Advertisement

ಪರೀಕ್ಷೆಗಳ ಒಡಲಲ್ಲಿದೆ ವೈರಸ್‌ನ ವೇಗದ ಲೆಕ್ಕ

02:23 AM Jun 30, 2020 | Hari Prasad |

ದೇಶದ ಕೆಲವು ರಾಜ್ಯಗಳಲ್ಲಿ ಕೆಲ ದಿನಗಳಿಂದ ಟೆಸ್ಟ್‌ ಪಾಸಿಟಿವಿಟಿ ದರ ಏರುತ್ತಲೇ ಇದೆ. ಟಿಪಿಆರ್‌ ಹೆಚ್ಚಾದಷ್ಟೂ ಅಪಾಯ ಅಧಿಕ ಎಂದೇ ಅರ್ಥ. ಪರಿಸ್ಥಿತಿ ಹೀಗಿದ್ದರೂ ಕೆಲವು ರಾಜ್ಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯದೇ ಇರುವುದು ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಇದೆಲ್ಲದರ ನಡುವೆಯೂ ದೇಶದಲ್ಲಿ ಸರಾಸರಿ ಕೋವಿಡ್‌-19 ಮರಣ ಪ್ರಮಾಣ ಕಡಿಮೆಯೇ ಇದೆ ಎನ್ನುವುದು ತುಸು ನೆಮ್ಮದಿಯ ವಿಷಯವಾದರೂ, ನಿತ್ಯ ಸೋಂಕಿತರ ಸಂಖ್ಯೆ ತಗ್ಗದಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು…

Advertisement

ಕೋವಿಡ್‌ ತೀವ್ರತೆಯನ್ನು ತಿಳಿಸುವ ಟಿಪಿಆರ್‌
ಜೂನ್‌ 27ರ ವೇಳೆಗೆ ದೇಶದಲ್ಲಿ ಅತಿಹೆಚ್ಚು ಟೆಸ್ಟ್‌ ಪಾಸಿಟಿವಿಟಿ ದರ (ಟಿಪಿಆರ್‌) ವರದಿಯಾದ ರಾಜ್ಯವೆಂದರೆ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲೀಗ ಟಿಪಿಆರ್‌ 18 ಪ್ರತಿಶತದಷ್ಟಿದೆ. ಅಂದರೆ, ಪ್ರತಿ ನೂರು ಕೋವಿಡ್‌-19 ಪರೀಕ್ಷೆಗಳಲ್ಲಿ 18 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ ಎಂದರ್ಥ. ಟೆಸ್ಟ್‌ ಪಾಸಿಟಿವಿಟಿ ದರವು, ಒಂದು ಪ್ರದೇಶ, ನಗರ, ರಾಜ್ಯ ಅಥವಾ ದೇಶವೊಂದರಲ್ಲಿ ಕೊರೊನಾ ತೀವ್ರತೆ ಎಷ್ಟಿದೆ ಎನ್ನುವುದನ್ನು ತಿಳಿಸುತ್ತದೆ.

ರಾಜ್ಯಗಳ ದೃಷ್ಟಿಯಿಂದ ನೋಡಿದರೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲೀಗ ತೆಲಂಗಾಣ ಇದ್ದು, 3ನೇ ಸ್ಥಾನದಲ್ಲಿ ದೆಹಲಿ ಇದೆ. ತೆಲಂಗಾಣದಲ್ಲಿ ಇಷ್ಟು ದಿನ ಸರಿಯಾಗಿ ಟೆಸ್ಟಿಂಗ್‌ ಮಾಡದ ಕಾರಣ ಜನರಲ್ಲಿ ಸೋಂಕು ಹೆಚ್ಚಾಗಿ ಹರಡಿದೆ ಎನ್ನುತ್ತಾರೆ ತಜ್ಞರು. ಈ ಕಾರಣಕ್ಕಾಗಿಯೇ, ಅಲ್ಲೀಗ ಪರೀಕ್ಷೆಗೊಳಪಡುತ್ತಿರುವ 100 ಜನರಲ್ಲಿ 17 ಸೋಂಕಿತರು ಪತ್ತೆಯಾಗುತ್ತಿದ್ದಾರೆ.


ದಕ್ಷಿಣ ರಾಜ್ಯಗಳ ಸ್ಥಿತಿ ಹೇಗಿದೆ?
ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದ ಎರಡನೇ ಹಾಟ್‌ಸ್ಪಾಟ್‌ ಆಗಿರುವ ತಮಿಳುನಾಡಿನಲ್ಲಿ ಕೋವಿಡ್ 19 ಆರ್ಭಟ ಅಧಿಕವಿದೆ. ಜೂನ್‌ 28ರ ಮಧ್ಯಾಹ್ನದವರೆಗೆ ತಮಿಳುನಾಡಲ್ಲಿ 35 ಸಾವಿರಕ್ಕೂ ಹೆಚ್ಚು  ಸಕ್ರಿಯ ಪ್ರಕರಣಗಳಿವೆಯಾದರೂ, ಆ ರಾಜ್ಯದಲ್ಲಿ ಚೇತರಿಕೆ ಪ್ರಮಾಣದಲ್ಲೂ ಉತ್ತಮ ಸುಧಾರಣೆ ಕಂಡುಬರುತ್ತಿದೆ. ಈವರೆಗೂ ಒಟ್ಟು ಸೋಂಕಿತರಲ್ಲಿ (82,275) ಶೇ.55 ಜನ ಗುಣಮುಖರಾಗಿದ್ದಾರೆ. ಅಂದರೆ, 45 ಸಾವಿರಕ್ಕೂ ಅಧಿಕ ಜನರು ಚೇತರಿಸಿಕೊಂಡಿದ್ದಾರೆ.

ಇನ್ನು ಕೇರಳದಲ್ಲಿ ಈಗಲೂ ಮೃತ್ಯುದರ ಕಡಿಮೆಯೇ ಇದ್ದು, ಇದುವರೆಗೂ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು 23 ಜನರು ಮೃತಪಟ್ಟಿದ್ದಾರೆ. ಇನ್ನೊಂದೆಡೆ, ಕರ್ನಾಟಕ ಹಾಗೂ ಆಂಧ್ರದಲ್ಲಿ ಒಂದೇ ದಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿತು. ಸಕ್ರಿಯ ಪ್ರಕರಣಗಳಲ್ಲಿ ಆಂಧ್ರ ನಮಗಿಂತ ಮುಂದೆ ಇದೆಯಾದರೂ, ಅಲ್ಲಿ ಟೆಸ್ಟಿಂಗ್‌ಗಳ ಪ್ರಮಾಣವೂ ಅಧಿಕವಿದೆ. ಭಾನುವಾರದ ವೇಳೆಗೆ ಆಂಧ್ರಪ್ರದೇಶ ನಮಗಿಂತ 2 ಲಕ್ಷ 46 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದೆ.

Advertisement


ನೆರೆ ರಾಷ್ಟ್ರಗಳಲ್ಲಿ ಕೋವಿಡ್‌
ನೆರೆಯ ಆಫ್ಘಾನಿಸ್ಥಾನವು ಕೋವಿಡ್ 19 ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿದೆಯಾದರೂ ಕೆಲ ದಿನಗಳಿಂದ ಅಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣಲಾರಂಭಿಸಿದೆ. 3.89 ಕೋಟಿ ಜನಸಂಖ್ಯೆಯ ಆ ದೇಶದಲ್ಲಿ ಇದುವರೆಗೂ 31 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಷ್ಟಿದ್ದರೂ ಟೆಸ್ಟಿಂಗ್‌ ಸಂಖ್ಯೆ ಮಾತ್ರ ಅಲ್ಲಿ ಕೇವಲ 71 ಸಾವಿರದಷ್ಟಿದೆ.

ಈಗ ಅಫ್ಘಾನಿಸ್ಥಾನದಲ್ಲಿ ಪ್ರತಿ ನೂರು ಪರೀಕ್ಷೆಗಳಲ್ಲಿ 44 ಸೋಂಕಿತರು ಪತ್ತೆಯಾಗಲಾರಂಭಿಸಿದ್ದಾರೆ. ಇನ್ನೊಂದೆಡೆ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಕೋವಿಡ್ 19 ಅಷ್ಟಾಗಿ ಬಾಧಿಸಿಲ್ಲ, ಇದುವರೆಗೂ ಅಲ್ಲಿ 2037 ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 1678 ಜನ ಚೇತರಿಸಿಕೊಂಡಿದ್ದಾರೆ. ಇನ್ನು, 7 ಲಕ್ಷ ಜನಸಂಖ್ಯೆಯ ಭೂತಾನ್‌ನಲ್ಲಿ  ಇದುವರೆಗೂ 76 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲೂ 44 ಜನ ಚೇತರಿಸಿಕೊಂಡಿದ್ದಾರೆ.


ಬ್ರೆಜಿಲ್‌: 100 ಪರೀಕ್ಷೆಗಳಲ್ಲಿ 45 ಸೋಂಕಿತರು!
ಜಗತ್ತಿನ ಎರಡನೇ ಹಾಟ್‌ಸ್ಪಾಟ್‌ ಆಗಿರುವ ಲ್ಯಾಟಿನ್‌ ಅಮೆರಿಕನ್‌ ರಾಷ್ಟ್ರ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿ ಏರುತ್ತಿದೆ. ಸೋಂಕು ಯಾವ ಪ್ರಮಾಣದಲ್ಲಿ ಹರಡಿದೆ ಎನ್ನುವುದಕ್ಕೆ ಅಲ್ಲಿನ ಟೆಸ್ಟ್‌ ಪಾಸಿಟಿವಿಟಿ ರೇಟ್‌ ಸಾಕ್ಷಿಯಾಗಿ ನಿಲ್ಲುತ್ತಿದೆ. ಜೂನ್‌ 28ರ ವೇಳೆಗೆ ಬ್ರೆಜಿಲ್‌ನ ಟಿಪಿಆರ್‌ 44.58 ಪ್ರತಿಶತ ದಾಖಲಾಗಿದೆ. ಅಂದರೆ, ಪ್ರತಿ 100 ಪರೀಕ್ಷೆಗಳಲ್ಲಿ 45 ಜನ ಸೋಂಕಿತರು ಪತ್ತೆಯಾಗುತ್ತಿದ್ದಾರೆ!

ಈಗ 11 ನೇ ಹಾಟ್‌ಸ್ಪಾಟ್‌ ಆಗಿರುವ ಮೆಕ್ಸಿಕೋದಲ್ಲೂ ಟಿಪಿಆರ್‌ ಅಧಿಕ ದಾಖಲಾಗುತ್ತಿದ್ದು, ಪ್ರತಿ ನೂರು ಪರೀಕ್ಷೆಗಳಲ್ಲಿ 39 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ದೊಡ್ಡಣ್ಣ ಅಮೆರಿಕದಲ್ಲಿ ಈಗಲೂ ಅತೀ ಹೆಚ್ಚಿನ ಸೋಂಕಿತರಿದ್ದಾರಾದರೂ, ಅಲ್ಲಿನ ಟಿಪಿಆರ್‌ 8.09 ಪ್ರತಿಶತದಷ್ಟಿದೆ. ಅಮೆರಿಕ ಇದುವರೆಗೂ 3 ಕೋಟಿ 25 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದೆ. ಈ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಟಿಪಿಆರ್‌ 6.54 ಪ್ರತಿಶತದಷ್ಟಿದ್ದರೆ, ರಷ್ಯಾದಲ್ಲಿ 3.38 ಪ್ರತಿಶತ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next