Advertisement

ವಿದೇಶ ಪ್ರಯಾಣ ಮಾಡಿದವರಿಗೇ ಕೋವಿಡ್‌ ಸೋಂಕು ಪತ್ತೆ: ಮಾಸ್ಕ್ ಕಡ್ಡಾಯ!

08:04 PM Jun 28, 2022 | Team Udayavani |

ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ ಸರಾಸರಿ 600ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ವಿದೇಶ ಪ್ರಯಾಣ ಮಾಡಿದವರಲ್ಲಿಯೇ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ಕೆ.ವಿ.ತ್ರಿಲೋಕಚಂದ್ರ ಹೇಳಿದ್ದಾರೆ.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ 17 ಸಾವಿರ ಜನರನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಸರಾಸರಿ 600 ಮಂದಿಗೆ ಸೋಂಕು ದೃಢಪಡುತ್ತಿದೆ.

ಸೋಂಕಿತರ ಪ್ರವಾಸದ ಇತಿಹಾಸ ಪರಿಶೀಲಿಸಿದಾಗ ಬಹುತೇಕರು ವಿದೇಶ ಹಾಗೂ ಹೊರ ರಾಜ್ಯಗಳಿಗೆ ಪ್ರಯಾಣ ಮಾಡಿರುವುದು ಕಂಡುಬಂದಿದೆ. ಅವರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.

ಮತ್ತೊಂದೆಡೆ ಜಲಮಂಡಳಿ ಸಹಕಾರದೊಂದಿಗೆ ನಗರದ ವಿವಿಧ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿನ ಕೊಳಚೆ ನೀರಿನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಯಾವುದೇ ಕೋವಿಡ್‌ ರೂಪಾಂತರಿ ತಳಿ ಪತ್ತೆಯಾಗಿಲ್ಲ. ಈವರೆಗೆ ಸೋಂಕು ದೃಢಪಟ್ಟವರಲ್ಲಿ 3 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದರೂ, ಬಹುತೇಕರು ಹೋಮ್‌ ಐಸೋಲೇಷನ್‌ ಆಗಿದ್ದಾರೆ. ಒಟ್ಟು 62 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಮಾಸ್ಕ್ ಹಾಕದವರಿಗೆ ದಂಡಕ್ಕೆ ಪ್ರಸ್ತಾವನೆ
ಕೊರೊನಾ ಸೋಂಕು ಹರಡುವುದನ್ನು ಮೂಲದಲ್ಲಿಯೇ ತಡೆಗಟ್ಟಲು, ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಪಾಡಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮಗಳ ಪಾಲನೆಗೆ ಒತ್ತು ನೀಡಲಾಗಿದೆ. ಇನ್ನು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದನ್ನು ಜಾರಿಗೊಳಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಯಾವುದೇ ಆದೇಶ ಬಂದಿಲ್ಲ ಎಂದು ಡಾ. ತ್ರಿಲೋಕ್‌ಚಂದ್ರ ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next