ಮಣಿಪಾಲ: ಕೋವಿಡ್ ವೈರಸ್ ಕಾಟದ ಪರಿಣಾಮವಾಗಿ ಸುಮಾರು 75,000 ಅಮೆರಿಕನ್ನರು ಔಷಧ ಅಥವಾ ಆಲ್ಕೊಹಾಲ್ ಅನ್ನು ದುರುಪಯೋಗಪಡಿಸಿ ಆತ್ಮಹತ್ಯೆಯಂತಹ ಕೃತ್ಯಗಳನ್ನು ಎಸಗುವ ಸಾಧ್ಯತೆ ಇದೆ ಎಂದು ಅಮೆರಿಕದ ಪಬ್ಲಿಕ್ ಹೆಲ್ತ್ ಗ್ರೂಪ್ ನಡೆಸಿದ ಅಧ್ಯಯನ ಹೇಳಿದೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತಗಳು ಮತ್ತು ಪ್ರತ್ಯೇಕತೆಯಿಂದ ಉಂಟಾಗುವ ಒತ್ತಡ ಮತ್ತು ಸಾಂಕ್ರಾಮಿಕ ರೋಗದಿಂದ ನೊಂದು ಹತಾಶೆಯ ಸಾವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಈ ಕೋವಿಡೇತರ ಬಿಕ್ಕಟ್ಟಿನ ಕುರಿತು ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರಕಾರ ಕ್ರಮ ಕೈಗೊಳ್ಳದೇ ಇದ್ದರೆ ಸಾವುಗಳ ಪ್ರಮಾಣ ಅಂದಾಜನ್ನು ದಾಟಬಹುದು ಎಂದಿದೆ.
ನಾಳೆಯ ದಿನಗಳಲ್ಲಿ ಸಂಭವಿಸಬಹುದಾದ ಇಂತಹ ಘಟನೆಗಳನ್ನು ತಡೆಯಲು ಸರಕಾರ ಗುಣಮಟ್ಟದ ಮಾನಸಿಕ ಆರೋಗ್ಯ ಚಿಕಿತ್ಸೆಗಳನ್ನು ನೀಡಬೇಕು ಎಂದು ಸಲಹೆ ನೀಡಲಾಗಿದೆ. ಮಾದಕವಸ್ತುಗಳ ದುರುಪಯೋಗವನ್ನು ತಡೆಯ ಬೇಕಾಗಿದೆ ಎಂದು ವೆಲ್ ಬೀಯಿಂಗ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಬೆಂಜಮಿನ್ ಎಫ್. ಮಿಲ್ಲರ್ ತಿಳಿಸಿದ್ದಾರೆ.
ಕೋವಿಡ್ -19 ರ ಪ್ರಭಾವದಿಂದಾಗಿ ನಿರುದ್ಯೋಗದ ಜತೆಗೆ ಪ್ರತ್ಯೇಕತೆ ಮತ್ತು ಅನಿಶ್ಚಿತತೆಯ ಭಾವ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಸಾಂಕ್ರಾಮಿಕ ರೋಗದಿಂದಾಗಿ ಉದ್ಯೋಗ ಕಳೆದುಕೊಳ್ಳುವವರಿಗೆ ಮತ್ತೆ ಕೆಲಸ ಸಿಗುವ ಕುರಿತು ಸರಕಾರ ಭರವಸೆ ನೀಡಬೇಕು. 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ನಿರುದ್ಯೋಗದ ಜತೆಗೆ ಆತ್ಮಹತ್ಯೆ ಪ್ರಮಾಣವೂ ಏರಿಕೆಯಾಗಿತ್ತು ಎಂದು ವೆಲ್ ಬೀಯಿಂಗ್ ಟ್ರಸ್ಟ್ ಹೇಳಿದೆ.
ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದೀಗ ಹೊಸ ಅಂಕಿಅಂಶ ದೊರೆತಿದ್ದು, 20.5 ಮಿಲಿಯನ್ ಉದ್ಯೋಗಗಳಿಗೆ ಹೊಡೆತಬಿದ್ದಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಇತ್ತೀಚೆಗೆ ಹೇಳಿತ್ತು.
ಈ ಉದ್ಯೋಗ ಕುಸಿತವು ನಿರುದ್ಯೋಗ ದರ ಶೇ. 14.7ರಷ್ಟು ಏರಿಕೆಗೆ ಕಾರಣವಾಗಿದೆ. ಇದಕ್ಕೂ ಮೊದಲು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶೇ. 4.4ರಷ್ಟು ನಿರುದ್ಯೋಗಕ್ಕೆ ಕಾರಣವಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಅತೀ ಹೆಚ್ಚಿನ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗವು ತೀವ್ರವಾಗಿ ಕುಸಿದಿದ್ದು, ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ.