ಬೆಂಗಳೂರು : ನಿಮ್ಹಾನ್ಸ್ ನಲ್ಲಿ ಆಯೋಜಿಸಲಾಗಿದ್ದ ಮಕ್ಕಳಲ್ಲಿ ಕೋವಿಡ್-19 ಸೋಂಕು ನಿರ್ವಹಣೆಯ ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಗಾರವನ್ನ ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ,”ತಜ್ಞ ವೈದ್ಯರು ಹಾಗೂ ಮಕ್ಕಳ ವೈದ್ಯರಿಗೆ ಈ ವಿಶೇಷ ತರಬೇತಿ ಕಾರ್ಯಾಗಾರವನ್ನ ಹಮ್ಮಿಕೊಂಡಿದ್ದು ತೀರಾ ಅತ್ಯಗತ್ಯವಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ, ಅಸ್ತಮಾ ಇರುವ ಮಕ್ಕಳಲ್ಲಿ, ಶಿಶುವಿಗೆ ಕೋವಿಡ್ ತಗುಲಿದರೆ, ಮಕ್ಕಳಿಗೆ ಆಕ್ಸಿಜನ್ ನೀಡುವ ಪ್ರಮಾಣ ಹೀಗೆ ವಿವಿಧ ರೀತಿಯಲ್ಲಿ ಮಕ್ಕಳಲ್ಲಿನ ಕೋವಿಡ್ ನಿರ್ವಹಣೆ ಕುರಿತಂತೆ ಅರಿಯಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ನಾನು ನಂಬಿದ್ದೇನೆ,” ಎಂದು ಹೇಳಿದರು.
ಆರೋಗ್ಯ ತಜ್ಞರು ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಕೋವಿಡ್ ನ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಮತ್ತು ಅದು ಮಕ್ಕಳಿಗೆ ಹೆಚ್ಚು ಅದು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿರಬಹುದು ಎಂದು ಎಚ್ಚರಿಸುತ್ತಿದ್ದಾರೆ. ಹೀಗಾಗಿ ಹದಿನೈದು ದಿನಗಳ ಹಿಂದೆಯೇ ನಾನು ಈ ನಿಟ್ಟಿನಲ್ಲಿ ಮಕ್ಕಳ ತಜ್ಞರಿಗೆ ಕೋವಿಡ್ ನಿರ್ವಹಣೆಯ ದೃಷ್ಟಿಯಿಂದ ಇನ್ನಷ್ಟು ತರಬೇತಿ ನೀಡುವ ಕಾರ್ಯಕ್ರಮ ಆಯೋಜಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ಒಂದರಲ್ಲೇ ಸುಮಾರು 25 ಲಕ್ಷ ಮಕ್ಕಳಿವೆ ಎನ್ನಲಾಗುತ್ತದೆ. ಆದರೆ ನಮ್ಮ ಬಳಿ ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಿನ ಮಕ್ಕಳಿಗೆ ಚಿಕಿತ್ಸೆ ನೀಡುವ ದೊಡ್ಡ ಸಂಖ್ಯೆಯ ಮಕ್ಕಳ ತಜ್ಞರು ಇರುವುದಿಲ್ಲ. ಹೀಗಾಗಿ ಇನ್ನಿತರ ತಜ್ಞ ವೈದ್ಯರಿಗೆ ಮಕ್ಕಳಿಗೆ ಚಿಕಿತ್ಸೆ ನೀಡುವ ಕುರಿತಂತೆ ತರಬೇತಿ ನೀಡಲು ನಿರ್ಧರಿಸಲಾಯಿತು. ಹಾಗೆಯೇ ನಮಗೆ ಮತ್ತೊಂದು ಸವಾಲಿನ ಕೆಲಸವೆಂದರೆ ಕೋವಿಡ್ ಸೋಂಕಿತ ಮಕ್ಕಳನ್ನ ವಾರ್ಡ್ ನಲ್ಲಿ ಒಂಟಿಯಾಗಿ ಬಿಡಲಾಗುವದಿಲ್ಲ. ಹೀಗಾಗಿ ಪಾಲಕರು ಜೊತೆಯಲ್ಲಿರುವುದು ಅವಶ್ಯಕವಾಗಿರುತ್ತದೆ. ಆಗ ಮತ್ತೊಂದು ಸವಾಲು ಹುಟ್ಟಿಕೊಳ್ಳುತ್ತದೆ. ಕೋವಿಡ್ ವಾರ್ಡ್ ನಲ್ಲೇ ಇರುವ ಪಾಲಕರ ಸುರಕ್ಷತೆ ಹೇಗೆ ಎಂಬುದು. ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಗಳನ್ನ ವಹಿಸಬೇಕಿದೆ. ಹಾಗೆಯೇ ಮಕ್ಕಳಿಗೆ ನೀಡುವ ಔಷಧಿಗಳ ಕುರಿತಂತೆಯೂ ಸಾಕಷ್ಟು ತರಬೇತಿ ನೀಡಬೇಕಿದ್ದು, ಹಿರಿಯರಿಗೆ ನೀಡುವಂತೆ ಮಕ್ಕಳಿಗೆ ಅದೇ ಪ್ರಮಾಣದಷ್ಟು ನೀಡಲಾಗುವದಿಲ್ಲ. ಹಾಗೆಯೇ ಮಕ್ಕಳ ತಜ್ಞ ವೈದ್ಯರ ತಂಡವನ್ನ ರಚಿಸಬೇಕಿದ್ದು, ಅವರ ಮೂಲಕ ಉಳಿದ ವೈದ್ಯರಿಗೆ ಸಲಹೆ, ಸೂಚನೆ ನೀಡುವ ವ್ಯವಸ್ಥೆ ಮಾಡಬೇಕಿದೆ”, ಎಂದರು.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 20246 ಸೋಂಕಿತರು ಗುಣಮುಖ; 10959 ಹೊಸ ಪ್ರಕರಣ ಪತ್ತೆ
ಈಗಾಗಲೇ ಮಕ್ಕಳ ಆಸ್ಪತ್ರೆ ರೂಪಿಸುವ ನಿಟ್ಟಿನಲ್ಲಿಯೂ ನಾವು ಕಾರ್ಯತತ್ಪರರಾಗಿದ್ದೇವೆ. ಆ ನಿಟ್ಟಿನಲ್ಲಿ ಈಗಾಗಲೇ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಆಸ್ಪತ್ರೆ ಸಿದ್ಧಗೊಳ್ಳುತ್ತಿದ್ದು, ಅಲ್ಲಿ ಮಕ್ಕಳ ಜೊತೆಗೆ ಪಾಲಕರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಮ್ಮ ಮುಂದೆ ಮತ್ತೊಂದು ಹೊಸ ಸವಾಲು ಎದುರಾಗುವ ಸಾಧ್ಯತೆಯಿದೆ. ಆ ನಿಟ್ಟಿನಲ್ಲಿ ವೈದ್ಯರು ಈಗಿನಿಂದಲೇ ಸಾಕಷ್ಟು ಅಧ್ಯಯನ ಕೈಗೊಂಡು ಸಿದ್ಧರಾಗಬೇಕಿದೆ”, ಎಂದು ಸಲಹೆ ನೀಡಿದರು