ಧಾರವಾಡ: ಸೀಮೆಗೆಲ್ಲ ಹರಡಿದ ಮಾವಿನ ಹೂ ಬಾಣದ ಕಂಪು, ಎಲೆಗಳು ಕಾಣದಷ್ಟು ಚಿಗಿರೊಡೆದ ಮಾವಿನ ಹೂವು ಮತ್ತು ಹೀಚು, ಸಂಕ್ರಾಂತಿ ಸಂಭ್ರಮಕ್ಕೆ ಭೂತಾಯಿ ಸೊಬಗು ಹೆಚ್ಚಿಸಿ ನಿಂತ ಮಾವಿನ ತೋಟಗಳು, 1.5 ಲಕ್ಷ ಟನ್ ಮಾವು ಉತ್ಪಾದನೆ ನಿರೀಕ್ಷೆ. ಆದರೆ ಕೋವಿಡ್ ಮಹಾಮಾರಿ ಮಾಡಿದ ಆಘಾತ ಮತ್ತು ಹಳದಿ ನೋಣದ ಕಾಟಕ್ಕೆ ಹೆದರಿದ ಮಾವು ದಲ್ಲಾಳಿಗಳು. ಹೌದು, ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವು ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಮಾವು ಬೆಳೆ ಹುಲುಸಾಗಿ ಹೂವು ಹೀಚು ಬಿಡುತ್ತಿದ್ದು, ಬೆಳೆಗಾರರು ಸಂತಸದಲ್ಲಿದ್ದಾರೆ. ಸಂಕ್ರಾಂತಿ ಸಮಯಕ್ಕಾಗಲೇ ಎಲ್ಲಾ ತೋಟಗಳು ಹೂ ಬಿಟ್ಟಿದ್ದು, ಈ ವರ್ಷ ಪ್ರೋಲಾಂಗ್ ಪ್ರೊಸೆಸ್ ಅಂದರೆ ಸುದೀರ್ಘ ಸುಗ್ಗಿಯ ಕಾಟ ಮಾವಿನ ತೋಪುಗಳಿಗೆ ಇಲ್ಲವಾಗಿದೆ. ಹಿಂದಾಗಿ ಹೂ ಬಿಡುವ ತೋಟಗಳು ಸಹ ಈ ವರ್ಷ ಈಗಲೇ ಹೂ ಹಿಡಿದಿದ್ದು, ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿಯೇ ಉತ್ತಮ ಫಸಲಿನೊಂದಿಗೆ ರೈತರ ಕೈಗೆ ಲಭಿಸುವ ವಿಶ್ವಾಸ ಮೂಡಿದೆ.
ಆದರೆ ಕಳೆದ ವರ್ಷ ಮಾವಿನ ಹಣ್ಣುಗಳನ್ನು ಕೊಳೆಯುವಂತೆ ಮಾಡಿದ ಹಳದಿ ನೊಣ ಮತ್ತು ಕೋವಿಡ್ ಮಹಾಮಾರಿ ಲಾಕ್‌ಡೌನ್‌ನಿಂದಾಗಿ ಮಾವು ದಲ್ಲಾಳಿಗಳು ಸಂಪೂರ್ಣ ಸುಸ್ತಾಗಿ ಹೋಗಿದ್ದು, ಈ ವರ್ಷ ಮುಂಗಡವಾಗಿ ಹಣ ಬಿಚ್ಚಿ ಧೈರ್ಯದಿಂದ ಮಾವಿನ ತೋಪುಗಳನ್ನು ಗುತ್ತಿಗೆಗೆ ಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.
ಧೈರ್ಯ ಮಾಡದ ಗುತ್ತಿಗೆದಾರರು: ಈ ಭಾಗದ ಮಾವಿನ ತೋಪುಗಳನ್ನು ಗೋವಾ, ಮುಂಬೈ, ಅಹ್ಮದಾಬಾದ್ ಗಳಿಂದ ಬಂದ ಮಾವು ವ್ಯಾಪಾರಿ ಗುತ್ತಿಗೆದಾರರು ಪ್ರತಿವರ್ಷ ಕೊಳ್ಳುತ್ತಾರೆ. ಸಂಕ್ರಾಂತಿ ಸಮಯಕ್ಕೆ ಗಿಡಗಳು ಹಿಡಿದ ಹೂವು ಮತ್ತು ಹೀಚಿನ ಮೇಲೆ ತೋಟಕ್ಕೆ ಬೆಲೆಕಟ್ಟುವ ವ್ಯಾಪಾರಿಗಳು ಅರ್ಧದಷ್ಟು ಮಾತ್ರ ಹಣ ಕೊಟ್ಟು, ಇನ್ನುಳಿದದ್ದನ್ನು ಮಾವಿನ ಫಸಲನ್ನು ಕೀಳುವಾಗ ಬೆಳೆಗಾರರಿಗೆ ಕೊಡುತ್ತಾರೆ. ಆದರೆ ಕೋವಿಡ್ ಮಹಾಮಾರಿ ಮಾಡಿದ ಆಘಾತದಿಂದಾಗಿ ಈ ವರ್ಷ ಹೆಚ್ಚು ತೋಟಗಳಿಗೆ ಮುಂಗಡ ಹಣ ಕೊಡುವ ದಲ್ಲಾಳಿಗೇ ಬರುತ್ತಿಲ್ಲ. ಬಂದರೂ, ಮುಂದೆ ಮಾರುಕಟ್ಟೆ ನೋಡಿಕೊಂಡು ಎಲ್ಲರೂ ಸರಿ ಇದ್ದರೆ ಮಾತ್ರವೇ ಹೆಚ್ಚಿನ ಹಣ ನೀಡುತ್ತೇವೆ ಎನ್ನುವ ಷರತ್ತುಗಳನ್ನು ಹಾಕಿ ತೋಟಗಳಿಗೆ ಮುಂಗಡ ಹಣ ಕೊಡುತ್ತಿದ್ದಾರೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಶೇ.70 ರಷ್ಟು ತೋಟಗಳನ್ನು ದಲ್ಲಾಳಿಗಳು ಬುಕ್ ಮಾಡಿ ಬಿಡುತ್ತಿದ್ದರು.
ಆದರೆ ಈ ವರ್ಷ ಮಾವಿಗೆ ಹಣ ಹಾಕಲು ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷಗಳಿಗೆ ಹೊಲಿಸಿದರೆ ಈ ವರ್ಷ ಚೆನ್ನಾಗಿ ಬೆಳೆ ಬರುವ ನಿರೀಕ್ಷೆ ಈಗಲೂ ಇದೆ. ಆದರೆ ಜಿಗಿರೋಗ ಮತ್ತು ಇಬ್ಬನಿ ಕಾಟ ಹೆಚ್ಚಾಗಿರುವುದು ರೈತರಲ್ಲೂ ಆತಂಕ ಮೂಡಿಸಿದೆ.ಮೂಡಣ ಗಾಳಿ ಚೆನ್ನಾಗಿ ಬೀಸಿದರೆ, ಯಾವುದೇ ದೊಡ್ಡ ಗಾಳಿ ಮಳೆ ಫೆಬ್ರವರಿಅಥವಾ ಮಾರ್ಚ್‌ನಲ್ಲಿ ಕಾಣಿಸಿಕೊಳ್ಳದೆ ಹೋದರೆ ಸಾಕು ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆ ಮಾವು ತಜ್ಞರು.
ಹೊರ ರಾಜ್ಯ, ದೇಶಕ್ಕೂ ಸೈ: ಉತ್ತರ ಕರ್ನಾಟಕ ಸೇರಿದಂತೆ, ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಆಲ್ಪೋನ್ಸೋ ಮಾವಿನ ಹಣ್ಣಿನ ಖಣಜಗಳೇ ಧಾರವಾಡ ಮತ್ತು ಬೆಳಗಾವಿ ಜಿಲ್ಲೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಧಾರವಾಡ ಜಿಲ್ಲೆಯ ಆಲ್ಪೋನ್ಸೋ ಮಾವು ಸ್ಥಾನ ಪಡೆದುಕೊಂಡಿದೆ. ಸರ್ಕಾರ ಇದರ ಮೌಲ್ಯವರ್ಧನೆಗೆ ಶ್ರಮಿಸುತ್ತಿದೆಯಾದರೂ ಇನ್ನೂ ಅಚ್ಚುಕಟ್ಟು ವ್ಯವಸ್ಥೆ ಜಾರಿಯಾಗಿಲ್ಲ. ಮಾವು ಬೆಳೆಗಾರರು ಆಲ್ಪೋನ್ಸೋ ಮಾವು ರಪ್ತಿಗೆ ಬೇಕಾಗುವ ತಂತ್ರಜ್ಞಾನ, ಪ್ಯಾಕಿಂಗ್, ಸಂಸ್ಕರಣೆಗೆ ಆದ್ಯತೆ ಸಿಗಬೇಕು ಎನ್ನುತ್ತಲೇ ಇದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಕಾಣುತ್ತಲೇ ಇಲ್ಲ.
ಇದನ್ನೂ ಓದಿ:ಸಿಡಿ ಬ್ಲ್ಯಾಕ್ ಮೆಲ್ ಆರೋಪದ ಬಗ್ಗೆ ಸಿಬಿಐ ತನಿಖೆ ಆಗಲಿ: ಶರಣಪ್ರಕಾಶ ಪಾಟೀಲ
1.5 ಲಕ್ಷ ಟನ್ ಮಾವು ಉತ್ಪಾದನೆ ನಿರೀಕ್ಷೆ
ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವಿನ ಹಣ್ಣನ್ನು ಉತ್ಪಾದಿಸುವ ಜಿಲ್ಲೆ. ಇಲ್ಲಿ 11 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 2021ರಲ್ಲಿ 87 ರಿಂದ 98 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 5465 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 67,680 ಟನ್ ಉತ್ಪಾದನೆ ನಿರೀಕ್ಷೆ ಇದೆ ಎನ್ನುತ್ತಿದೆ ತೋಟಗಾರಿಕೆ ಇಲಾಖೆ. ರಾಜ್ಯದ ಲೆಕ್ಕದಲ್ಲಿ ಶೇ.50ರಷ್ಟು ಮಾವು ಈ ಎರಡೇ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ ಕೋವಿಡ್ ಮಹಾಮಾರಿ ಮತ್ತು ಹಳದಿ ನೋಣ ಆಲ್ಪೋನ್ಸೋ ಮಾವು ಬೆಳೆಗಾರರಿಗೆ ಮತ್ತು ದಲ್ಲಾಳಿಗಳಿಗೆ ಸಂಕಷ್ಟ ತೊಂಡಿದ್ದು,ಇಬ್ಬರೂ ಆತಂಕದಲ್ಲಿದ್ದಾರೆ.