Advertisement

ಕೋವಿಡ್ 19 ಹೊಡೆತ: ಕರಾವಳಿ ಅಭಿವೃದ್ಧಿಗೆ ಕರಿಛಾಯೆ!

02:39 AM Apr 28, 2020 | Team Udayavani |

ಮಂಗಳೂರು: ಕೋವಿಡ್ 19 ಹಾವಳಿಯಿಂದಾಗಿ ದೇಶದ ಅಭಿವೃದ್ಧಿ ಪರ್ವಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಭವಿಷ್ಯದಲ್ಲಿ ಕರಾವಳಿಯ ಅಭಿವೃದ್ಧಿ ಕಾಮಗಾರಿಗಳಿಗೆ ಕರಿಛಾಯೆ ಎದುರಾಗುವ ಸಂಭವವಿದೆ.

Advertisement

ಸರಕಾರಿ ಕಾಮಗಾರಿಗಳಿಗೆ ಬಂಡವಾಳ ಹೂಡಲು ಸರಕಾರ ಹಿಂದೆ – ಮುಂದೆ ನೋಡುವ ಪರಿಸ್ಥಿತಿ ಇದ್ದರೆ ಖಾಸಗಿ ಕಂಪೆನಿ, ಕೈಗಾರಿಕೆಗಳು ಹೊಸ ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಅಧಿಕ.

ಸಂಸದರ ನಿಧಿಯನ್ನು ಎರಡು ಆರ್ಥಿಕ ವರ್ಷಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಅಭಿವೃದ್ಧಿಗಾಗಿ ಸಿಗುವ 10 ಕೋ.ರೂ.ಗಳಿಗೂ ಕತ್ತರಿ ಬೀಳಲಿದೆ. ಈ ಅನುದಾನದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ. ಶಾಸಕರ ನಿಧಿಯೂ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ಕರಾವಳಿಯ ಹೊಸ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ.

ಸ್ಥಳೀಯಾಡಳಿತಗಳ ಅನುದಾನದಲ್ಲಿಯೂ ಕಡಿತ ಸೂತ್ರ ಜಾರಿಯಾಗಬಹುದು. ಇದರಿಂದಲೂ ಯೋಜನೆಗಳಿಗೆ ಅನುದಾನ ಕೊರತೆ ಎದುರಾಗಬಹುದು.

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬರುವ ವಿಶೇಷ ಅನುದಾನಗಳೂ ಕಡಿತವಾಗುವ ಸಾಧ್ಯತೆ ಯಿದ್ದು, ಕರಾವಳಿಯ ಹೆದ್ದಾರಿ, ರೈಲ್ವೇ ಯೋಜನೆಗಳ ವೇಗಕ್ಕೆ ಅಡ್ಡಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಎಂಆರ್‌ಪಿಎಲ್‌ ಸಹಿತ ಪ್ರತಿಷ್ಠಿತ ಕೈಗಾರಿಕೆಗಳು ಹೊಸ ಹೂಡಿಕೆಗೆ ಮನಸ್ಸು ಮಾಡುವ ಕಾಲದಲ್ಲಿ ಮತ್ತು ರಿಯಲ್‌ ಎಸ್ಟೇಟ್‌ ಚೇತರಿಕೆ ಕಾಣಬಹುದಾದ ಸಂದರ್ಭದಲ್ಲಿ ಕೋವಿಡ್ 19 ಹೊಡೆತ ಕರಾವಳಿಯ ಆರ್ಥಿಕ ರಂಗಕ್ಕೆ ಹಿನ್ನಡೆ ಎಂದೇ ಹೇಳಬೇಕು. ಕರಾವಳಿಯ ಸಾವಿರಾರು ಸಣ್ಣ ಕೈಗಾರಿಕೆ, ಕಂಪೆನಿ, ಸಂಸ್ಥೆಗಳ ಮುಂದಿನ ಹೆಜ್ಜೆ ಮತ್ತು ಅಲ್ಲಿರುವ ಕಾರ್ಮಿಕರ ಉದ್ಯೋಗವೂ ಪ್ರಶ್ನಾರ್ಥಕ ಚಿಹ್ನೆಯಡಿ ಇವೆ.

ಇಲಾಖೆ ಅನುದಾನಕ್ಕೆ ಕತ್ತರಿ
ಸರಕಾರಿ ಇಲಾಖೆಗಳಿಗೆ ವಾರ್ಷಿಕ ನಿಗದಿತ ಅನುದಾನಕ್ಕೂ ಕತ್ತರಿ ಪ್ರಯೋಗ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೆಲವು ಇಲಾಖೆಗಳ ಅನುದಾನವನ್ನು ಕೋವಿಡ್ 19 ನಿಭಾವಣೆಗಾಗಿ ಬಳಕೆ ಮಾಡಲಾಗುವುದು ಎಂದು ಉಲ್ಲೇಖೀಸಲಾಗಿದೆ. ಕಳೆದ ಮಳೆಗಾಲ ಕರಾವಳಿಯ ವಿವಿಧೆಡೆ ಸಂಭವಿಸಿದ ಅನಾಹುತಗಳ ಕಹಿ ನೆನಪು ಮಾಸುವ ಮುನ್ನವೇ ಕೋವಿಡ್ 19 ಎದುರಾಗಿದೆ. ಇನ್ನೊಂದು ಮಳೆಗಾಲವೂ ಸನಿಹದಲ್ಲಿದೆ. ಈ ಬಾರಿ ಮಳೆ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕವೂ ಸಹಜ.

ಕೋವಿಡ್ 19 ದಿಂದ ಕರಾವಳಿ ಅಭಿವೃದ್ಧಿಯ ಎಲ್ಲ ವಿಭಾಗಗಳಿಗೆ ಹೊಡೆತ ಬಿದ್ದಿದೆ. ಆರ್ಥಿಕತೆ ಮತ್ತೆ ಚೇತರಿಕೆ ಕಾಣಲು ಸಾಕಷ್ಟು ಸಮಯ ಬೇಕಾಗಬಹುದು. ಸರಕಾರ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಬಹುಮುಖ್ಯ ಹೆಜ್ಜೆಗಳ ಮೇಲೆ ನಿರೀಕ್ಷೆಯಿದೆ.
– ಐಸಾಕ್‌ ವಾಝ್,
ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next