ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಹಾವಳಿ ವ್ಯಾಪಕವಾಗಿದ್ದು, ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಐಜಿ ಕಚೇರಿಗೂ ಮಹಾಮಾರಿ ರೋಗ ಕಾಲಿಟ್ಟಿದೆ.
ರವಿವಾರ ಮತ್ತೆ 79 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕಲಬುರಗಿ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲೇ 69 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಚಿಂಚೋಳಿ ತಾಲೂಕಿನಲ್ಲಿ ಮೂವರು, ಅಫಜಲಪುರ ಮತ್ತು ಆಳಂದ ತಾಲೂಕಿನಲ್ಲಿ ತಲಾ ಇಬ್ಬರು, ಚಿತ್ತಾಪುರ, ಜೇವರ್ಗಿ ತಾಲೂಕಿನಲ್ಲಿ ಒಬ್ಬರಿಗೆ ಕೋವಿಡ್ ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,103ಕ್ಕೆ ಏರಿಕೆಯಾಗಿದೆ. 79 ಸೋಂಕಿತರಲ್ಲಿ 43 ಜನರ ಕೋವಿಡ್ ಸೋಂಕಿನ ಮೂಲವೇ ಗೊತ್ತಾಗಿಲ್ಲ. ಉಳಿದ 30 ಮಂದಿ ಸೋಂಕಿತರು ಉಸಿರಾಟ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ಬಿಹಾರ ಪ್ರವಾಸ ಹಿನ್ನೆಲೆಯ ತಲಾ ಮೂವರಿಗೂ ಸೋಂಕು ಕಾಣಿಸಿಕೊಂಡಿದೆ.
ಇವರಲ್ಲಿ 23 ಮಹಿಳೆಯರು ಸೇರಿದ್ದು, 10 ಮಕ್ಕಳೂ ಇದ್ದಾರೆ. ಪೊಲೀಸ್ ಭವನದಲ್ಲಿ ಈಗಾಗಲೇ ಕೋವಿಡ್ ವಕ್ಕರಿಸಿದ್ದು, ಎಸ್‌ಪಿ ಕಚೇರಿಯ ಏಳು ಜನರಿಗೆ ಸೋಂಕು ಹರಡಿತ್ತು. ಈಗ ಇದೇ ಭವನದಲ್ಲಿರುವ ಐಜಿ ಕಚೇರಿಗೂ ಮಹಾಮಾರಿ ರೋಗ ಲಗ್ಗೆ ಇಟ್ಟಿದೆ. ಇಲ್ಲಿ 30 ವರ್ಷ, 41 ವರ್ಷ, 46 ವರ್ಷ ಹಾಗೂ 59 ವರ್ಷದ ಪೊಲೀಸ್ ಸಿಬ್ಬಂದಿಗೆ ವೈರಾಣು ತಲುಗಿರುವುದು ಖಚಿತವಾಗಿದೆ. ಅಲ್ಲದೇ, ಡಿಆರ್ ಪೊಲೀಸ್ ಮುಖ್ಯ ಕಚೇರಿಯಲ್ಲಿ 32 ವರ್ಷದ ಸಿಬ್ಬಂದಿಗೆ ಕೋವಿಡ್ ಅಂಟಿದೆ.
ಮಹಿಳಾ ಪೊಲೀಸ್ ಠಾಣೆಯ 28 ವರ್ಷದ ಮಹಿಳಾ ಸಿಬ್ಬಂದಿಗೂ ಕೋವಿಡ್ ಸೋಂಕು ಪತ್ತೆಯಾಗಿದೆ. ನಾಗನಹಳ್ಳಿ ಸಮೀಪ ಪೊಲೀಸ್ ತರಬೇತಿ ಕೇಂದ್ರದಲ್ಲಿ 41 ವರ್ಷದ ಮಹಿಳಾ ಸಿಬ್ಬಂದಿ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ 27 ವರ್ಷದ ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ.
ಜಯದೇವ ಆಸ್ಪತ್ರೆಗೂ ಕೊರೊನಾ ಪ್ರವೇಶಿಸಿದ್ದು, ಇಲ್ಲಿ ಇಬ್ಬರು ಸಿಬ್ಬಂದಿ 28 ವರ್ಷ ಮತ್ತು 34 ವರ್ಷದ ಸಿಬ್ಬಂದಿಗೆ ಸೋಂಕು ಅಂಟಿದೆ. ನಗರದ ಹೊರ ವಲಯದ ಕಪನೂರ ಕೈಗಾರಿಕಾ ಪ್ರದೇಶಕ್ಕೂ ವೈರಾಣು ವ್ಯಾಪಿಸಿದೆ. ಇದಲ್ಲಿ ಕೈಲಾಸ್ ಇಂಡಸ್ಟ್ರೀಸ್‌ನ ಮೂವರಿಗೆ ಸೋಂಕು ಪತ್ತೆಯಾಗಿದೆ. ವಿದ್ಯಾನಗರದಲ್ಲಿ ಏಳು ಜನರು, ಚಪ್ಪಲ್ ಬಜಾರ್, ಸೂಪರ್ ಮಾರ್ಕೆಟ್, ಹಳೆ ಜೇವರ್ಗಿ ರಸ್ತೆಯಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.
ಇದೇ ವೇಳೆ 17 ಜನ ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ 2,103 ಸೋಂಕಿತರಲ್ಲಿ ಇದುವರೆಗೆ 1,477 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಇನ್ನು, 590 ಕೋವಿಡ್ ಪೀಡಿತರು ಐಸೋಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.