Advertisement

ನೂತನ ಸಚಿವರಿಗೆ ಕೊರೊನಾ, ಮೂಲಸೌಲಭ್ಯದ್ದೇ ಸವಾಲು

02:05 AM Aug 07, 2021 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹೊಸ ಸಚಿವರ ತಂಡಕ್ಕೆ ಆಯಾ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ತತ್‌ಕ್ಷಣವೇ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಹಾಗೆ ನೋಡಿದರೆ, ಸಚಿವರ ಹಾದಿ ಸುಗಮವಾಗಿಲ್ಲ. ಕೊರೊನಾ 3ನೇ ಅಲೆ ಎದುರಿಸುವ ಜತೆಜತೆಗೆ ಬಹುತೇಕ ಜಿಲ್ಲೆಗಳಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಮೂಲಸೌಲಭ್ಯಕ್ಕೂ ಆದ್ಯತೆ ನೀಡಬೇಕಿದೆ. ಸಚಿವರ ಎದುರಿರುವ ಸವಾಲುಗಳೇನು? ತತ್‌ಕ್ಷಣವೇ ಮಾಡಬೇಕಿರುವುದೇನು? ಜನರ ಆಗ್ರಹಗಳೇನು?ಎಂಬ ಕುರಿತು “ಉದಯವಾಣಿ’ ನಡೆಸಿದ ರಿಯಾಲಿಟಿ ಚೆಕ್‌ ಇಲ್ಲಿದೆ..

Advertisement

ಬೆಂಗಳೂರು ಗ್ರಾಮಾಂತರ
– ಜಿಲ್ಲೆಯಲ್ಲಿ ಯಾವುದೇ ನದಿ ಮೂಲ ಇಲ್ಲದಿರುವುದರಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಅನುಷ್ಠಾನಗೊಳಿಸಬೇಕಿದೆ.
– ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. ಕೆಸಿ ವ್ಯಾಲಿ ಮತ್ತು ಹೆಚ್‌.ಎನ್‌. ವ್ಯಾಲಿ ನೀರು ಹೊಸಕೋಟೆ ಮತ್ತು ದೇವನಹಳ್ಳಿ ಕೆರೆಗಳಿಗೆ ತುಂಬಿಸುತ್ತಿದ್ದು ದೇವನಹಳ್ಳಿಯಲ್ಲಿ ಹೆಚ್‌.ಎನ್‌.ವ್ಯಾಲಿ ನೀರನ್ನು ಕೇವಲ 9 ಕೆರೆಗಳಿಗೆ ತುಂಬಿಸುತ್ತಿದ್ದು ಇನ್ನುಳಿದ ಕೆರೆಗಳಿಗೆ ತುಂಬಿಸಬೇಕಾಗಿದೆ.

ವಿಜಯಪುರ
– ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ಸಿಗಬೇಕಿದೆ. ರಾಜ್ಯದ ಪಾಲಿನ ನೀರು ಬಳಕೆಗೆ ಆಲಮಟ್ಟಿ ಜಲಾಶಯ 3 ಮೀಟರ್‌ ಎತ್ತರಿಸಬೇಕಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರ ಬದುಕು ಕಟ್ಟಿಕೊಡಬೇಕಿದೆ.
– ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಭೀಮಾ, ಡೋಣಿ ನದಿ ಪ್ರವಾಹಕ್ಕೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಸೂರು, ತುರ್ತು ಪರಿಹಾರ ಕಲ್ಪಿಸಬೇಕಿದೆ. ನಿರಂತರ ಬರಗಾಲ, ಉದ್ಯೋಗ ಇಲ್ಲದೇ ನೆರೆ ರಾಜ್ಯಕ್ಕೆ ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕಿದೆ.

ಧಾರವಾಡ
– ಬೆಂಗಳೂರು ಹೊರತುಪಡಿಸಿದರೆ ಅತೀ ಹೆಚ್ಚು ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ಎರಡನೇ ಸ್ಥಾನದಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸಬೇಕಿದೆ.
– ಡಾ| ಎಂ.ಪರಮಶಿವಯ್ಯ ಅವರು ನೀಡಿದ ವರದಿ ಅನ್ವಯ ಬೆಣ್ಣೆಹಳ್ಳದಲ್ಲಿ 22 ಟಿಎಂಸಿ ಅಡಿ ನೀರು ಪ್ರತೀ ವರ್ಷ ಪೋಲಾಗಿ ಹೋಗುತ್ತಿದೆ. ಇದನ್ನು ಜಿಲ್ಲೆಯ ಕೃಷಿಗೆ ಪೂರಕವಾಗಿ ಬಳಸಿಕೊಳ್ಳುವ ದೊಡ್ಡ ಯೋಜನೆ ರೂಪಿಸಬೇಕಿದೆ.
– ಬೇಡ್ತಿ, ತುಪರಿ, ಬಡಗಿ, ಜಾತಕ್ಯಾ ಸೇರಿದಂತೆ ಜಿಲ್ಲೆಯಲ್ಲಿ 23 ಹಳ್ಳಗಳು ಪ್ರತೀ ವರ್ಷ ಮಳೆಗಾಲದಲ್ಲಿ ಕಿರು ಪ್ರವಾಹ ಸೃಷ್ಟಿಸು ವಷ್ಟು ದೈತ್ಯವಾಗಿ ಹರಿಯುತ್ತಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕಿರು ನೀರಾವರಿಗೆ ಚಾಲನೆ ನೀಡಬೇಕಿದೆ.

ಗದಗ
– ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ದಾಹ ನೀಗಿಸುವ ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆದ್ಯತೆ ನೀಡಬೇಕಿದೆ.
– ರೋಣ-ಗಜೇಂದ್ರಗಢ ಭಾಗಕ್ಕೆ ನೀರಾವರಿ ಒದಗಿಸುವ ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಗೊಳಿಸಬೇಕು. ಜತೆಗೆ ಜಿಲ್ಲೆಯ ವಿವಿಧ 9 ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕನಿಷ್ಠ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಬೇಕು.
– ಇಲ್ಲಿನ ಬೆಟಗೇರಿ, ಶಿಗ್ಲಿ ಮತ್ತು ಗಜೇಂದ್ರಗಢ ನೇಕಾರರಿಗೆ ಹೆಸರು ವಾಸಿ. ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬೆಟಗೇರಿ ಸಮೀಪದ ನರಸಾಪುರದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಬೇಕು.

Advertisement

ಹಾವೇರಿ
– 2016ರ ಬಜೆಟ್‌ನಲ್ಲಿ ಘೋಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಅನುಷ್ಠಾನಗೊಳಿಸಬೇಕು.
– ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವಿದ್ಯಾವಂತ ಯುವಕರು ಉದ್ಯೋಗ ಅರಸಿ ವಲಸೆ ಹೋಗು ವಂತಾಗಿದೆ. ಹೀಗಾಗಿ ಕೈಗಾರಿಕೆಗಳು ಹೆಚ್ಚು ಪ್ರಮಾಣದಲ್ಲಿ ಜಿಲ್ಲೆಗೆ ಬರಬೇಕಿದೆ.
– ಹೊಸ ತಾಲೂಕು ರಟ್ಟಿಹಳ್ಳಿಗೆ ವಿಶೇಷ ಅನುದಾನ ನೀಡಬೇಕು. ಜತೆಗೆ ಅಕ್ಕಿಆಲೂರು, ಗುತ್ತಲ, ಬಂಕಾಪುರಗಳನ್ನು ತಾಲೂಕಾಗಿ ಘೋಷಿಸಬೇಕು.

ಉತ್ತರ ಕನ್ನಡ
– ನೆರೆಯಿಂದ ತತ್ತರಿಸಿದ ಜನತೆಗೆ ಪುನರ್ವಸತಿ ಕಲ್ಪಿಸಬೇಕಿದೆ. ಹಾಳಾದ ರಸ್ತೆಗಳ ದುರಸ್ತಿ ಮಾಡಬೇಕಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ. ದೊಡ್ಡ ಜಿಲ್ಲೆಯನ್ನು ವಿಭಜಿಸಿ ಎರಡು ಜಿಲ್ಲೆ ಮಾಡಬೇಕೆಂಬ ಕೂಗಿಗೆ ಸ್ಪಂದಿಸಬೇಕಿದೆ.
– ಹೊನ್ನಾವರ ವಾಣಿಜ್ಯ ಬಂದರು ವಿವಾದ, ಕಾರವಾರ ಬಂದರು ಎರಡನೇ ಹಂತದ ವಿಸ್ತರಣೆ, ಬೇಲೆಕೇರಿ ಬಂದರು ನಿರ್ಮಾಣ ಹಾಗೂ ಅಲಗೇರಿ ಬಳಿ ನೂತನ ನಾಗರಿಕ ವಿಮಾನ ನಿಲ್ದಾಣ ಕಾರ್ಯದತ್ತ ಗಮನಹರಿಸಬೇಕಿದೆ.

ಯಾದಗಿರಿ
– ಎಂಜಿನಿಯರಿಂಗ್‌, ತೋಟಗಾರಿಕೆ, ಪಶು ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಜಿಲ್ಲೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಕೆಬಿಜೆಎನ್‌ಎಲ್‌ ಕಾಲುವೆಗಳ ಎತ್ತರಿಸಬೇಕು.
– ಕೃಷ್ಣಾ-ಭೀಮಾ ನದಿ ನೀರು ಸದ್ಬಳಕೆಗೆ ತಿಂಥಣಿ ಕಾಲುವೆ ವಿಸ್ತರಣೆ ಮಾಡಬೇಕು. ನೂತನ ಗುರುಮಠಕಲ್‌, ವಡಗೇರಾ, ಹುಣಸಗಿ ತಾಲೂಕು ಕೇಂದ್ರಗಳ ಘೋಷಣೆಯಾಗಿ ಮೂರು ವರ್ಷ ಕಳೆದರೂ ತಹಶೀಲ್ದಾರ್‌, ಕೆಲವೆಡೆ ತಾಪಂ ಕಚೇರಿ ಹೊರತುಪಡಿಸಿ ಬೇರಾವ ಇಲಾಖೆಗಳ ಕಚೇರಿಗಳು ಕಾರ್ಯಾರಂಭವಾಗಿಲ್ಲ. ಇನ್ನಾದರೂ ಕಚೇರಿ ಭಾಗ್ಯ ಕಲ್ಪಿಸಬೇಕು.

ರಾಯಚೂರು
– ಕೃಷ್ಣಾ, ತುಂಗಭದ್ರಾ ಪ್ರವಾಹ ಸಂತ್ರಸ್ತರಿಗೆ ತುರ್ತು ನೆರವು, ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸಬೇಕು.
– ಟಿಎಲ್‌ಬಿಸಿ ಮತ್ತು ಎನ್‌ಆರ್‌ಬಿಸಿ ಟೆಲೆಂಡ್‌ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
– ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ, ಎನ್‌ಆರ್‌ಬಿಸಿ 5ಎ ವಿಸ್ತರಣ ಕಾಲುವೆ ಬಗ್ಗೆ ತತ್‌ಕ್ಷಣ ಗಮನಹರಿಸಬೇಕು. ಒಪೆಕ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಅಗತ್ಯ ಸಿಬಂದಿ, ಸೂಕ್ತ ಅನುದಾನ ನೀಡಿ ಸ್ವಾಯತ್ತ ಸಂಸ್ಥೆಯನ್ನಾಗಿಸಬೇಕಿದೆ.

ಬೀದರ್‌
– ಬಿಎಸ್‌ವೈ ಕನಸಿನ ಅನುಭವ ಮಂಟಪ ಪೂರ್ಣಗೊಳಿಸಬೇಕಿದೆ.
– ವಿಮಾನ ನಿಲ್ದಾಣ, ಗುರುದ್ವಾರಕ್ಕೆ ಅನುದಾನ ನೀಡಬೇಕಿದೆ.
– ಬಚಾವತ್‌ ಆಯೋಗದಂತೆ ಜಿಲ್ಲೆಯ ಮಾಂಜ್ರಾ ನದಿಯಿಂದ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಕನಿಷ್ಠ 3 ಬ್ಯಾರೇಜ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕು.

ಬಳ್ಳಾರಿ
– ತುಂಗಭದ್ರಾ ಜಲಾಶಯ ಹೂಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ನವಲಿ ಜಲಾಶಯದ ಬಳಿ ಸಮಾನಾಂತರ ಡ್ಯಾಂ ನಿರ್ಮಿಸಬೇಕಿದೆ. ಬಳ್ಳಾರಿ ಜಿಲ್ಲೆ ವಿಭಜಿಸಿ ರಚಿಸಿರುವ ನೂತನ ವಿಜಯನಗರ ಜಿಲ್ಲೆಗೆ ಖಾಯಂ ಅಧಿ ಕಾರಿಗಳನ್ನು ನಿಯೋಜಿಸಬೇಕಿದೆ.
– ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ ಜಿಂದಾಲ್‌ಗೆ 3667 ಎಕರೆ ಜಮೀನು ಪರಭಾರೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆಗ ವಿರೋಧ ವ್ಯಕ್ತವಾಗಿತ್ತು. ಈಗ ಬಿಜೆಪಿ ಸರಕಾರ ಮಂಜೂರು ಮಾಡಿದ್ದನ್ನು ಸಹ ಕೈ ಬಿಡಲಾಗಿದೆ. ಇದನ್ನು ಸೂಕ್ತವಾಗಿ ನಿಭಾಯಿಸಬೇಕಿದೆ.

ಶಿವಮೊಗ್ಗ
– ಬಿಎಸ್‌ವೈ ಚಾಲನೆ ನೀಡಿದ್ದ 185 ಕೋಟಿ ರೂ.ಗಳ ವೆಚ್ಚದ ಅಗತ್ಯ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, 100 ಕೋಟಿ ರೂ.ಗಳ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ 200 ಹಾಸಿಗೆಗಳ ಕಿದ್ವಾಯಿ ಮಾದರಿಯ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗೆ ಜೀವ ತುಂಬಬೇಕಿದೆ.
– ದಶಕಗಳಿಂದ ನನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಕಾಮಗಾರಿ ಬಿಜೆಪಿ ಸರಕಾರದ ಅವ ಧಿಯಲ್ಲೇ ವಿಮಾನ ಹಾರಾಟದ ಕನಸು ನನಸಾಗಬೇಕಿದೆ.
– ಶಿವಮೊಗ್ಗ -ಶಿಕಾರಿಪುರ-ರಾಣಿಬೆನ್ನೂರು ರೈಲ್ವೇ ಮಾರ್ಗಕ್ಕೆ ಭೂಸ್ವಾ ಧೀನ ಪ್ರಕ್ರಿಯೆಗೆ ರಾಜ್ಯದ ಪಾಲಿನ ಹಣ ಬಿಡುಗಡೆಯಾಗಬೇಕಿದೆ.

ದಾವಣಗೆರೆ
– ಖಾಸಗಿ ಸಹಭಾಗಿತ್ವಕ್ಕಿಂತ ಸರಕಾರದಿಂದಲೇ ವೈದ್ಯಕೀಯ ಕಾಲೇಜು ಆರಂಭವಾಗಲಿ. ಮೆಕ್ಕೆಜೋಳ ಸಂಸ್ಕರಣ ಘಟಕ, ನೀರಾವರಿ ಯೋಜನೆಗಳಿಗೂ ಸಿಗಲಿ ಆದ್ಯತೆ
– ಕೃಷಿ, ಸಹಕಾರ ಕಾಲೇಜು ಆರಂಭಿಸಬೇಕು. ವಿಮಾನ ನಿಲ್ದಾಣ ನಿರ್ಮಿಸಬೇಕು. ದಾವಣಗೆರೆ-ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕು.
– ಹರಿಹರ ತಾಲೂಕಿನ ಭೆೈರನಪಾದ, ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ಸಿಗಬೇಕು.

ಕಲಬುರಗಿ
– ಆಂಧ್ರ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು.
– ಕೊರೊನಾ ಸೋಂಕು ವ್ಯಾಪಿಸದಂತೆ ಕ್ರಮ ಕೈಗೊಳ್ಳಬೇಕು.
– 371ನೇ(ಜೆ)ಕಲಂ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು.
– ಗಂಡೋರಿನಾಲಾ, ಭೀಮಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು.

ಬಾಗಲಕೋಟೆ
– ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಮಾಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಆದ್ಯತೆ ನೀಡಬೇಕು.
– ಪಟ್ಟದಕಲ್ಲು, ಬಾದಾಮಿ, ಐಹೊಳೆ, ಕೂಡಲಸಂಗಮವನ್ನು ಅಕ್ಷರಧಾಮ ಮಾದರಿ ಅಭಿವೃದ್ಧಿಪಡಿಸಬೇಕು. ಪಾರಂಪರಿಕೆ ನೇಕಾರಿಕೆ ಇನ್ನಷ್ಟು ಗಟ್ಟಿಗೊಳ್ಳಬೇಕು. ಸ್ಥಳೀಯವಾಗಿ ಹಲವು ರೀತಿಯ ಕೈಗಾರಿಕೆಗಳು ಸ್ಥಾಪನೆಗೊಳ್ಳಬೇಕು.

ಕೊಪ್ಪಳ
– ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದ್ದರಿಂದ ನವಲಿ ಬಳಿ ಪರ್ಯಾಯ ಜಲಾಶಯ ನಿರ್ಮಿಸಬೇಕು. ಏತ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಹೊಸ ವಿವಿ, ತೋಟಗಾರಿಕೆ ಪಾರ್ಕ್‌ ಅಭಿವೃದ್ಧಿಪಡಿಸಬೇಕು. ವಿಮಾನ ನಿಲ್ದಾಣ, ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಬೇಕು.
– ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬಹದ್ದೂರು ಬಂಡಿ ಏತ ನೀರಾವರಿ, ಬೆಟಗೇರಿ-ಅಳವಂಡಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು.

ಚಿತ್ರದುರ್ಗ
– ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷ ಣೆಗೆ ಸಿಗಬೇಕಿದೆ ಆದ್ಯತೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ಚುರುಕುಗೊಳ್ಳಬೇಕು.
– ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಬೇಕು.
– ಪ್ರವಾಸೋದ್ಯಮಕ್ಕೆ ಇನ್ನಷ್ಟು ಬಲ ನೀಡಬೇಕು. ಕೊರೊನಾ ನಿಯಂತ್ರಣಕ್ಕೆ ಆದ್ಯತೆ ಸಿಗಬೇಕು.
ಬೆಳಗಾವಿ
– ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳ ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.
– ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಮರಾಠಿ ಪ್ರಾಬಲ್ಯ ಹೆಚ್ಚದಂತೆ ಶಿಸ್ತು ಕ್ರಮ ಕೈಗೊಳ್ಳಬೇಕು.
– ಸುವರ್ಣ ವಿಧಾನಸೌಧಕ್ಕೆ ಕಾರ್ಯದರ್ಶಿಮಟ್ಟದ ಇಲಾಖೆಗಳ ಸ್ಥಳಾಂತರಗೊಳ್ಳಬೇಕು.
ಚಿಕ್ಕಮಗಳೂರು
– ನೆರೆಯಿಂದ ತತ್ತರಿಸಿದ ಜನರಿಗೆ ಸೂರು, ಪರಿಹಾರ ಕಲ್ಪಿಸಬೇಕು.
– ತುಂಗಾ, ಭದ್ರಾ, ಹೇಮಾವತಿ, ಯಗಚಿ, ಸೋಮವಾಹಿನಿ ಪಂಚನದಿಗಳ ನೀರಾವರಿಗೆ ಆದ್ಯತೆ ನೀಡಬೇಕು. ಅರಣ್ಯ, ಕಂದಾಯ ಭೂಮಿ, ಡೀಮ್ಡ್ ಅರಣ್ಯ, ಒತ್ತುವರಿ ಸಮಸ್ಯೆ ಬಗೆಹರಿಸಬೇಕು. ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳ ಕಾಟ ತಪ್ಪಿಸಬೇಕು.

ಮಂಡ್ಯ
– ರಾಜ್ಯದಲ್ಲಿಯೇ ಶೇ.100ರಷ್ಟು ಲಸಿಕೆ ನೀಡಿದ ಜಿಲ್ಲೆಗಳ ಪಟ್ಟಿ ಯಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದೆ. ಲಸಿಕೆಗೆ ಒತ್ತು ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕಾಗಿದೆ.
– ಮೈ ಶುಗರ್‌ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲಿಯೇ ಆರಂಭಿಸು ವುದು. ಮುಂದೆ ಮಳೆ ಹಾನಿ, ನದಿ ಪಾತ್ರದ ಪ್ರವಾಹ ಸಂಭವಿಸಿ ದರೆ ನಿಭಾಯಿಸುವುದು.

ಹಾಸನ
– ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು. ಅತಿವೃಷ್ಟಿಯಿಂದಾದ ಹಾನಿಯ ಪರಿಹಾರ ಕಾರ್ಯ ಗಳನ್ನು ಕೈಗೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಈಗಾಗಲೇ ಅತಿವೃಷ್ಟಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಭೂ ಕುಸಿತ, ರಸ್ತೆಗಳ ಹಾನಿ ಮತ್ತು ಬೆಳೆಹಾನಿಗೆ ಪರಿಹಾರದ ವ್ಯವಸ್ಥೆ ಮಾಡಬೇಕಾಗಿದೆ.

ಮೈಸೂರು
– ಸಮರೋಪಾದಿಯಲ್ಲಿ ಕೊರೊನಾ 3ನೇ ಅಲೆ ತಡೆ ಮತ್ತು ನಿರ್ವಹಣೆಗೆ ಸಿದ್ಧತೆ ನಡೆಸಬೇಕಿದೆ.
– ಪ್ರವಾಸಿಗರು, ಹೊರ ರಾಜ್ಯಗಳಿಂದ ಬರುವವರ ಮೇಲೆ ಮತ್ತಷ್ಟು ಕಟ್ಟೆಚ್ಚರ ವಹಿಸಬೇಕಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜತೆಗೆ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸೋಂಕು ನಿಯಂತ್ರಿ ಸಲು ಯೋಜನೆ ರೂಪಿಸಬೇಕಿದೆ.

ಚಾಮರಾಜನಗರ
– ಕೇರಳ ಗಡಿಯಲ್ಲಿರುವ ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಿಸಲು ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೌಲಭ್ಯವಿರುವ ಹಾಸಿಗೆ ಗಳನ್ನು, ವೈದ್ಯರನ್ನು ಚಿಕಿತ್ಸೆಗಾಗಿ ಸನ್ನದ್ಧವಾಗಿಡಬೇಕು.
– ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸನ್ನದ್ಧವಾಗಿಡಬೇಕು. ಗ್ರಾಮ ಗಳಲ್ಲಿ ಹೋಂ ಐಸೊಲೇಶನ್‌ಗೆ ಅವಕಾಶ ನೀಡಬಾರದರು. ಕೋವಿಡ್‌ ಲಸಿಕೆ ಗುರಿಯನ್ನು ಶೇ. 100ರಷ್ಟು ಪೂರ್ಣ ಗೊಳಿಸ ಬೇಕು. ಅದಕ್ಕಾಗಿ ಸರಕಾರದಿಂದ ಕೋವಿಡ್‌ ಲಸಿಕೆಯ ದಾಸ್ತಾನು ಹೆಚ್ಚಳ ಮಾಡಬೇಕು.

ಕೋಲಾರ
– ಟೊಮೆಟೊ, ಮಾವು, ಇತರ ತರಕಾರಿ ಉತ್ಪನ್ನಗಳಿಗೆ ಸೂಕ್ತ ಸಂಸ್ಕರಣ ಘಟಕಗಳು, ಹಣ್ಣು ತರಕಾರಿ ಮೌಲ್ಯವರ್ಧಿತ ಉತ್ಪನ್ನಗಳ ಘಟಕಗಳು ಜಿಲ್ಲೆಯಲ್ಲಿ ಇಲ್ಲ. ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಬೇಕಾಗುತ್ತದೆ.
– ಕೆಸಿ ವ್ಯಾಲಿ ನೀರನ್ನು ಮೂರು ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂಬ ಕೂಗು ಇನ್ನೂ ಬೇಡಿಕೆ ಯಾಗಿಯೇ ಇದೆ. ಜತೆಗೆ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಕೈಗೊಳ್ಳಬೇಕಿದೆ.

ಬೆಂಗಳೂರು ನಗರ
– ಕೊರೊನಾ ರಾಷ್ಟ್ರ ರಾಜಧಾನಿ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ಬೆಂಗಳೂರಿನಲ್ಲಿ 3ನೇ ಅಲೆ ತಪ್ಪಿಸುವ ದೊಡ್ಡ ಹೊಣೆಗಾರಿಕೆ ಸಚಿವರ ಮೇಲಿದೆ.
– ಆಸ್ಪತ್ರೆ ಹಾಸಿಗೆಗಳು, ಆ್ಯಂಬುಲೆನ್ಸ್‌, ವೈದ್ಯಕೀಯ ಸಿಬಂದಿ, ಔಷಧ, ರೋಗಿಗಳ ನಿರ್ವಹಣೆಗೆ ಸುಸಜ್ಜಿತ ವ್ಯವಸ್ಥೆ ಮಾಡಿ ಕೊಳ್ಳಬೇಕು. 3ನೇ ಅಲೆ ಸಂಬಂಧ ಡಾ| ದೇವಿಶೆಟ್ಟಿ ತಂಡ ನೀಡಿರುವ ವರದಿಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗ ಬೇಕಿದೆ. ಜಿಲ್ಲಾ ಗಡಿಭಾಗದಲ್ಲಿ ತಪಾಸಣೆ, ಸೋಂಕು ಪರೀಕ್ಷಾ ಕೇಂದ್ರ ತೆರೆಯುವ ಕ್ರಮ ಕೈಗೊಳ್ಳಬೇಕು.
– ನಗರದಲ್ಲಿ ಕೇವಲ 30 ಮಿ.ಮೀ. ಮಳೆಯಾದರೂ ದಿಢೀರ್‌ ನೆರೆ ಕಾಣಿಸಿಕೊಳ್ಳುತ್ತದೆ. ಅಂತಹ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ.

ಉಡುಪಿ
– ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಯನ್ನು ಮೂರನೇ ಅಲೆ ಎದುರಿಸಲು ಅಗತ್ಯವಿರುವ ಸಿದ್ಧತೆಯ ಜತೆಗೆ ಇತರ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು. ಜಿಲ್ಲೆಗೆ ಅಗತ್ಯವಿರುವ ಲಸಿಕೆಯನ್ನು ಪೂರೈಸುವತ್ತ ಗಮನ ಹರಿಸಬೇಕಾಗಿದೆ.
– ತೌಖೆ¤à ಚಂಡಮಾರುತದಿಂದ ಜಿಲ್ಲೆಗೆ ಒಟ್ಟು 91 ಕೋ.ರೂ. ಹಾನಿಯಾಗಿದೆ. ಇದರಲ್ಲಿ ಬಹುತೇಕ ಹಾನಿಯಾಗಿ ರುವುದು ಸಮುದ್ರ ತಡೆಗೋಡೆಗೆ. ಸಮುದ್ರ ಕೊರೆತ ಉಂಟಾಗಿ ಹಾನಿಗೊಳಗಾದ ರಸ್ತೆಗಳ ಮರು ನಿರ್ಮಾಣ, ಸಮುದ್ರ ಕೊರತೆಗೆ ಶಾಶ್ವತ ತಡೆಗೋಡೆ ನಿರ್ಮಾಣದತ್ತ ಪ್ರಯತ್ನ, ಮಳೆಯಿಂದ ಹಾನಿಗೊಳಗಾದ ಪ್ರವಾಸಿ ತಾಣಗಳ ಅಭಿವೃದ್ಧಿ, ಹಾನಿಗೊಳಗಾದ ಮನೆಗಳಿಗೆ ತುರ್ತು ಪರಿಹಾರ.

ದಕ್ಷಿಣ ಕನ್ನಡ
– ಜಿಲ್ಲೆಯಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಒತ್ತು ನೀಡುವುದು, ಅಧಿಕಾರಿ, ಜನರ ಸಹಭಾಗಿತ್ವ ಪಡೆದು ಕೊಳ್ಳುವುದು ಮುಖ್ಯ. ಅದೇ ರೀತಿ ಈಗಾಗಲೇ ನಡೆಯು ತ್ತಿರುವ ಕೊರೊನಾ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸ ಬೇಕಿದ್ದು, ಆಕ್ಸಿಜನ್‌ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಗಮನ ನೀಡಬೇಕಿದೆ.
– ನೆರೆಯಿಂದ ಆಸ್ತಿ-ಪಾಸ್ತಿಗಳಿಗೆ ಆಗಿರುವ ನಷ್ಟದ ವಾಸ್ತವಿಕ ಅಂದಾಜು ಸಮೀಕ್ಷೆ ಮಾಡಿ ಇದರಂತೆ ಪರಿಹಾರ ನೀಡಬೇಕಿದೆ. ಅದು ಕೃಷಿ ಹಾನಿಗೂ ಇದೇ ಮಾನ ದಂಡವನ್ನು ಪರಿಗಣಿಸಬೇಕು. ಸಂಭಾವ್ಯ ಭೂ ಕುಸಿತ ತಡೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next