Advertisement

ಕೋವಿಡ್‌ ರೂಪಾಂತರಿ ವೈರಸ್‌; ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ :ಸಚಿವ ಡಾ.ಕೆ.ಸುಧಾಕರ್‌

03:31 PM Dec 21, 2022 | Team Udayavani |

ಬೆಳಗಾವಿ : ಕೋವಿಡ್‌ನಲ್ಲಿ ಹೊಸ ರೂಪಾಂತರಿ ವೈರಸ್‌ಗಳು ಕಂಡುಬರುತ್ತಿರುವುದರಿಂದ ಎಲ್ಲಾ ರೋಗಿಗಳ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಅದಕ್ಕಾಗಿ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚೀನ, ಜಪಾನ್‌ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ನ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಚೀನದಲ್ಲಿ ಆಸ್ಪತ್ರೆ ದಾಖಲಾತಿ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಲಸಿಕೆಯ ಮೂರನೇ ಡೋಸ್‌ ಪಡೆಯಲು ಆದ್ಯತೆ ನೀಡಬೇಕಿದೆ. ಹೊಸದಾಗಿ ಸೋಂಕಿಗೊಳಗಾಗುವವರ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸ್‌ ಪರೀಕ್ಷೆಗೆ ನೀಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದೆ. ಇದಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತಿ ಹೆಚ್ಚು ಪ್ರಯಾಣಿಕರು ಬರುತ್ತಿದ್ದಾರೆ. ಇಲ್ಲಿಯೂ ನಿಗಾ ಇರಿಸಲು ಆರಂಭಿಸಲಾಗುವುದು. ಎರಡು ಡೋಸ್‌ಗಳಲ್ಲಿ ಶೇ.100 ರಷ್ಟು ಸಾಧನೆಯಾಗಿದೆ. ಆದರೆ ಅನೇಕರು ಮೂರನೇ ಡೋಸ್‌ ಪಡೆದಿಲ್ಲ. ಅಂತಹವರು ಮುಂದೆ ಬಂದು ಮೂರನೇ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗದರ್ಶನ ಕೂಡ ಪಡೆದುಕೊಂಡು ಕ್ರಮ ವಹಿಸಲಾಗುವುದು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು. ಹಾಗೆಯೇ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next