Advertisement

ಪರೀಕ್ಷೆಗೊಳಪಟ್ಟ ಮೂವರಲ್ಲಿ ಒಬ್ಬರಿಗೆ ಸೋಂಕು! ಪಟ್ಟಿಯಲ್ಲಿ ಮೊದಲ‌ ಸ್ಥಾನದತ್ತ ಕರ್ನಾಟಕ

10:05 AM May 04, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಂಕು ತೀವ್ರತೆ ಮತ್ತಷ್ಟು ಹೆಚ್ಚಳವಾಗಿದ್ದು, ಪರೀಕ್ಷೆಗಳ ಪಾಸಿಟಿವಿಟಿ ದರ ಹಿಂದೆಂದಿಗಿಂತಲೂ ಅತಿ ಹೆಚ್ಚು ಶೇ.30 ವರದಿಯಾಗಿದೆ. ಹೆಚ್ಚು ಕಡಿಮೆ ಸೋಂಕು ಪರೀಕ್ಷೆಗೊಳಗಾದ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ!

Advertisement

ಸೋಮವಾರ ಹೊಸದಾಗಿ 44,438 ಸೋಂಕು ಪ್ರಕರಣಗಳು, 239 ಸೋಂಕಿತರ ಸಾವಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 22,112 ಮಂದಿಗೆ ಸೋಂಕು ತಗುಲಿದ್ದು, 115 ಸಾವಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಆರು ಸಾವಿರದಷ್ಟು ಕುಸಿದಿವೆ. ಆದರೆ, 6705 ಪ್ರಕರಣಗಳು, 22 ಸಾವು ಹೆಚ್ಚಳವಾಗಿವೆ.

ಒಂದು ಪ್ರದೇಶದ ಸೋಂಕಿನ ತೀವ್ರತೆಯನ್ನು ಪರೀಕ್ಷೆಗಳ ಪಾಸಿಟಿವಿಟಿ ದರದ ಮೂಲಕ ಅಳೆಯಲಾಗುತ್ತದೆ. ಸೋಮವಾರ 1,49,090 ಮಂದಿ ಸೋಂಕು ಪರೀಕ್ಷೆಗೊಳಗಾಗಿದ್ದು, ಪಾಸಿಟಿವಿಟಿ ದರ ಶೇ.30 ದಾಖಲಾಗಿದೆ. ಪರೀಕ್ಷೆಗೊಳಗಾಗದ 100 ಮಂದಿಯಲ್ಲಿ 30 ಮಂದಿಗೆ ಸೋಂಕು ದೃಢಪಟ್ಟಿದೆ. ಅಂದರೆ ಹೆಚ್ಚು ಕಡಿಮೆ ಮೂವರಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಮೊದಲ ಸ್ಥಾನದತ್ತ ಕರ್ನಾಟಕ: ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗುತ್ತಿವೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಪ್ರಕರಣಗಳು ಇಳಿಮುಖವಾಗಿದೆ, 70 ಸಾವಿರದಿಂದ 50 ಸಾವಿರ ಆಸುಪಾಸಿಗೆ ಬಂದಿವೆ. ಆದರೆ, ಕರ್ನಾಟಕವು ಮಾತ್ರ ಏರಿಕೆ ಹಾದಿ ಮುಂದುವರೆಸಿದ್ದು, ದಿನದಿಂದ ದಿನಕ್ಕೆ ದಾಖಲೆಯ ಪಾಸಿಟಿವಿಟಿ ದರ ವರದಿಯಾಗುತ್ತಿದೆ.

ಸೋಮವಾರ ಮಹಾರಾಷ್ಟ್ರದಲ್ಲಿ (48,621) ಕರ್ನಾಟಕಕ್ಕಿಂತ ನಾಲ್ಕು ಸಾವಿರ ಅಧಿಕ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿನ ತೀವ್ರತೆ ಹೀಗೆಯೇ ಮುಂದುವರಿದರೆ ಇನ್ನೆರಡು ದಿನಗಳಲ್ಲಿಯೇ ಕರ್ನಾಟಕ ಮೊದಲ ಸ್ಥಾನಕ್ಕೇರುವ ಸಾಧ್ಯತೆಗಳಿವೆ.

Advertisement

ಬೆಂಗಳೂರು ನಂ1: ಮಹಾನಗರಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನಕ್ಕೇರಿದೆ. ದೆಹಲಿ, ಪುಣೆ ನಂತರದ ಸ್ಥಾನದಲ್ಲಿವೆ.

ಡಬಲ್‌ ಮ್ಯುಟೆಂಟ್‌ ವೈರಸ್‌ ಕಾಟ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಬೆನ್ನಲ್ಲೇ ಡಬಲ್‌ ಮ್ಯೂಟೆಂಟ್‌ /ಬಿ.1.617 ವೈರಸ್‌ ಕಾಟವೂ ಹೆಚ್ಚಳವಾಗಿದೆ. ಕಳೆದ ಮಂಗಳವಾರ 20 ಮಂದಿಯಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಇದೀಗ ಒಂದೇ ವಾರದಲ್ಲಿ ಡಬಲ್‌ ಮ್ಯೂಟೆಂಟ್‌ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next