Advertisement

ಕ್ವಾರಂಟೈನ್‌ ಸೂಚನೆ ಕಡೆಗಣಿಸಿದ ವೃದ್ಧನಿಗೆ ಸೋಂಕು

09:38 AM Jun 29, 2020 | Suhan S |

ಹರಿಹರ: ಹೋಂ ಕ್ವಾರಂಟೈನ್‌ ನಲ್ಲಿರುವಂತೆ ವೈದ್ಯರು ನೀಡಿದ ಸೂಚನೆ ಕಡೆಗಣಿಸಿದ ವೃದ್ಧರೊಬ್ಬರು ನಗರಕ್ಕೆ ವಾಪಸ್ಸಾಗುವ ಮೂಲಕ ಇಲ್ಲಿನ ಗಂಗಾನಗರಕ್ಕೆ ಸೋಂಕು ಹೊತ್ತು ತಂದಂತಾಗಿದೆ.

Advertisement

ಎಪಿಎಂಸಿ ಹಿಂಭಾಗದ ಗಂಗಾನಗರದ ವ್ಯಕ್ತಿಯೋರ್ವರಿಗೆ ಶನಿವಾರ ಸಂಜೆ ಕೋವಿಡ್ ಪಾಸಿಟಿವ್‌ ಕಂಡು ಬಂದಿದೆ. 65 ವರ್ಷದ ಕೂಲಿ ಕೆಲಸ ಮಾಡುವ ಈ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಕೆಲ ದಿನಗಳ ಹಿಂದೆ ಹಾವೇರಿ ತಾಲೂಕು ದೇವರಗುಡ್ಡ ಪಿಎಚ್‌ಸಿ ವ್ಯಾಪ್ತಿಯ ಬರಡಿ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಭೇಟಿ ನೀಡಿದ್ದರು. ಆ ಮನೆಗೆ ಇವರ ಸಂಬಂಧಿ  ಯಾದ ಮಂಡ್ಯದ ಹಾಟ್‌ಸ್ಪಾಟ್‌ ಪ್ರದೇಶದ ನಿವಾಸಿಯೊಬ್ಬರು ಬಂದಿದ್ದರು. ಈ ಮಾಹಿತಿ ತಿಳಿದ ಅಲ್ಲಿನ ಆರೋಗ್ಯ ಇಲಾಖೆಯವರು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದರು. ಆದರೂ ಇವರು ಕಣ್ತಪ್ಪಿಸಿ ಗಂಗಾನಗರದ ಮಗಳ ಮನೆಗೆ ಆಗಮಿಸಿದ್ದಾರೆ. ಕೊಳಚೆ ಪ್ರದೇಶದಲ್ಲಿ ಸಾಮೂಹಿಕವಾಗಿ ಗಂಟಲು ದ್ರವ ಸಂಗ್ರಹಿಸುವಾಗ ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬದವರು ಸಹ ಪರೀಕ್ಷೆಗೆ ಒಳಗಾಗಿದ್ದರು. ಶನಿವಾರ ಸೋಂಕು ದೃಢಪಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ವೃದ್ಧನನ್ನು ದಾವಣಗೆರೆ ಕೋವಿಡ್‌-19 ಆಸ್ಪತ್ರೆಗೆ ಸಾಗಿಸಿದರು.

ಈತನ ಪ್ರಾಥಮಿಕ ಸಂಪರ್ಕದಲ್ಲಿರುವ ಐವರು, ದ್ವಿತೀಯ ಸಂಪರ್ಕದಲ್ಲಿರುವ ಇಬ್ಬರ ದ್ರವ ಮಾದರಿ ಸಂಗ್ರಹಿಸಿ ಹೋಂ ಕ್ವಾರಂಟೈನ್‌ ಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಇದುವರೆಗೆ ಒಟ್ಟು 17 ಕೋವಿಡ್‌ ಪ್ರಕರಣ ವರದಿಯಾಗಿದ್ದು, ಈ ಪೈಕಿ ರಾಜನಹಳ್ಳಿಯ ಗರ್ಭಿಣಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಮರಳಿದ್ದಾರೆ. ಗಂಗಾನಗರದಲ್ಲಿ ಭಾನುವಾರ ಆರೋಗ್ಯ ಇಲಾಖೆ ಸಿಬ್ಬಂದಿ ಸಂಚರಿಸಿ ನಿವಾಸಿಗಳಿಗೆ ಸೂಚನೆ ನೀಡಿದರು.

ನಗರಸಭೆ ಸಿಬ್ಬಂದಿ ಸ್ವಚ್ಛತೆ ಕೈಗೊಂಡು ಕ್ರಿಮಿನಾಶಕ ಸಿಂಪಡಿಸಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ಡಾ| ಡಿ.ಎಂ. ನಟರಾಜ್‌, ಹಿರಿಯ ಆರೋಗ್ಯ ಸಹಾಯಕರಾದ ಎಂ.ವಿ. ಹೊರಕೇರಿ, ಎಂ. ಉಮ್ಮಣ್ಣ, ದಾದಾಪೀರ್‌, ಉಮ್ಲಾ ನಾಯಕ್‌, ಸಂತೋಷ್‌ ರೋಖಡೆ, ಗ್ರಾಮಲೆಕ್ಕಾಧಿಕಾರಿ ಹೇಮಂತ್‌ ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next