ಕೋವಿಡ್ ವೈರಾಣುಗಳು ಕೇವಲ ಶ್ವಾಸಕೋಶವನ್ನಷ್ಟೇ ಹಾನಿಗೊಳಿಸಿ, ಸೋಂಕಿತನನ್ನು ಮರಣದ ಬಾಗಿಲಲ್ಲಿ ನಿಲ್ಲಿಸುತ್ತೆ ಎನ್ನುವುದು ಇಲ್ಲಿಯ ತನಕ ತಿಳಿದಿತ್ತು. ಆದರೆ, ಈಗ ಈ ವೈರಾಣುಗಳು ಕರುಳಿನ ಭಾಗಕ್ಕೂ ಲಗ್ಗೆಯಿಟ್ಟು ಸೋಂಕನ್ನು ಉಲ್ಬಣಗೊಳಿಸುವಂತೆ ಮಾಡುತ್ತವೆ ಎನ್ನುವ ಸಂಗತಿ ತಜ್ಞರಿಂದ ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಯಲ್ಲಿ ವೈರಾಣುಗಳು ಮೊದಲು ಶ್ವಾಸಕೋಶದ ಎಪಿಥೇಲಿಯಲ್ ಕೋಶಗಳನ್ನು ಪ್ರವೇಶಿಸುತ್ತವೆ. ಅಲ್ಲಿ ಇವು ಮೊದಲು ಮಾಡುವ ಕೆಲಸ, ಎಸಿಇ-2 ಕಿಣ್ವಗಳನ್ನು ದುರ್ಬಲಗೊಳಿಸುವುದು. ಕರುಳಿನ ಜೀವಕೋಶಗಳಲ್ಲೂ ಎಸಿಇ-2 ಕಿಣ್ವಗಳಿದ್ದು, ವೈರಸ್‌ಗಳು ಅಲ್ಲಿಗೂ ಬೇಗ ಹಬ್ಬುತ್ತವೆ.
ಇದರಿಂದ ಸೋಂಕಿತನಲ್ಲಿ ಅತಿಸಾರ, ಹೊಟ್ಟೆನೋವಿನಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ ಎಂದು ನೆದರ್ಲೆಂಡಿನ ಎರಾಸ್ಮಸ್ ವೈದ್ಯಕೀಯ ಕೇಂದ್ರದ ಸಂಶೋಧಕರು ಸೈನ್ಸ್ ಮ್ಯಾಗಜಿನ್ ಒಂದರಲ್ಲಿ ಉಲ್ಲೇಖೀಸಿದ್ದಾರೆ.
ಸೋಂಕು ಹರಡುವ ಭೀತಿ: ಕೋವಿಡ್ ಸೋಂಕು ಹುಟ್ಟಿದ ಚೀನದಲ್ಲಿ ಮತ್ತೆ ಸೋಂಕು ಹರಡುವ ಭೀತಿ ಕಂಡು ಬರುತ್ತಿದೆ. ರವಿವಾರ ಮೂವರು ಸೋಂಕಿತರು ಕಂಡು ಬಂದಿದ್ದು, ಇವರು ವಿದೇಶದಿಂದ ಬಂದವರಾಗಿದ್ದಾರೆ. ಅಲ್ಲದೇ ದೇಶದ 10 ಪ್ರಾಂತ್ಯಗಳಲ್ಲಿ 962 ಕೋವಿಡ್ ಸೋಂಕು ಲಕ್ಷಣ ರಹಿತ ಪ್ರಕರಣಗಳು ಕಾಣಿಸಿಕೊಂಡಿವೆ. ಇವುಗಳ ವರದಿ ಪಾಸಿಟಿವ್ ಆಗಿದೆ. ಆದರೆ, ಈ ಪೈಕಿ ಯಾರೊಬ್ಬರಲ್ಲೂ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ನೋವು ಕಂಡು ಬಂದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್, ಕಳೆದ ಎರಡು ವಾರಗಳ ಅವಧಿಯಲ್ಲಿ 10 ಪ್ರದೇಶಗಳಲ್ಲಿ ಲಕ್ಷಣ ರಹಿತ ಪ್ರಕರಣಗಳು ಕಂಡುಬಂದಿವೆ. ಮತ್ತೆ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.