ಶಾರ್ಜಾ:ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕವಾಗಿ ಲಾಕ್ ಡೌನ್ ಮುಂದುವರಿದಿದ್ದು, ಏತನ್ಮಧ್ಯೆ ದುಬೈನ ಎರಡು ಪ್ರಮುಖ ವಾಣಿಜ್ಯ ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಎಮಿರೇಟ್ಸ್ ಆಫ್ ದುಬೈ ತಿಳಿಸಿದೆ.
ದೇಶಾದ್ಯಂತ ಒಂದು ವಾರಗಳ ಕಾಲ ಜಾರಿಯಲ್ಲಿದ್ದ ಕೋವಿಡ್ 19 ಕರ್ಫ್ಯೂವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಕೊನೆಗೊಳಿಸಿದ ಬಳಿಕ ಅತೀ ಕಡಿಮೆ ಆದಾಯದ ವಲಸಿಗ ಕಾರ್ಮಿರನ್ನು ಹೊಂದಿರುವ ಅಧಿಕ ಜನಸಂಖ್ಯೆ ಹೊಂದಿದ್ದ ಜಿಲ್ಲೆಗಳಲ್ಲಿ ಲಾಕ್ ಡೌನ್ ಅಂತ್ಯಗೊಳಿಸಿರುವುದಾಗಿ ವರದಿ ವಿವರಿಸಿದೆ.
ಎಮಿರೇಟ್ಸ್ ನಾದ್ಯಂತ ಬೆಳಗ್ಗೆ 6ಗಂಟೆಯಿಂದ ರಾತ್ರಿ ಹತ್ತು ಗಂಟೆವವರೆಗೆ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಶುಕ್ರವಾರ ವಾಪಸ್ ಪಡೆದಿತ್ತು. ಇದೀಗ ಅಲ್ ರಾಸ್ ಮತ್ತು ನೈಫ್ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ.
ಕಳೆದ ಎರಡು ದಿನಗಳಿಂದ ಎರಡು ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ 19 ವೈರಸ್ ನ ಹೊಸ ಪ್ರಕರಣಗಳು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಮುಖ್ಯ ಸಮಿತಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ ಎಂದು ಸರ್ಕಾರಿ ಪ್ರಕಟಣೆಯಲ್ಲಿ ವಿವರಿಸಿದೆ.
ಒಂದು ತಿಂಗಳಲ್ಲಿ ಅಲ್ ರಾಸ್ ಮತ್ತು ನೈಫ್ ನಲ್ಲಿ 6ಸಾವಿರಕ್ಕೂ ಅಧಿಕ ಜನರಿಗೆ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದೆ. ಯುಎಇ ನಲ್ಲಿ 10,300ಕ್ಕೂ ಅಧಿಕ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, 76 ಜನರು ಸಾವನ್ನಪ್ಪಿದ್ದರು.