ಮೈಸೂರು: ಆರಂಭದಲ್ಲಿ ಇಡೀ ರಾಜ್ಯದಲ್ಲಿಯೇ ಕೋವಿಡ್ 19 ಹಾಟ್‌ಸ್ಪಾಟ್ ಎಂದೇ ಗುರುತಿಸಿಕೊಂಡಿದ್ದ ಮೈಸೂರು, ಕೋವಿಡ್ 19 ಸೋಂಕು ಹರಡುವಿಕೆ ಸಮರ್ಪಕವಾಗಿ ನಿಯಂತ್ರಿಸಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಕೋವಿಡ್ 19 ವೈರಾಣು ಮತ್ತೂಂದು ಸುತ್ತಿನಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆ ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ. ಮೊದಲ ಹಂತದಲ್ಲಿ ನಂಜನಗೂಡು ಜ್ಯುಬಿ ಲಿಯಂಟ್ ಕಾಡಿದ್ದರೆ, ಇದೀಗ ಎರಡ ನೇ ಹಂತದಲ್ಲಿ ಹೊರ ರಾಜ್ಯ ವಲಸಿಗರಿಂದ ಸೋಂಕು ಪ್ರಕರಣಗಳು ಪತ್ತೆಯಾಗಿ ಭಯ ಮೂಡಿಸಿವೆ. ಈವರೆಗೆ ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆ ಕಂಡಿದೆ. ಹೊರ ರಾಜ್ಯದಿಂದ ಬಂದ 1,767ಯಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದೆ.
ವಲಸಿಗರಿಂದ: ಜಿಲ್ಲೆಯಲ್ಲಿ ಮಾ.23ರಂದು ಮೊದಲ ಬಾರಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಎಲ್ಲಾ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ಸಮುದಾಯಕ್ಕೆ ಹರಡುವುದನ್ನು ಸಮರ್ಥವಾಗಿ ತಡೆದಿತ್ತು. ಜೊತೆಗೆ ಎಲ್ಲಾ 90 ಮಂದಿ ಸೋಂಕಿತರನ್ನು ಗುಣಪಡಿಸಿ ದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ, ಲಾಕ್‌ಡೌನ್ -4ನೇ ಹಂತದಲ್ಲಿ ವಲಸೆ ಕಾರ್ಮಿಕರು ಮತ್ತು ಹೊರ ರಾಜ್ಯದಲ್ಲಿದ್ದ ಜಿಲ್ಲೆಯವರು ವಾಪಸಾ ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತೂಂದು ಸುತ್ತಿನಲ್ಲಿ ಕೋವಿಡ್ 19 ಆರ್ಭಟ ಮುಂದುವರಿದಿದೆ.
ಗ್ರಾಮೀಣ ಭಾಗಕ್ಕೆ: ಮೊದಲ ಸುತ್ತಿನಲ್ಲಿ ಮೈಸೂರು ನಗರ ಮತ್ತು ನಂಜನಗೂಡು ತಾಲೂಕಿಗಷ್ಟೇ ಸೀಮಿತವಾಗಿದ್ದ ಸೋಂಕು, ಎರಡನೇ ಸುತ್ತಿನಲ್ಲಿ ಹುಣಸೂರು ಮತ್ತು ಕೆ.ಆರ್.ನಗರ ತಾಲೂಕಿಗೂ ವಿಸ್ತರಿಸುವ ಮೂಲಕ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ವಾರದ ಹಿಂದೆ ಹುಣಸೂರು ತಾಲೂಕಿನ ಹೊಸಪೆಂಜಳ್ಳಿಯಲ್ಲಿ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡು, ಗ್ರಾಮವನ್ನು ಸೀಲ್ ಡೌನ್ ಮಾಡಿ, ಆಕೆಯ ಸಂಪರ್ಕದಲ್ಲಿದ್ದ 50 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಈ ಘಟನೆ ಬಳಿಕ ಕೆ.ಆರ್.ನಗರ ತಾಲೂಕಿನ ಗರ್ಭಿಣಿಯಲ್ಲೂ ಸೋಂಕು ದೃಢಪಟ್ಟಿದೆ. ಆಕೆಯ ಸಂಪರ್ಕದಲ್ಲಿದ್ದ 37 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತ ಮಹಿಳೆ ಮನೆ ಸುತ್ತ ಸೀಲ್‌ಡೌನ್ ಮಾಡಲಾಗಿದೆ.
ಮೈಸೂರು ನಗರದಲ್ಲೂ ಸೋಂಕು: ಜೂ.9 ರಂದು ಮೈಸೂರಿನ ಇಟ್ಟಿಗೆಗೂಡಿನ ಮನೆಯಲ್ಲಿ ಕ್ವಾರಂಟೈನಲ್ಲಿದ್ದ ತಮಿಳುನಾಡಿಂದ ವಾಪಸಾಗಿದ್ದ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದ್ದು, ಇಟ್ಟಿಗೆಗೂಡು ಬಡಾವಣೆ ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಜತೆಗೆ ಕಳೆದ ಹತ್ತು ದಿನಗಳ ಹಿಂದೆ ರಾಮ ಕೃಷ್ಣ ಜಿ.ಬ್ಲಾಕ್‌ನ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದ್ದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿತ್ತು. ಒಟ್ಟಾರೆ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರಲ್ಲಿ ಸೋಂಕು ದೃಢಪಡುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಹೊರಗಿನಿಂದ ಬಂದವರು 1,767: ಈವರೆಗೆ ಹೊರ ರಾಜ್ಯದಿಂದ ಮೈಸೂರಿಗೆ ಹಿಂದಿ ರುಗಿದ 1767 ಮಂದಿಯಲ್ಲಿ 26 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ 06 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು: ಮುಂಬೈ, ಮತ್ತಿತರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ, ಗಡಿಯಲ್ಲಿ ಪೊಲೀಸ್ ಕಣ್ಗಾವಲು, ಏಳು ದಿನ ಫೆಸಿಲಿಟಿ ಕ್ವಾರಂಟೈನ್ ಮುಗಿಸಿ, ಹೋಂ ಕ್ವಾರಂಟೈನಲ್ಲಿದ್ದವರಲ್ಲಿ ಸೋಂಕು ದೃಢಪಟ್ಟರೆ ಅವರಿಗೆ ಸೂಕ್ತ ಚಿಕಿತ್ಸೆ, ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಕ್ವಾರಂಟೈನ್, ಸೋಂಕಿತರ ಮನೆಯ ಸುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಇತ್ಯಾದಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಸಕ್ರಿಯ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ: ಜಿಲ್ಲೆಯಲ್ಲಿ ಎರಡನೇ ಸುತ್ತಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶನಿವಾರವೂ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಮೈಸೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಹೊರ ರಾಜ್ಯದಿಂದ ಬಂದವರಲ್ಲಿ 26 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ 6 ಮಂದಿ ಗುಣಮುಖರಾಗಿದ್ದರೆ,ಉಳಿದ 20 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
* ಸತೀಶ್ ದೇಪುರ