Advertisement

ಕೋವಿಡ್ ಸೋಂಕಿನ ವರ್ತನೆಯೇ ಬದಲು! ; ವುಹಾನ್‌, ಈಶಾನ್ಯ ಚೀನದಲ್ಲಿ ಭಿನ್ನ ಪ್ರಕರಣಗಳು

01:50 AM May 22, 2020 | Hari Prasad |

ಬೀಜಿಂಗ್‌: ಕೋವಿಡ್ ವೈರಸ್‌ ಎಂಬ ಮಹಾಮಾರಿಯ ಸೃಷ್ಟಿಯಿಂದ ಆರಂಭಿಕ ಆಘಾತ ಎದುರಿಸಿದ್ದ ಚೀನಗೆ ಈಗ ಹೊಸ ಸವಾಲೊಂದು ಎದುರಾಗಿದೆ.

Advertisement

ಚೀನದಲ್ಲಿ ಎರಡನೇ ಹಂತದಲ್ಲಿ ಸೋಂಕು ವ್ಯಾಪಿಸುತ್ತಿದ್ದು, ಮೊದಲ ಹಂತದಲ್ಲಿ ವುಹಾನ್‌ ನಲ್ಲಿ ಕಾಣಿಸಿಕೊಂಡಿದ್ದ ಸೋಂಕಿಗೂ, ಈಗ ಈಶಾನ್ಯ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕಿಗೂ ಭಾರೀ ವ್ಯತ್ಯಾಸಗಳು ಕಂಡುಬರುತ್ತಿದೆ.

ಈಶಾನ್ಯ ಭಾಗದಲ್ಲಿ ಕೋವಿಡ್ ವೈರಸ್‌ ಭಿನ್ನವಾಗಿ ವರ್ತಿಸುತ್ತಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನವೇ ಸಂಕೀರ್ಣಗೊಳ್ಳುತ್ತಿರುವುದು ಚೀನಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಲ್ಲದೆ, ಈ ಬೆಳವಣಿಗೆಯು ಸೋಂಕು ವ್ಯಾಪಿಸುತ್ತಾ ಹೋದಂತೆ, ವೈರಸ್‌ನ ವರ್ತನೆಯಲ್ಲಿ ಬದಲಾವಣೆ ಆಗುತ್ತಾ ಸಾಗುತ್ತದೆ ಎಂಬ ಹೊಸ ಸುಳಿವನ್ನು ಕೂಡ ತಜ್ಞರಿಗೆ ನೀಡಿದೆ.

ಬೇಗನೆ ಗುಣವಾಗುವುದಿಲ್ಲ: ಸೋಂಕಿಗೆ ಕಡಿವಾಣ ಹಾಕುವಲ್ಲಿ ಚೀನ ಬಹುತೇಕ ಯಶಸ್ವಿಯಾಗಿತ್ತು. ಆದರೆ, ಇತ್ತೀಚೆಗೆ ಅಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ.

Advertisement

ಅದರಲ್ಲೂ, ಜಿಲಿನ್‌ ಮತ್ತು ಹೆಲಾಂಗ್‌ ಜಿಯಾಂಗ್‌ ಪ್ರಾಂತ್ಯಗಳಲ್ಲಿ ಕೋವಿಡ್ ಸೋಂಕಿತರ ದೇಹದಲ್ಲಿ ಸೋಂಕು ದೀರ್ಘ‌ಕಾಲ ಉಳಿಯುತ್ತಿದೆ ಮಾತ್ರವಲ್ಲ, ರೋಗಿಗಳು ಕೂಡ ಗುಣಮುಖರಾಗಲು ಬಹಳಷ್ಟು ಸಮಯ ತಗಲುತ್ತಿದೆ ಎಂದು ಇಲ್ಲಿನ ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ವುಹಾನ್‌ ನಲ್ಲಿ ಕಂಡುಬಂದ ಸೋಂಕು ಒಬ್ಬ ವ್ಯಕ್ತಿಯ ದೇಹಕ್ಕೆ ಸೇರಿಕೊಂಡ ಒಂದೆರಡು ವಾರಗಳಲ್ಲೇ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಪ್ರಾಂತ್ಯಗಳಲ್ಲಿ ಕೋವಿಡ್ ಸೋಂಕಿತನಿಗೆ ರೋಗ ಲಕ್ಷಣ ಕಂಡುಬರುತ್ತಲೇ ಇಲ್ಲ, ಇನ್ನೂ ಕೆಲವರಿಗೆ ದೀರ್ಘಾವಧಿಯ ಬಳಿಕ ಕಂಡುಬರುತ್ತಿವೆ.

ಹೀಗಾಗಿ, ಸೋಂಕಿತರನ್ನು ಹಾಗೂ ಸಂಪರ್ಕಿತರನ್ನು ಪತ್ತೆಹಚ್ಚುವಷ್ಟರಲ್ಲೇ ಅದು ಸಾಕಷ್ಟು ಮಂದಿಗೆ ಹಬ್ಬಿಯಾಗಿರುತ್ತದೆ ಎಂದೂ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರಷ್ಯಾದಿಂದ ಆಮದಾಯಿತೇ?
ವುಹಾನ್‌ನ ರೋಗಿಗಳಲ್ಲಿ ಹೃದಯ, ಕಿಡ್ನಿ ಸೇರಿದಂತೆ ಬಹು ಅಂಗ ವೈಫ‌ಲ್ಯವಾದಂಥ ಪ್ರಕರಣಗಳೇ ಹೆಚ್ಚಿದ್ದವು. ಆದರೆ, ಈಶಾನ್ಯದ ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವಂಥ ಪ್ರಕರಣಗಳೇ ಹೆಚ್ಚಿವೆ ಎನ್ನುವುದನ್ನು ವೈದ್ಯರು ಕೂಡ ಪತ್ತೆಹಚ್ಚಿದ್ದಾರೆ.

ಇದೇ ವೇಳೆ, ಈಶಾನ್ಯ ಭಾಗದ ಕ್ಲಸ್ಟರ್‌ಗಳಲ್ಲಿ ಕಂಡುಬರುತ್ತಿರುವ ವೈರಸ್‌ ವಿದೇಶಗಳಿಂದ ಬಂದಿದ್ದಿರಬಹುದೇ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಜಿಲಿನ್‌ ಮತ್ತು ಹೆಲಾಂಗ್‌ ಜಿಯಾಂಗ್‌ ಎರಡೂ ಪ್ರಾಂತ್ಯಗಳೂ ರಷ್ಯಾದೊಂದಿಗೆ ಗಡಿ ಹಂಚಿಕೊಂಡಿವೆ. ಹಾಗಾಗಿ ರಷ್ಯಾದಿಂದ ಬಂದ ಸೋಂಕಿತರಿಂದಾಗಿ ಈ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸಿರಲೂಬಹುದು ಎಂದಿದ್ದಾರೆ.

ಬುಧವಾರ ಚೀನದಲ್ಲಿ ಒಟ್ಟು 5 ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 4 ಸ್ಥಳೀಯವಾಗಿ ಹಬ್ಬಿದ್ದರೆ, ಒಂದು ಪ್ರಕರಣದಲ್ಲಿ ವಿದೇಶದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ತಗುಲಿದೆ.
ದೇಶದಲ್ಲಿ ಈವರೆಗೆ 82,965 ಮಂದಿಗೆ ಸೋಂಕು ದೃಢಪಟ್ಟಿದ್ದು, 4,634 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next