Advertisement

ಕಣ್ಣಿನ ಶಸ್ತ್ರ ಚಿಕಿತ್ಸೆಗೂ ಕೋವಿಡ್ ಕಂಟಕ

04:20 PM Apr 30, 2020 | mahesh |

ದೊಡ್ಡಬಳ್ಳಾಪುರ: ಕೋವಿಡ್ ಸಂಕಟ ಕೇವಲ ವಾಣಿಜ್ಯ-ವ್ಯವಹಾರಕಷ್ಟೇ ಅಲ್ಲದೆ, ಕಣ್ಣಿನ ಆರೋಗ್ಯಕ್ಕೂ ಕಂಟಕವಾಗಿ ಪರಿಣಮಿಸಿದೆ. ಕಣ್ಣಿನ ದೃಷ್ಟಿ ದೋಷ ನಿವಾರಣೆಗಾಗಿ ನಡೆಯಬೇಕಿರುವ ಶಸ್ತ್ರ ಚಿಕಿತ್ಸೆಗಳು ನಡೆಯದೇ ರೋಗಿಗಳು ಪರಿತಪಿಸುವಂತಾಗಿದೆ.

Advertisement

ಕಣ್ಣಿನ ಶಿಬಿರಗಳಿಲ್ಲ: ಲಯನ್ಸ್‌ ಕ್ಲಬ್‌ನಲ್ಲಿ ಪ್ರತಿ ತಿಂಗಳ ಮೊದಲನೇ ಸೋಮವಾರ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ನಡೆಯುತ್ತಿತ್ತು. ಕಳೆದ ಮಾರ್ಚ್‌ 2ರಂದು 265ನೇ ಶಿಬಿರ ಆಯೋಜಿಸಿ ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿ ಏ.6ರಂದು ನಡೆಯಬೇಕಿದ್ದ ಶಿಬಿರ, ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಮುಂದಿನ ಮೇ 4ರಂದು ನಡೆಯಲಿರುವ ಶಿಬಿರವನ್ನೂ
ಮುಂದೂಡಲಾಗುತ್ತಿದೆ. ಪ್ರತಿ ಗುರುವಾರ ಲಯನ್ಸ್‌ ಕ್ಲಬ್‌ನಲ್ಲಿ ತಜ್ಞ ವೈದ್ಯರು, ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಶಿಫಾರಸು ಮಾಡಲಾಗುತ್ತಿತ್ತು. ಅದಲ್ಲದೇ ಪ್ರತಿ ತಿಂಗಳು ಸುಮಾರು 200ರಿಂದ 250 ಮಂದಿಗೆ ಕಣ್ಣಿನ ತಪಾಸಣೆಗೆ ಒಳಗಾಗುತ್ತಿದ್ದು, ಅವರಲ್ಲಿ 50ರಿಂದ 60 ಮಂದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿ
ಹಿಂದಿರುಗುತ್ತಿದ್ದರು. ಆದರೆ ಶಿಬಿರಗಳು ನಡೆಯುತ್ತಿಲ್ಲ. ಹೀಗಾಗಿ ನೂರಾರು ಮಂದಿ ಕಣ್ಣಿನ ಚಿಕಿತ್ಸೆ ದೊರೆಯದೇ ಸಂಕಷ್ಟದಲ್ಲಿದ್ದಾರೆ.

ನೇತ್ರದಾನ ಇಲ್ಲ: ಕಣ್ಣಿನ ಸಾಮಾನ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕಣ್ಣಿನ ಕಾರ್ನಿಯಾ ಶಸ್ತ್ರ ಚಿಕಿತ್ಸೆಗಳು ಸ್ಥಗಿತಗೊಂಡಿರುವುದರಿಂದ ಮರಣಿಸಿದ ವ್ಯಕ್ತಿಗಳ ಕಣ್ಣು ಪಡೆಯದೇ ನಿಲ್ಲಿಸಲಾಗಿದೆ. ತಾಲೂಕಿನಲ್ಲಿ ಇದುವರೆಗೆ 1,464 ಕಣ್ಣುಗಳನ್ನು ನೇತ್ರದಾನದಿಂದ ಸಂಗ್ರಹಿಸಿ ನೀಡಲಾಗಿದೆ. ಕೋವಿಡ್ ಕಾರಣದಿಂದಾಗಿ ಈಗ ಆಲ್‌ ಇಂಡಿಯಾ ಐ ಬ್ಯಾಂಕ್‌ ಅಸೋಸಿಯೇಷನ್‌ ನಿರ್ದೇಶನದಂತೆ 45 ದಿನಗಳಿಂದ ಕಣ್ಣು ಪಡೆಯಲಾಗಿಲ್ಲ. ರಾಜ್ಯದಲ್ಲಿ ಸುಮಾರು 3 ಸಾವಿರ ಮಂದಿ ಹೆಚ್ಚುವರಿ ಶಸ್ತ್ರಚಿಕಿತ್ಸೆಗೆ ಕಾಯುತ್ತಿದ್ದಾರೆ ಎಂದು ಅಭಿಷೇಕ್‌
ನೇತ್ರಧಾಮದ ರಾಜ್‌ಕುಮಾರ್‌ ನೇತ್ರ ಸಂಗ್ರಹಣೆ ಕೇಂದ್ರದ ಮುಖ್ಯಸ್ಥ ಎಂ.ಬಿ.ಗುರುದೇವ ತಿಳಿಸಿದ್ದಾರೆ.

ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ ನಿಲ್ಲಿಸಿರಲಿಲ್ಲ. ಆದರೆ ಈ ಬಾರಿ ಕೋವಿಡ್ ದಿಂದ ನಡೆಸಲಾಗುತ್ತಿಲ್ಲ. ಸರ್ಕಾರ ಅನುಮತಿ ನೀಡಿದರೆ ಶಿಬಿರ ನಡೆಸಬಹುದು.
ಕೆ.ಮೋಹನ್‌ ಕುಮಾರ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ

●ಡಿ.ಶ್ರೀಕಾಂತ

Advertisement
Advertisement

Udayavani is now on Telegram. Click here to join our channel and stay updated with the latest news.

Next