Advertisement
ಕೋವಿಡ್ 1ನೇ ಅಲೆ ಅಪ್ಪಳಿಸಿದಾಗ ಆತಂಕ ಮತ್ತು ಸಂಕಷ್ಟದ ನಡುವೆಯೇ ಕೋವಿಡ್ ರೋಗಿಗಳನ್ನು ಉಪಚರಿಸಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು 2ನೇ ಅಲೆಯನ್ನು ನಿರಾತಂಕವಾಗಿ ಎದುರಿಸಿ ಸೈ ಎನಿಸಿಕೊಂಡಿವೆ. ಕೋವಿಡ್‌ನ ದುಷ್ಪರಿಣಾಮಗಳಿಂದ ಮುಂಬರುವ ಅನಾರೋಗ್ಯದ ಪರಿಕಲ್ಪನೆಗಳಡಿ ಇನ್ನಷ್ಟು ವೈದ್ಯಕೀಯ ಸಲಕರಣೆಗಳು, ವೈದ್ಯಕೀಯ ವ್ಯವಸ್ಥೆಯನ್ನು ರೂಢಿಸಿಕೊಂಡಿವೆ. ಜಿಲ್ಲೆಯಲ್ಲಿ 1ನೇ ಮತ್ತು 2ನೇ ಅಲೆಯಲ್ಲಿ ಈ ವರೆಗೆ (ಆ.18ರ ವರೆಗೆ ) 60,657 ಜನರಲ್ಲಿ ಸೋಂಕು ಪತ್ತೆ ಆಗಿದ್ದು, ಈ ಪೈಕಿ 1291 ಜನ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣ 124 ಇದ್ದು, ಸೋಂಕಿನ ಪ್ರಮಾಣ ತಗ್ಗಿದೆ. ಈವರೆಗೆ 59,240 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಈಗ ನಿತ್ಯ ಹೊಸ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿಯೇ ಇದೆ.
Related Articles
Advertisement
10 ಸಾವಿರಕ್ಕೂ ಅಧಿಕ ಜನರು ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಕಿಮ್ಸ್‌ನಲ್ಲಿ ಎರಡು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಎರಡು ಹೊಸ ಆಕ್ಸಿಜನ್ ಉತ್ಪಾದಕ ಘಟಕಗಳು ಸ್ಥಾಪನೆಯಾದವು. ಕಲಘಟಗಿ ಮತ್ತು ಕುಂದಗೋಳ ತಾಲೂಕಾಸ್ಪತ್ರೆಗಳಲ್ಲಿ ತಲಾ ಒಂದೊಂದು (500 ಲೀಟರ್ ಪ್ರತಿ ನಿಮಿಷ) ಆಕ್ಸಿಜನ್ ಘಟಕಗಳು ಸ್ಥಾಪನೆಯಾಗಿವೆ. ನವಲಗುಂದದಲ್ಲಿ ಕೂಡ ಒಂದು ಆಕ್ಸಿಜನ್ ಘಟಕ ಸಿದ್ಧಗೊಂಡಿದೆ.
ಎರಡೂ ಬಾರಿ ಎಡವಟ್ಟು: ಆರೋಗ್ಯ ಇಲಾಖೆ ಎಡವಟ್ಟುಗಳು ಸಾಕಷ್ಟು ಜನರು ಪ್ರಾಣ ತೆರುವುದಕ್ಕೂ ಕಾರಣವಾಯಿತು. ಮೊದಲ ಅಲೆಯಲ್ಲಿ ಅತ್ಯಂತ ಕಠೊರ ನಿಯಮಗಳನ್ನು ಏಕಾಏಕಿ ಜಾರಿಗೊಳಿಸಿದ್ದರಿಂದ ನಿತ್ಯ ದುಡಿದು ತಿನ್ನುವವರು ಪರದಾಡಿದರು. ಇದರಿಂದ ಬುದ್ಧಿ ಕಲಿಯದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ 2ನೇ ಅಲೆ ತೀವ್ರವಾಗಿ ವ್ಯಾಪಿಸಿದ್ದರಿಂದ ಜನರು ಸಂಕಷ್ಟಗಳ ಸರಮಾಲೆಯನ್ನೇ ಹೊದ್ದುಕೊಳ್ಳುವ ಸ್ಥಿತಿಗೆ ಕಾರಣವಾದವು. ಮೇ ತಿಂಗಳು ಸೂತಕದ ತಿಂಗಳಾಗಿ ಪರಿವರ್ತನೆಯಾಯಿತು. ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಜನರು ಸಾವನ್ನ ಪ್ಪಿದ್ದು, ಜಿಲ್ಲಾಡಳಿತ ಲೆಕ್ಕ ಕೂಡ ಇಟ್ಟಿಲ್ಲ. ಇನ್ನು ಆಕ್ಸಿಜನ್ ಘಟಕಗಳು ಇಲ್ಲದೇ ಮತ್ತು ಪೂರೈಕೆ ಸರಿಯಾಗಿ ಆಗದೇ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ರೆಮ್‌ಡೆಸಿವಿಯರ್ ಇಂಜೆಕ್ಷನ್ ಕೊರತೆಯೂ ಮತ್ತಷ್ಟು ಆತಂಕ ಸೃಷ್ಟಿಸಿತ್ತು.
3ನೇ ಅಲೆ ತಡೆಗೂ ಸಿದ್ಧತೆ3ನೇ ಅಲೆ ತಡೆಯಲು ಈಗಾಗಲೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಿಗೆ ಸಜ್ಜಾಗಿರುವಂತೆ ಮಾಹಿತಿ ನೀಡಿವೆ. ಖಾಸಗಿ ಸಂಘ-ಸಂಸ್ಥೆಗಳಲ್ಲಿ ನೂರಾರು ಆಕ್ಸಿಜನ್ ಉತ್ಪಾದಕ ಕಿರು ಯಂತ್ರೋಪಕರಣ ಗಳನ್ನು ದಾನವಾಗಿ ಪಡೆದುಕೊಂಡು ಇರಿಸಲಾಗಿದೆ. ಇನ್ನೊಂದೆಡೆ ಕೋವಿಡ್ ತಡೆಗೆ ಲಸಿಕಾಕರಣವನ್ನು ತೀವ್ರಗೊಳಿಸಲಾಗಿದ್ದು, 9,41,061 ಜನರಿಗೆ ಲಸಿಕೆ ನೀಡಲಾಗಿದೆ. ಕೋವಿಡ್ ಸಂಭಾವ್ಯ ಮೂರನೇ ಅಲೆ ನಿರ್ವಹಣೆಗಾಗಿ ಜಿಲ್ಲೆಯ ಖಾಸಗಿ-ಸರ್ಕಾರಿ ಆಸ್ಪತ್ರೆಗಳಲ್ಲಿ ವಯಸ್ಕರಿಗೆ ಮೂರುಸಾವಿರ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ 750 ಹಾಸಿಗೆಗಳನ್ನು ಗುರುತಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಎಲ್ಲ ಕ್ರಮ ಜರುಗಿಸುತ್ತೇವೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೋವಿಡ್ ಕಾಲಘಟ್ಟದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಕ್ಷಿಪ್ರ ಅಭಿವೃದ್ಧಿಯಾಗಿದೆ. ಈ ಅವಧಿಯಲ್ಲಿನ ಕೆಲಸಗಳು ಆಗಲು ಇನ್ನೂ 10 ವರ್ಷ ಗಳಾದರೂ ಬೇಕಾಗುತ್ತಿತ್ತು. ಆಕ್ಸಿಜನ್ ಘಟಕಗಳ ಸ್ಥಾಪನೆ, ಸಿಬ್ಬಂದಿ ನೇಮಕ, ಕೋವಿಡ್ ಲಸಿಕಾಕರಣ ಎಲ್ಲವೂ ಜನ ಮೆಚ್ಚಿಕೊಳ್ಳುವ ಹಾಗೆ ಆಗಿದೆ. ಮೊದಲು ಖಾಸಗಿ ಆಸ್ಪತ್ರೆಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದ ಜನ ಈಗ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
-ನಿತೇಶ ಪಾಟೀಲ್, ಜಿಲ್ಲಾಧಿಕಾರಿ ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಒಂದುವರೆ ವರ್ಷದಿಂದ ಸಾಕಷ್ಟು ಪರಿವರ್ತನೆಗಳು ಬಂದಿವೆ. ವೈದ್ಯರ ನೇಮಕ, ಅಗತ್ಯ ಸಲಕರಣೆ ಗಳು ಸೇರಿದಂತೆ ಮೂರನೇ ಅಲೆ ತಡೆಗೂ ಅಗತ್ಯ ಸಿದ್ಧತೆಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿಕೊಂಡಿದೆ.
-ಡಾ|ಯಶವಂತ ಮದೀನಕರ್, ಡಿಎಚ್‌ಒ ಕೋವಿಡ್ 1ನೇ ಅಲೆಯಲ್ಲಿ ಸಿಬ್ಬಂದಿಗೆ ಮೊದಲು ಭಯ ಹೋಗಲಾಡಿಸಿ ತರಬೇತಿ ನೀಡಬೇಕಾಯಿತು. ಸರ್ಕಾರದ ಮಾರ್ಗಸೂಚಿ ಮಾಹಿತಿ ನೀಡಿದೆವು. ಕೋವಿಡ್ ತಡೆ ನಿಯಮಗಳ ಜಾರಿ, ಅಗತ್ಯ ಉಪಕರಣಗಳು, ಆಕ್ಸಿಜನ್ ಕಿಟ್‌ಗಳ ಖರೀದಿ, ಪೂರೈಕೆ ಕೊರತೆ ನಿರ್ವಹಣೆ, ಗ್ಲೌಸ್, ಮಾಸ್ಕ್ನಿಂದ ಹಿಡಿದು ಎಲ್ಲ ವ್ಯವಸ್ಥೆ ಮಾಡಬೇಕಾಯಿತು. ಕೋವಿಡ್‌ನಿಂದ ಆಸ್ಪತ್ರೆಗಳಲ್ಲಿ ಹೊಸ ವ್ಯವಸ್ಥೆಯೇ ಜಾರಿಯಾಗಿದೆ. ಒಟ್ಟಾರೆಯಾಗಿ
ಆರೋಗ್ಯ ತುರ್ತು ಪರಿಸ್ಥಿತಿಯನ್ನು ಖಾಸಗಿ ಆಸ್ಪತ್ರೆಗಳು ಜವಾಬ್ದಾರಿಯಿಂದ ನಿರ್ವಹಿಸಿವೆ.
-ಡಾ| ಪ್ರಶಾಂತ ರಾಮನಗೌಡರ, ಆಡಳಿತಾಧಿಕಾರಿ, ಡಾ|ರಾಮನಗೌಡರ ಆಸ್ಪತ್ರೆ ಕೋವಿಡ್‌ನಿಂದ ಹಳ್ಳಿಗರು ಸಾಕಷ್ಟು ಪಾಠ ಕಲಿತಿದ್ದು, ಆರೋಗ್ಯ ಕಾಳಜಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೋವಿಡ್‌ಗೂ ಮುನ್ನ ಇದ್ದ ನಿರ್ಲಕ್ಷ್ಯ ಭಾವ ಈಗ ಉಳಿದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸರ್ಕಾರ ಇದೀಗ ಅಗತ್ಯ ಸೌಕರ್ಯಗಳಿಗೆ ಒತ್ತು ಕೊಟ್ಟಿರುವುದು ಗೋಚರಿಸುತ್ತಿದೆ.
-ಎನ್.ಎಫ್. ಮಡಿವಾಳರ, ಆರೋಗ್ಯ ಕಾರ್ಯಕರ್ತ, ಎಫ್‌ಪಿಎಐ – ಬಸವರಾಜ ಹೊಂಗಲ್