ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ಇಳಿಮುಖವಾಗುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಲಾಕ್‌ಡೌನ್ ನಿಯಮ ಸಡಿಲಗೊಳಿಸಿ ಕೆಲ ವಿನಾಯಿತಿ ನೀಡುತ್ತಿದೆ ಆದರೆ ದೇವಸ್ಥಾನಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ಇನ್ನೂ ವಿನಾಯಿತಿ ಸಿಕ್ಕಿಲ್ಲ. ಸಂಪ್ರದಾಯಕ್ಕೆ ತೊಂದರೆ ಬಾರದಂತೆ ನಿತ್ಯವೂ ಪೂಜಾ ಸೇವೆ ಮಾತ್ರ ಮುಂದುವರಿದಿದೆ.
ಮೊದಲ ಅಲೆಯಲ್ಲಿ ಅಷ್ಟು ತೀವ್ರತೆ ಕಾಣದಿದ್ದರೂ 2ನೇ ಅಲೆ ಜನರ ಜೀವನಕ್ಕೆ ಸಂಕಷ್ಟ ತಂದೊಡ್ಡಿದೆ. ರಾಜ್ಯದಲ್ಲಿ ಏಪ್ರಿಲ್ ತಿಂಗಳಲ್ಲಿ ಏರಿಕೆಯಾಗುತ್ತಿದ್ದಂತೆ ಜನದಟ್ಟಣೆಯ ಪ್ರದೇಶಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿ ಏ.20ರಿಂದಲೇ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಿ ಸೋಂಕು ನಿಯಂತ್ರಣಕ್ಕೆ ಮುಂದಾಗಿತ್ತಲ್ಲದೇ ಹಂತ ಹಂತವಾಗಿ ಲಾಕ್‌ಡೌನ್ ಜಾರಿಗೊಳಿಸಿ ಜನಸಂಚಾರಕ್ಕೆ, ಗುಂಪು ಸೇರುವುದಕ್ಕೆ ಬ್ರೇಕ್ ಹಾಕಿತ್ತು.
ಪ್ರಸ್ತುತ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣವು ಇಳಿಮುಖದತ್ತ ಸಾಗಿದೆಯಾದರೂ ಸಾವಿನ ಪ್ರಮಾಣವು ಇನ್ನೂ ಸೊನ್ನೆಯ ಹಂತಕ್ಕೆ ಬಂದಿಲ್ಲ. ಈ ಮಧ್ಯೆಯೇ ರಾಜ್ಯದ ಅಭಿವೃದ್ಧಿ ಹಾಗೂ ಜನರ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಲಾಕ್‌ಡೌನ್‌ನಲ್ಲಿ ಹೇರಿದ್ದ ನಿಯಮಗಳಿಗೆ ವಿನಾಯಿತಿ ನೀಡಿದೆ.
ದೇವಸ್ಥಾನಗಳ ಬಾಗಿಲು ತೆರೆಯೋದು ವಿಳಂಬ: ಕೊಪ್ಪಳ ಜಿಲ್ಲೆಯಲ್ಲಿನ ನಾಡಿನ ಪ್ರಸಿದ್ಧ ಹುಲಿಗೆಮ್ಮ ದೇವಿ ದೇವಸ್ಥಾನ, ಅಂಜಿನಾದ್ರಿ ಬೆಟ್ಟ, ಕನಕಾಚಲಪತಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳನ್ನು ಈಗಲೂ ಬಂದ್ ಮಾಡಲಾಗಿದೆ. ಬಾಗಿಲು ತೆರೆಯಲು ಸರ್ಕಾರ ಇನ್ನು ಅಧಿ ಕೃತ ಮುದ್ರೆ ಒತ್ತಿಲ್ಲ. ಈಗಲೇ ಏಕಾಏಕಿ ದೇವಸ್ಥಾನದ ಬಾಗಿಲು ತೆರೆದರೆ ಜನರು ದೇವಸ್ಥಾನಗಳಿಗೆ ಆಗಮಿಸಿ ಮತ್ತೆ ಸೋಂಕು ಉಲ್ಬಣಕ್ಕೆ ಕಾರಣವಾಗಲಿದೆ ಎಂಬ ಕಾರಣಕ್ಕೆ ಸರ್ಕಾರವೂ ಸಹ ದೇವಸ್ಥಾನ ಆರಂಭಿಸಬೇಕೋ, ಬೇಡವೋ ಎನ್ನುವ ಚಿಂತನೆಯಲ್ಲಿ ತೊಡಗಿದೆ.
ಸಹಜ ಸ್ಥಿತಿಯಲ್ಲಿದ್ದರೆ ಕೋಟಿ ಆದಾಯ: ಪ್ರತಿ ವರ್ಷವೂ ಮುಜರಾಯಿ ಇಲಾಖೆಯಡಿ ಬರುವ ಜಿಲ್ಲೆಯಲ್ಲಿನ ಅಂಜಿನಾದ್ರಿ, ಹುಲಿಗೆಮ್ಮ ದೇವಸ್ಥಾನಗಳಿಗೆ ಕೋಟಿ ಕೋಟಿ ಆದಾಯ ಬರುತ್ತಿತ್ತು. ಆದರೆ ಕೊರೊನಾ ಹೆಮ್ಮಾರಿ ದೇವರ ಹುಂಡಿಯ ಆದಾಯಕ್ಕೂ ಬ್ರೇಕ್ ಹಾಕಿದೆ. ದೇವಸ್ಥಾನ ನಿರ್ವಹಿಸುವ ನೂರಾರು ಕುಟುಂಬಗಳ ಹೊಟ್ಟೆಯ ಮೇಲೂ ಹೊಡೆದಿದೆ. ಈ ಮಧ್ಯೆಯೇ ದೇವಸ್ಥಾನಗಳ ಆಡಳಿತ ಮಂಡಳಿ ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಯಾವುದೇ ತೊಂದರೆ ಬಾರದಂತೆ ನಿತ್ಯ ಬೆಳಗ್ಗೆ-ಸಂಜೆ ಎರಡೊತ್ತು ಪೂಜಾ ಸೇವೆ ಸಲ್ಲಿಸಲಾಗುತ್ತಿದೆ. ಸರ್ಕಾರ ಮುಂದಿನ ದಿನದಲ್ಲಿ ಸೋಂಕು ಸೊನ್ನೆಯ ಹಂತಕ್ಕೆ ಬಂದಾಗ ದೇಗುಲದ ಬಾಗಿಲು ತೆರೆಯಲಿದೆ.