Advertisement

ಕೋವಿಡ್ ಪ್ಯಾಕೇಜ್: 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು ನೀಡಿಕೆ

01:31 PM Jun 22, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ‘ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟದಲ್ಲಿರುವ ಕಲಾವಿದರುಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿಕೆಗೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ 3,000 ರೂ.ಗಳ ಆರ್ಥಿಕ ನೆರವು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಡಿ.ಬಿ.ಟಿ. ಮೂಲಕ ಒಟ್ಟು 6.23 ಕೋಟಿ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾದ ದುರ್ಬಲ ವರ್ಗದವರಿಗೆ ಒಟ್ಟು 2,050 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳು ಮೊದಲಾದವರಿಗೆ ಡಿ.ಬಿ.ಟಿ. ಮೂಲಕ ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ ವರ್ಗಗಳಿಗೂ ಶೀಘ್ರವೇ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ. ಮೊದಲ ಅಲೆಯ ಸಂದರ್ಭದಲ್ಲಿಯೂ ಕಲಾವಿದರಿಗೆ ನೆರವು ನೀಡಲಾಗಿತ್ತು. ಈ ಬಾರಿಯೂ ಸರ್ಕಾರ ಅವರ ನೆರವಿಗೆ ಧಾವಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿ, ಕಲಾವಿದರ ದಾಖಲೆಗಳನ್ನು ಪರಿಶೀಲಿಸಿ, ಅತ್ಯಂತ ಪಾರದರ್ಶಕವಾಗಿ ನೆರವು ನೀಡಲು ಮಂಜೂರಾತಿ ನೀಡಲಾಗಿದೆ. ಫಲಾನುಭವಿಗಳು ಡಿ.ಬಿ.ಟಿ. ಆಪ್ ಮುಖಾಂತರ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ:ತೃತೀಯ-ಚತುರ್ಥ ರಂಗದಿಂದ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ: ಪ್ರಶಾಂತ್ ಕಿಶೋರ್

ಇದೀಗ ವಿವಿಧ ಜಿಲ್ಲೆಗಳಲ್ಲಿ ನಿರ್ಬಂದಗಳನ್ನು ತೆರವು ಗೊಳಿಸಲಾಗಿದೆ. ಆದರೆ ಕಲಾವಿದರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಜೊತೆಗೆ ಲಸಿಕೆಯನ್ನು ಸಹ ಸರ್ಕಾರ ಉಚಿತವಾಗಿ ನೀಡುತ್ತಿದ್ದು, ತಪ್ಪದೆ ಹಾಕಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.

Advertisement

ಸಮಾರಂಭದಲ್ಲಿ ಮಾತನಾಡಿದ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಮೊದಲ ಅಲೆಯ ಸಂದರ್ಭದಲ್ಲಿಯೂ 17 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ನೆರವು ನೀಡಲಾಗಿತ್ತು. ಈಗ ಮತ್ತೆ ಕಲಾವಿದರಿಗೆ ತಲಾ 3 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ರವಿಶಂಕರ್, ನಿರ್ದೇಶಕ ಎಸ್. ರಂಗಪ್ಪ, ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next