Advertisement

ಕೊರೊನಾ ಕಪಿಮುಷ್ಟಿಗೆ ಕಂಗಾಲು!

09:53 AM Mar 20, 2020 | mahesh |

ಕೊರೊನಾ ಕಪಿಮುಷ್ಟಿಯಿಂದಾಗಿ ಜಗತ್ತು ತಲ್ಲಣಗೊಂಡಿದೆ. ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ಬೇರೆ ಬೇರೆ ಉದ್ಯಮದ ಮೇಲೆ ಆತಂಕದ ಕರಿಛಾಯೆ ಮೂಡಿದೆ. ಅದರಲ್ಲಿಯೂ ರಾಜ್ಯದಲ್ಲಿ ಮಾಲ್‌, ಶಾಲಾ, ಕಾಲೇಜುಗಳು ಬಂದ್‌ ಆಗುವ ಜತೆಗೆ ಸಿನೆಮಾ ಮಂದಿರಗಳು ಕೂಡ ಬಾಗಿಲು ಹಾಕಿದ ಕಾರಣದಿಂದ ಸಿನೆಮಾ ಇಂಡಸ್ಟ್ರಿ ತತ್ತರಿಸುವ ಹಾದಿಯಲ್ಲಿದೆ.

Advertisement

ಕರಾವಳಿಗಂತೂ ಇದರ ಪರಿಣಾಮ ಬಹಳಷ್ಟು ತಟ್ಟಿದೆ. ಹಲವು ದಿನಗಳಿಂದ ಸಿನೆಮಾ ಇಂಡಸ್ಟ್ರಿ ಮುಗ್ಗರಿಸುವ ಹಂತದಲ್ಲಿದೆ. ಹಿಂದೆಂದೂ ಕಂಡು ಕೇಳರಿಯದಂತಹ ಪರಿಸ್ಥಿತಿಯಿಂದಾಗಿ ಸಿನೆಮಾ ಇಂಡಸ್ಟ್ರಿ ಸಾಕಷ್ಟು ಸಂಕಷ್ಟಮಯ ಸ್ಥಿತಿಯಲ್ಲಿದೆ. ಮೊದಲೇ ಕಷ್ಟದಿಂದಲೇ ಇರುವ ಕೋಸ್ಟಲ್‌ವುಡ್‌ಗೆ ಕೊರೊನಾ ಎಫೆಕ್ಟ್ ಅಪಾಯದ ಕರೆಗಂಟೆ ಬಾರಿಸಿದೆ. ಸಿನೆಮಾ ರಿಲೀಸ್‌ಗೆ ತಡೆ ಇರುವುದು ಒಂದಾದರೆ; ಕೆಲವು ಸಿನೆಮಾ ಶೂಟಿಂಗ್‌ ಕೂಡ ಸ್ತಬ್ದವಾಗಿದೆ. ಹೀಗಾಗಿ ಕೋಸ್ಟಲ್‌ವುಡ್‌ನ‌ಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ದುಡಿಯುವ ಸಹಸ್ರಾರು ಜನರು ಇದೀಗ ಸಂಕಷ್ಟದ ಸ್ಥಿತಿಗೆ ಬಂದಿದ್ದಾರೆ. ಬೀಚ್‌ ಸೇರಿದಂತೆ ಹಲವು ಭಾಗಗಳಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಸಿನೆಮಾ ಶೂಟಿಂಗ್‌ಗೆ ಸಮಸ್ಯೆಯಾಗಿದೆ.

ಈ ಮಧ್ಯೆ ಕೊರೊನಾ ವಿಚಾರ ಸದ್ಯ ತಣ್ಣಗಾದರೂ; ಇದರಿಂದಾಗಿ ಸಿನೆಮಾ ಇಂಡಸ್ಟ್ರಿ ಜೀವಕಲೆ ಪಡೆಯಲು ಇನ್ನೂ ಒಂದೆರಡು ತಿಂಗಳು ಅಗತ್ಯ. ಯಾಕೆಂದರೆ ಸಿನೆಮಾ ಮಂದಿರಗಳಿಗೆ ಜನರು ಆಗಮಿಸುವ ಸಂಖ್ಯೆ ಸದ್ಯಕ್ಕೆ ವಿರಳವಾಗುವ ಸಾಧ್ಯತೆಯಿದೆ. ಜತೆಗೆ, ಕೆಲವು ದಿನಗಳವರೆಗೆ ಹಲವು ಸಿನೆಮಾಗಳು ರಿಲೀಸ್‌ಗೆ ಬಾಕಿ ಇರುವ ಕಾರಣದಿಂದ ಥಿಯೇಟರ್‌ ಓಪನ್‌ ಆದಾಗಲೇ ಹಲವು ಸಿನೆಮಾ ರಿಲೀಸ್‌ಗಾಗಿ ಸ್ಪರ್ಧೆ ನಡೆಸುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಕೋಸ್ಟಲ್‌ವುಡ್‌ನ‌ ಸಿನೆಮಾಗಳಿಗೆ ಸೂಕ್ತ ಥಿಯೇಟರ್‌ ಕೊರತೆಯೂ ಎದುರಾಗುವ ಅಪಾಯವಿದೆ. ಇವೆರಡನ್ನು ನಿಭಾಯಿಸುವುದು ಕೋಸ್ಟಲ್‌ವುಡ್‌ಗೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ.

“ಕಾರ್ನಿಕೊದ ಕಲ್ಲುರ್ಟಿ’ ಮುಂದೂಡಿಕೆ
ಕೊರೊನಾ ಕಾರಣದಿಂದ ತುಳುವಿನ ಇನ್ನೊಂದು ಸಿನೆಮಾ “ಕಾರ್ನಿಕೊದ ಕಲ್ಲುರ್ಟಿ’ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಫೀನಿಕ್ಸ್‌ ಫಿಲಂಸ್‌ ಲಾಂಛನದಡಿಯಲ್ಲಿ ರೆಡಿಯಾದ ಮಹೇಂದ್ರ ಕುಮಾರ್‌ ನಿರ್ಮಾಣದ ಈ ಸಿನೆಮಾ ಎ.3ಕ್ಕೆ ರಿಲೀಸ್‌ ಆಗುವ ಬಗ್ಗೆ ಪ್ರಕಟನೆ ಹೊರಡಿಸಲಾಗಿತ್ತು. ಆದರೆ, ಸದ್ಯ ಕೊರೊನಾ ಕಾರಣದಿಂದ ಈ ದಿನಾಂಕವನ್ನು ಮುಂದೂಡಲಾಗಿದೆ ಎಂದು ಮಹೇಂದ್ರ ಕುಮಾರ್‌ ತಿಳಿಸಿದ್ದಾರೆ.

“ಅತ್ಯಂತ ದೊಡ್ಡ ಬಜೆಟ್‌ ಚಿತ್ರವಿದು. ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ಕಥೆ, ಗ್ರಾಫಿಕ್‌, ಸಂಗೀತ ಈ ಸಿನೆಮಾದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಹೀತನ್‌ ಹಾಸನ್‌ ಅವರು ಮೊದಲ ಬಾರಿಗೆ ತುಳು ಚಿತ್ರರಂಗದಲ್ಲಿ 5 ಅದ್ಭುತ ಹಾಡುಗಳನ್ನು ನೀಡಿದ್ದಾರೆ. ತುಳುನಾಡಿನ ಜನರಿಗೆ ಕಲ್ಲುರ್ಟಿ ತಾಯಿಯ ಜೀವನ ಚರಿತ್ರೆಯನ್ನು ವಿಶೇಷವಾಗಿ ನೀಡಬೇಕು ಎಂಬ ಆಶಯದಿಂದ ಈ ಸಿನೆಮಾ ಮಾಡಲಾಗಿದೆ.
ಶೈಲೇಂದ್ರ, ಸುಪ್ರೀತ, ರಕ್ಷಿತ, ಪ್ರಶಾಂತ್‌, ಶಾಲಿನಿ, ಚಾಂದಿನಿ ಸಿನೆಮಾ ಮುಖ್ಯ ತಾರಾಗಣದಲ್ಲಿದ್ದು, ನಟ ರಮೇಶ್‌ ಭಟ್‌ ಅವರು ವಿಶೇಷ ನೆಲೆಯಲ್ಲಿ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಕೋಸ್ಟಲ್‌ವುಡ್‌ನ‌ಲ್ಲಿ ಈ ಸಿನೆಮಾ ಬಗ್ಗೆ ನಿರೀಕ್ಷೆಯಿದೆ. ಇದಕ್ಕಾಗಿ ಸದ್ಯ ರಿಲೀಸ್‌ ದಿನಾಂಕ ಮುಂದೂಡಲಾಗಿದೆ ಎನ್ನುತ್ತಾರೆ ಅವರು.

Advertisement

“ಇಂಗ್ಲೀಷ್‌’ ಮುಂದೂಡಿಕೆ
ಅಕ್ಕೆ ಮೂವೀಸ್‌ ಇಂಟರ್‌ನ್ಯಾಷನಲ್‌ ಲಾಂಛನದಲ್ಲಿ ತಯಾರಾಗಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್‌ – 22, ಕನ್ನಡ ಚಲನಚಿತ್ರದ ನಿರ್ಮಾಪ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಿಸಿರುವ ಕೆ. ಸೂರಜ್‌ ಶೆಟ್ಟಿ ನಿರ್ದೇಶನದ “ಇಂಗ್ಲಿಷ್‌’ ತುಳು ಸಿನೆಮಾ ಬಿಡುಗಡೆ ದಿನಾಂಕವನ್ನೇ ಇದೀಗ ಮುಂದೂಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಾಜ್ಯ ಸರಕಾರವು ಎಲ್ಲಾ ಚಿತ್ರಮಂದಿರಗಳನ್ನು ತಾತ್ಕಾಲಿಕ ಬಂದ್‌ ಮಾಡುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಾ.20ರಂದು ತೆರೆಕಾಣಬೇಕಿದ್ದ ಇಂಗ್ಲೀಷ್‌ ಅನ್ನು ಮುಂದೂಡಿದ್ದು ಚಿತ್ರಮಂದಿರದ ವಿಚಾರದಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡು ಚಿತ್ರ ಬಿಡುಗಡೆಯ ಮುಂದಿನ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ನಿರ್ದೇಶಕ ಸೂರಜ್‌ ಶೆಟ್ಟಿ ತಿಳಿಸಿದ್ದಾರೆ.
ಇತ್ತೀಚೆಗೆ ದುಬೈಯಲ್ಲಿ ಈ ಸಿನೆಮಾದ “ವರ್ಲ್ಡ್ ಪ್ರೀಮಿಯರ್‌ ಶೋ’ ನೋಡಲು ಯುಎಇಯ ದುಬೈ, ಅಬುಧಾಬಿ, ಶಾರ್ಜಾ, ಫುಜೆರಾ, ರಾಸೆಲ್‌ ಖೈಮಾ, ಅಜ್ಮಾನ್‌ ಸೇರಿದಂತೆ ವಿವಿಧ ಕಡೆಗಳಿಂದ ತುಳು ಸಿನಿ ರಸಿಕರು ಆಗಮಿಸಿದ್ದು, ಚಿತ್ರದ ಬಗ್ಗೆ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.

ಕೊನೆಯ ಹಂತದ ಶೂಟಿಂಗ್‌ನಲ್ಲಿ “ಮಾಜಿ ಮುಖ್ಯಮಂತ್ರಿ’
ಈಗಾಗಲೇ ಬಹುತೇಕ ಶೂಟಿಂಗ್‌ ಮುಗಿಸಿರುವ “ಮಾಜಿ ಮುಖ್ಯಮಂತ್ರಿ’ ಸಿನೆಮಾದ ಅಂತಿಮ ಶೂಟಿಂಗ್‌ ಬಜಪೆ ವ್ಯಾಪ್ತಿಯಲ್ಲಿ ನಡೆಯಲಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣದಲ್ಲಿ ಈ ಸಿನೆಮಾ ನಿರ್ಮಾಣಗೊಳ್ಳುತ್ತಿದೆ. ಸ್ವರಾಜ್‌ ಶೆಟ್ಟಿ ಮಾಜಿ ಮುಖ್ಯಮಂತ್ರಿ ಸಿನೆಮಾದ ಲೀಡ್‌ ರೋಲ್‌ನಲ್ಲಿದ್ದಾರೆ. ತ್ರಿಷೂಲ್‌ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಭೋಜರಾಜ್‌ ವಾಮಂಜೂರು, ಸುನಿಲ್‌, ಸಾಯಿಕೃಷ್ಣ, ವಿಸ್ಮಯ ವಿನಾಯಕ್‌, ರಂಜನ್‌ ಬೋಳೂರು ಸಹಿತ ಹಲವು ಕಲಾವಿದರು ಬಣ್ಣಹಚ್ಚಿದ್ದಾರೆ. ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ವಿಶೇಷ ಪಾತ್ರದಲ್ಲಿ ರಂಜಿಸಲಿದ್ದಾರೆ. ಅಂದಹಾಗೆ ಈ ಸಿನೆಮಾದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕೂಡ ಬಣ್ಣಹಚ್ಚಿದ್ದಾರೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next