Advertisement

ಕೋವಿಡ್ ನಿಯಂತ್ರಣ : ಜನತೆಯ ಸಹಕಾರ ಬಲುಮುಖ್ಯ

02:12 AM Aug 07, 2021 | Team Udayavani |

ಕೊರೊನಾ ಮೂರನೇ ಅಲೆ ಭೀತಿ ಈಗಾಗಲೇ ಶುರುವಾಗಿದೆ. ನಮ್ಮ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ

Advertisement

ಎರಡನೇ ಅಲೆಯ ಆತಂಕವೇ ಇನ್ನೂ ಅಂತ್ಯವಾಗಿಲ್ಲ. ಆಗಲೇ ನಮ್ಮಲ್ಲಿ ಮೂರನೇ ಅಲೆ ಬರುವ ಸಾಧ್ಯತೆಗಳ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆಯೇ, ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್‌ ಕರ್ಫ್ಯೂವನ್ನು ಜಾರಿ ಮಾಡಲಾಗಿದೆ.

ಶುಕ್ರವಾರ ರಾತ್ರಿಯಿಂದಲೇ ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಕಲಬುರಗಿ, ಬೀದರ್‌, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿಯಾಗಿದೆ. ಇನ್ನು ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‌ ಕರ್ಫ್ಯೂ ಜಾರಿಯಾಗಿದೆ. ಸದ್ಯ ರಾತ್ರಿ 10ರಿಂದ ನೈಟ್‌ ಕರ್ಫ್ಯೂ ಇದ್ದು, ಇದು ಒಂದು ಗಂಟೆ ವಿಸ್ತರಣೆಯಾಗಿದೆ. ಕೊರೊನಾ ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಹಾಗೆಯೇ ತಜ್ಞರ ಶಿಫಾರಸಿನ ಆಧಾರದ ಮೇಲೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸದ್ಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ಪ್ರಮಾಣವನ್ನು ತಡೆಯಲು ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿರುವುದು ಉತ್ತಮವೇ ಆಗಿದೆ. 2ನೇ ಅಲೆಯ ಆರಂಭದಲ್ಲಿ ಇಂಥ ಕಠಿನ ಕ್ರಮ ತೆಗೆದುಕೊಂಡಿದ್ದರೆ, ಅದರ ಪರಿಣಾಮವನ್ನು ತಡೆಯಬಹುದಾಗಿತ್ತು. ಆದರೆ ಆಗ ಒಂಚೂರು ಮೈಮರೆತ ಕಾರಣದಿಂದಾಗಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡಲು ಕಾರಣವಾಯಿತು. ಈಗ ಸರಕಾರ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿದೆ. ಗಡಿಯಲ್ಲೇ ಕೊರೊನಾ ತಡೆದರೆ, ರಾಜ್ಯದೆಲ್ಲೆಡೆ ಹರಡುವ ಪ್ರಮಾಣವೂ ಕಡಿಮೆಯಾಗುತ್ತದೆ.

ಸರಕಾರವೇನೋ ಕರ್ಫ್ಯೂ ರೀತಿಯ ಕಠಿನ ಕ್ರಮ ತೆಗೆದುಕೊಂಡಿದೆ. ವೀಕೆಂಡ್‌ ಕರ್ಫ್ಯೂವನ್ನು ಕೆಲವು ಜಿಲ್ಲೆಗಳಿಗಷ್ಟೇ ಸೀಮಿತಗೊಳಿಸಿದೆ. ಆದರೆ ಇಲ್ಲಿ ಸಾರ್ವಜನಿಕರ ಪಾತ್ರವೂ ಜವಾಬ್ದಾರಿಯುತವಾಗಿರಬೇಕಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಜನತೆ
ಮೈಮರೆತು ಮಾಸ್ಕ್ ಹಾಕದೇ ಇರುವುದು, ಗುಂಪು ಗುಂಪಾಗಿ ಸೇರುವುದು, ಮದುವೆ ಸೇರಿದಂತೆ ಇತರ ಸಭೆ ಸಮಾರಂಭಗಳಲ್ಲಿ ಹೆಚ್ಚು ಹೆಚ್ಚಾಗಿ ಸೇರುವುದನ್ನು ಮಾಡಿದರೆ, ಅದರಿಂದ ಕೊರೊನಾ ಜಾಸ್ತಿಯಾಗುವ ಸಂಭವ ಹೆಚ್ಚು. ಜನ ತಮ್ಮ ಪಾತ್ರವನ್ನು ಅರಿತುಕೊಂಡು ಎಚ್ಚರಿಕೆಯಿಂದ ನಡೆದುಕೊಂಡರೆ, ರಾಜ್ಯಾದ್ಯಂತ ಲಾಕ್‌ ಡೌನ್‌ ರೀತಿಯ ಅಥವಾ ವೀಕೆಂಡ್‌ ಕರ್ಫ್ಯೂ ರೀತಿಯ ಕ್ರಮಗಳನ್ನು ತಪ್ಪಿಸಬಹುದು. ಅಷ್ಟೇ ಅಲ್ಲ, ಕೊರೊನಾ ಮೂರನೇ ಅಲೆಯಿಂದಲೂ ಬಜಾವ್‌ ಆಗಬಹುದು.
ಇನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಹೊರತುಪಡಿಸಿ 9,10 ಮತ್ತು ಪಿಯುಸಿ ತರಗತಿಗಳನ್ನು ತೆರೆಯಲು ಅನುಮತಿ
ನೀಡಲಾಗಿದೆ. ಆ.23ರಿಂದಲೇ ಇವು ಬಾಗಿಲು ತೆರೆಯಲಿವೆ.

Advertisement

ಸಾಧ್ಯವಾದಷ್ಟು ಮಟ್ಟಿಗೆ ಈ ಶಾಲೆಗಳಲ್ಲಿ ಎಲ್ಲ ಕೊರೊನಾ ನಿಯಮಾವಳಿಗಳನ್ನು ಅನುಸರಿಸಿ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿಯೂ ಎಲ್ಲರ ಜವಾಬ್ದಾರಿ ಅತ್ಯಂತ ಮುಖ್ಯವಾದದ್ದು.

Advertisement

Udayavani is now on Telegram. Click here to join our channel and stay updated with the latest news.

Next