Advertisement

ಜಿಲ್ಲಾಡಳಿತಕ್ಕೆ ತಲೆನೋವಾದ ಪಡೀಲಿನ ಆಸ್ಪತ್ರೆಯ ಕೋವಿಡ್ ಮೂಲ !

09:17 AM May 02, 2020 | mahesh |

ಮಂಗಳೂರು: ದ. ಕ. ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ದಿಂದ ಸಾವನ್ನಪ್ಪಿದ ಮೂವರಲ್ಲಿ ಇಬ್ಬರು ಪಡೀಲಿನ ಫಸ್ಟ್‌ ನ್ಯೂರೊ ಆಸ್ಪತ್ರೆಯ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರೇ ಆಗಿದ್ದಾರೆ. ಆದರೆ ಇದರ ಮೂಲ ಯಾವುದು ಎಂದು ಪತ್ತೆಯಾಗದೆ ಜಿಲ್ಲಾಡಳಿತಕ್ಕೂ ತಲೆನೋವಾಗಿದೆ.

Advertisement

ಸೋಂಕು ಎಲ್ಲಿಂದ ತಗಲಿತು ಎನ್ನುವುದನ್ನು ಮೊದಲ ಸಾವು ಸಂಭವಿಸಿ 12 ದಿನಗಳು ಕಳೆದರೂ ಪತ್ತೆ ಮಾಡುವುದಕ್ಕೆ ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ ವೃದ್ಧೆಯನ್ನು (ಅತ್ತೆ) ನೋಡಲು ಬರುತ್ತಿದ್ದ ಸೊಸೆ, ಬಂಟ್ವಾಳದ ಮಹಿಳೆಯು ಎ. 19ರಂದು ಸಾವನ್ನಪ್ಪಿದ್ದರೆ ಅತ್ತೆ ಎ. 23ರಂದು ಮೃತಪಟ್ಟಿದ್ದರು. ಆ ಬಳಿಕ ವೃದ್ಧೆಯ ನೆರೆಮನೆಯ ಮಹಿಳೆ ಕೋವಿಡ್ ಸೋಂಕಿತರಾಗಿ ಎ. 30 ರಂದು ಸಾವನ್ನಪ್ಪಿದ್ದರು. ಅದೇ ಆಸ್ಪತ್ರೆಯಲ್ಲಿ ಕೆಲಸಕ್ಕೆ ಇದ್ದ ಪಾಣೆಮಂಗಳೂ ರಿನ ಮಹಿಳೆ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಕ್ತಿನಗರದ ವೃದ್ಧೆ ಮತ್ತು ಆಕೆಯ ಆರೈಕೆ ಮಾಡುತ್ತಿದ್ದ ಮಗ, ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿ ಮನೆಗೆ ಬಂದಿದ್ದ ಬೋಳೂರಿನ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇಷ್ಟು ಮಂದಿಗೆ ಆಸ್ಪತ್ರೆಯ ಸಂಪರ್ಕದಲ್ಲಿ ಇದ್ದವರಿಂದ ಸೋಂಕು ತಗಲಿದೆ.

ಹಾಗಾದರೆ ಬಂಟ್ವಾಳದಲ್ಲಿ ಮೊದಲ ಸೋಂಕು ಪತ್ತೆಯಾಗಿ ಮೃತಪಟ್ಟಿದ್ದ ಮಹಿಳೆ ಯಿಂದ ಆಸ್ಪತ್ರೆಯಲ್ಲಿದ್ದವರಿಗೆ ಸೋಂಕು ಹರಡಿರಬಹುದೇ ಅಥವಾ ಆಸ್ಪತ್ರೆಯಲ್ಲಿದ್ದ ಸಂಪರ್ಕದವರಿಂದ ಮೊದಲು ಬಂಟ್ವಾಳದ ಮಹಿಳೆಗೆ ಸೋಂಕು ಹರಡಿರಬಹುದೇ ಎನ್ನುವುದು ಇಲ್ಲಿಯವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಗಮನಾರ್ಹ ಅಂಶವೆಂದರೆ, ಬಂಟ್ವಾಳ ದಲ್ಲಿ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ್ದರು ಎಂಬ ಕಾರಣಕ್ಕೆ ಅಲ್ಲಿನ ಸ್ಥಳೀಯ ವೈದ್ಯರೊಬ್ಬರ ಮೇಲೆ ಪ್ರಕರಣ ವರದಿಯಾದ ಮರುದಿನವೇ ಕೇಸ್‌ ದಾಖಲಿಸಲಾಗಿತ್ತು. ಫಸ್ಟ್‌ ನ್ಯೂರೊದಲ್ಲಿ ಕೋವಿಡ್ ಸೋಂಕು ಪ್ರಕರಣ ಬೆಳಕಿಗೆ ಬಂದು ಇಷ್ಟು ದಿನ ಕಳೆದಿದ್ದರೂ ಆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಿ ಅದರ ವ್ಯವಸ್ಥಾಪಕ ನಿರ್ದೇಶಕರನ್ನೇ ಅಲ್ಲಿನ ನೋಡಲ್‌ ಅಧಿಕಾರಿಯನ್ನಾಗಿ ನೇಮಕಗೊಳಿಸಿ ರುವುದು ಬಿಟ್ಟರೆ ಅಲ್ಲಿಗೆ ಸೋಂಕು ಎಲ್ಲಿಂದ ಹರಡಿರಬಹುದು ಎನ್ನುವತ್ತ ತನಿಖೆಯನ್ನು ತೀವ್ರಗೊಳಿಸಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಕೇರಳದಿಂದ ಬಂದಿರಬಹುದೆ?
“ಉದಯವಾಣಿ’ಗೆ ಪ್ರತಿಕ್ರಿಯಿಸಿ ರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಚಂದ್ರ ಬಾಯರಿ, “ಫಸ್ಟ್‌ ನ್ಯೂರೊ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಎಲ್ಲರ ವಿವರ ಕಲೆ ಹಾಕಿ ವಿಚಾರಣೆ ನಡೆಸಲಾಗುತ್ತಿದೆ. ಸೋಂಕು ಕೇರಳದಿಂದ ಬಂದ ಯಾರಿಂದಲಾದರೂ ಬಂದಿರಬಹುದೇ ಎಂಬ ಗುಮಾನಿ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಕೇರಳದ ಎಲ್ಲ ರೋಗಿಗಳನ್ನು, ಮತ್ತವರ ಸಂಬಂಧಿಕರ ವಿಚಾರಣೆ ನಡೆಸಲಾಗಿದೆ. ಆದರೆ ಇದುವರೆಗಿನ ಪ್ರಾಥಮಿಕ ತನಿಖೆಯಿಂದ ಯಾವುದೇ ಸುಳಿವು ಲಭ್ಯವಾಗಿಲ್ಲ. ಇದೀಗ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಇತರ ಭಾಗಗಳಿಂದ ಈ ಆಸ್ಪತ್ರೆಗೆ ಭೇಟಿ ನೀಡಿದ್ದ ಎಲ್ಲರ ಮಾಹಿತಿ ಕೂಡ ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಫಸ್ಟ್‌ ನ್ಯೂರೊ ಆಸ್ಪತ್ರೆಯ ಸಂಪರ್ಕದಲ್ಲಿ ಇದ್ದವರಿಗೆ ಕೋವಿಡ್ ಸೋಂಕು ಎಲ್ಲಿಂದ, ಹೇಗೆ ಬಂತು ಎನ್ನುವ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಕೆಲವೇ ದಿನಗಳಲ್ಲಿ ಅದು ಗೊತ್ತಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು

Advertisement

ಫಸ್ಟ್‌ ನ್ಯೂರೊ ಆಸ್ಪತ್ರೆಯ ಸಂಪರ್ಕದಲ್ಲಿ ಇದ್ದವರಿಗೆ ಕೋವಿಡ್ ಸೋಂಕು ಎಲ್ಲಿಂದ ಬಂತು ಎನ್ನುವ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಬಂಟ್ವಾಳದ ಮೂಲದಿಂದ ಬಂತೇ ಅಥವಾ ಆಸ್ಪತ್ರೆಗೆ ಬಂದ ಯಾರಿಂದಾದರೂ ಹರಡಿರಬಹುದೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಅಂತಿಮ ತೀರ್ಮಾನ ಸಾಧ್ಯವಾಗಿಲ್ಲ.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next