ದತ್ತು ಕಮ್ಮಾರ
ಕೊಪ್ಪಳ: ಕೊರೊನಾ ಸೋಂಕಿತರ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಗವಿಮಠವು ಊಟೋ ಪಚಾರದಲ್ಲೂ ಒಂದು ಹೆಜ್ಜೆ ಮುಂದೆ ಇದೆ. ಅವರಿಗೆ ನಿತ್ಯ ಎರಡು ಹೊತ್ತು ಕಷಾಯ, ಚಹ, ಬಿಸ್ಕೇಟ್, ಸಕ್ಕರೆ ಕಾಯಿಲೆ ಸೋಂಕಿತರಿಗೆ ರಾಗಿ ಗಂಜಿಯನ್ನೂ ಕೊಡುತ್ತಿದ್ದಾರೆ.
ಯಾವ ಸ್ಟಾರ್ ಹೋಟೆಲ್‌ನಲ್ಲೂ ಇಲ್ಲದ ಸೌಲಭ್ಯ ಇಲ್ಲಿ ಇರುವುದು ಮಾದರಿಯಾಗಿದೆ. ಇಡೀ ಜಗತ್ತು ಕೋವಿಡ್ ಮಹಾಮಾರಿಗೆ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ಕಾರ್ಯವನ್ನು ಸಂಘ-ಸಂಘ ಸಂಸ್ಥೆಗಳು, ಮಠ-ಮಾನ್ಯಗಳು ಮಾಡುತ್ತಿ ರುವುದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಅಕ್ಷರ, ಅನ್ನ, ದಾಸೋಹಕ್ಕೆ ನಾಡಿಗೆ ಹೆಸರಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠವು ಜಿಲ್ಲಾಡಳಿತದ ಸಹಕಾರದೊಂದಿಗೆ 100 ಬೆಡ್‌ಗಳ ಆಕ್ಸಿಜನ್ ಆಸ್ಪತ್ರೆ ಆರಂಭಿಸಿದೆ. ಮತ್ತೂಂದು ವಾರದಲ್ಲಿ 200 ಬೆಡ್‌ನ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.
ಕೇರ್ ಸೆಂಟರ್ ಹಾಗೂ ಆಸ್ಪತ್ರೆ ಯಲ್ಲಿ ಬಹುಪಾಲು ಸೋಂಕಿತರು ದಾಖಲಾಗಿ ಆರೈಕೆ ಯಲ್ಲಿದ್ದು, ಅವರ ಯೋಗಕ್ಷೇಮದ ಬಗ್ಗೆ ಗವಿಸಿದ್ದೇಶ್ವರ ಸ್ವಾಮೀಜಿ ನಿಗಾ ವಹಿಸಿದ್ದಾರೆ. ನಿತ್ಯ 2 ಬಾರಿ ಕಷಾಯ: ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪ್ರಸ್ತುತ ವೈದ್ಯಕೀಯ ಚಿಕಿತ್ಸಾ ವಿಧಾನ ನಡೆದಿದೆ. ಅದರೊಟ್ಟಿಗೆ ಗವಿಮಠದ ಪರಂಪರೆಯಿಂದ ಬೆಳೆದು ಬಂದಿರುವ ಆರ್ಯುವೇದ ಪದ್ಧತಿಯನ್ನೂ ಸೋಂಕಿತರಿಗೆ ಅನುಕರಣೆ ಮಾಡುತ್ತಿರುವುದು ಗಮನಾರ್ಹ ಸಂಗತಿ.
ಯೋಗ, ಧ್ಯಾನ, ಅಧ್ಯಾತ್ಮದ ಮೂಲಕ ಮನಸ್ಸಿನ ಒತ್ತಡ ನಿವಾರಿಸುವ ಜೊತೆಗೆ ಆರೋಗ್ಯ ಚೈತನ್ಯಕ್ಕಾಗಿ ನಿತ್ಯ ಬೆಳಗ್ಗೆ ಹಾಗೂ ರಾತ್ರಿ ಎರಡು ಬಾರಿ ಕಷಾಯ ನೀಡಲಾಗುತ್ತಿದೆ. ಇದರೊಟ್ಟಿಗೆ ಚಹಾ, ಬಿಸ್ಕೇಟ್‌ಗಳನ್ನೂ ಕೊಡಲಾಗುತ್ತಿದೆ. ಕಷಾಯವೂ ಸೋಂಕಿತರಿಗೆ ಒಂದು ರೀತಿಯ ಔಷ ಧಿಯಾಗಿದೆ. ಇನ್ನೂ ಸಕ್ಕರೆ ಕಾಯಿಲೆಯಿಂದ ಬಳಲುವ ಸೋಂಕಿತರಿಗೆ ರಾಗಿ ಗಂಜಿಯನ್ನೂ ಮಾಡಿ ಕೊಡಲಾಗುತ್ತಿದೆ. ಉತ್ತಮ ಸೌಲಭ್ಯ: ನಿಜಕ್ಕೂ ಗವಿಮಠದ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ನೀಡುವ ಆತಿಥ್ಯ, ಆರೈಕೆ ಸ್ಟಾರ್ ಹೋಟೆಲ್‌ನಲ್ಲಿಯೂ ಇಲ್ಲ. ಅಷ್ಟೊಂದು ಎಚ್ಚರಿಕೆಯಿಂದ ಮನೆಯ ಮಕ್ಕಳಂತೆ, ಭಕ್ತರಂತೆ ಆರೈಕೆ ಮಾಡಲಾಗುತ್ತಿದೆ.
ಹೋಟೆಲ್‌ಗಳಲ್ಲಿ ಹಣ ಕೊಟ್ಟಂತೆಲ್ಲ ಕಾಳಜಿ ವಹಿಸುವವರನ್ನು ನೋಡಿದ್ದೇವೆ. ಆದರೆ ಮಠದಲ್ಲಿ ಸೇವೆ ಎನ್ನುವ ಒಂದೇ ಒಂದು ಮನೋಭಾವದಿಂದ ಸಾಮಾಜಿಕ ಕಳಕಳಿಯಿಂದ ಇಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಇಂತಹ ಸೌಕರ್ಯ ರಾಜ್ಯ ಸೇರಿದಂತೆ ದೇಶದ ಯಾವ ಕೋವಿಡ್ ಆಸ್ಪತ್ರೆ, ಕೇರ್ ಸೆಂಟರ್ ಗಳಲ್ಲೂ ಕಾಣುವುದು ಅಪರೂಪ. ಇಲ್ಲಿನ ಸಕಲ ಸೌಲಭ್ಯಗಳನ್ನು ನೋಡಿದ ಸೋಂಕಿತರು ಮನೆ ಬಿಟ್ಟು ಗವಿಮಠದ ಕೋವಿಡ್ ಕೇರ್ ಸೆಂಟರ್‌ಗೆ ದೌಡಾಯಿಸಿ ಬರುತ್ತಿದ್ದಾರೆ. ಕೇರ್ ಸೆಂಟರ್ ಆರಂಭವಾದ ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಸೋಂಕಿತರು ಆಗಮಿಸಿದ್ದಾರೆ.
ಒಟ್ಟಿನಲ್ಲಿ ಕೊಪ್ಪಳದ ಶ್ರೀ ಗವಿಮಠ ಹಾಗೂ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳ ಸೇವಾ ಕಾರ್ಯದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು. ಎಷ್ಟು ಗುಣಗಾನ ಮಾಡಿದರೂ ಸಾಲದು. ಸಂಕಷ್ಟದ ಕಾಲದಲ್ಲಿ ಗವಿಮಠ ಸೋಂಕಿತರಿಗೆ ಸಂಜೀವಿನಿಯಾಗಿರುವುದು ಅಕ್ಷರಶಃ ಸತ್ಯ.