ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕಿತರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ಸೋಂಕು ಹರಡುವುದನ್ನು ತಪ್ಪಿಸಲು ಸರ್ಕಾರ ಇಂದು ಕಠಿಣ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ 14 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. ವೀಕೆಂಡ್ ಕರ್ಫ್ಯೂ ಸಮಯದಲ್ಲಿದ್ದ ನಿಯಮಾವಳಿಗಳು ವಾರ ಪೂರ್ತಿ ಅನ್ವಯವಾಗುವಂತೆ ಮಾಡಲು ಸರ್ಕಾರ ಆದೇಶಿಸಿದೆ.
ಮಂಗಳವಾರ ರಾತ್ರಿಯಿಂದ (ಏ.27) ದಿಂದ ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಬಂದ್ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಮಾಹಿತಿಯನ್ನು ಸ್ಪಷ್ಟಪಡಿಸಿದರು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
ಉಚಿತ ಲಸಿಕೆ: ಮೇ.1ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 45 ವರ್ಷದೊಳಗಿನವರೆಗೆ ಉಚಿತ ಲಸಿಕೆ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ವಿಧಾನಸಭೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಇದರಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಹರಡುವಿಕೆಯನ್ನು ತಡೆಗಟ್ಟ ಬೇಕಾದರೆ ಲಾಕ್ ಡೌನ್ ಅನಿವಾರ್ಯ ಎಂದು ಹಲವು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.