಜೀವಿನಿ ಆಸ್ಪತ್ರೆ ಭರ್ತಿ ಆದರೆ, ನಂತರ ಡೆಂಟಲ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಸೊಂಕಿತರನ್ನು ಶಿಫ್ಟ್ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳಾಗದಂತೆ ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ಮೂಗು ಮತ್ತು ಗಂಟಲು ದ್ರವ ತೆಗೆದ ನಂತರ ಹೊರಗಡೆ ಹೋಗದಂತೆ ಸೂಚನೆ ಕೊಡಬೇಕು ಹಾಗೂ ಅದಕ್ಕೆ ಸಂಬಂಧಿ ಸಿದ ಕರಪತ್ರ ನೀಡಿ ಹಾಗೂ ದ್ರವ ಪಡೆದವರ ವರದಿ ಯಾವುದೇ ಬರಲಿ ಅವರಿಗೆ ಮಾಹಿತಿ ಕೊಡಿ ಹಾಗೂ ಜಿಂದಾಲ್‌ನವರಿಗೆ ತಮ್ಮ ಸಿಬ್ಬಂದಿ ತಪಾಸಣೆ ನಡೆಸಿದ ಮಾಹಿತಿ ಕೊಡಿ ಎಂದರು.
ಮುಂದಿನ ದಿನಗಳಲ್ಲಿ ತಾಲೂಕು ಆಸ್ಪತ್ರೆಗಳನ್ನು ಕೂಡ ಕೋವಿಡ್‌ಗಾಗಿ ಬಳಸಿಕೊಳ್ಳಲಾಗುತ್ತಿರುವುದರಿಂದ ಎಲ್ಲ ಅಗತ್ಯ ಸಲಕರಣೆಗಳು ಹಾಗೂ ಇನ್ನಿತರೆ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು. ಜೆಎಸ್‌ಡಬ್ಲೂನಲ್ಲಿ ಜೂ.17ರ ಸಂಜೆಯಿಂದಲೇ ಪ್ರವೇಶ ಮತ್ತು ಹೊರಹೋಗುವಿಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಜೂ. 30ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಜೆಎಸ್‌ಡಬ್ಲೂನಲ್ಲಿ ಕೆಲಸ ಮಾಡುವ ಸಿಬ್ಬಂದಿ ಜೆಎಸ್‌ಡಬ್ಲೂ ಟೌನ್‌ಶಿಪ್‌ನಲ್ಲಿಯೇ ಇಟ್ಟುಕೊಳ್ಳಬೇಕು. ಈಗಾಗಲೇ ಈ ಕುರಿತು ಸವಿವರವಾದ ಆದೇಶ ಹೊರಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ. ನಿತೀಶ್, ಎಡಿಸಿ ಮಂಜುನಾಥ, ಡಿಎಚ್‌ಒ ಜನಾರ್ಧನ್ ಸೇರಿದಂತೆ ಇನ್ನಿತರರು ಇದ್ದರು.