ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು, ಕಾನೂನು, ಬಿ.ಇಡಿ ಹಾಗೂ ಚಿತ್ರಕಲೆ ಕಾಲೇಜುಗಳು ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಇನ್ನು ಮುಂದೆ ಸುಲಭವಾಗಿ ಮೇಲಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಲು ಆಗಾಗ್ಗೆ ಕೇಂದ್ರ ಕಚೇರಿಗೆ ಬರುತ್ತಿರುತ್ತಾರೆ. ಕೋವಿಡ್ 19 ವೈರಸ್ ವ್ಯಾಪಕರವಾಗಿ ಹರಡುತ್ತಿರುವುದರಿಂದ ಇನ್ನು ಮುಂದೆ ಕೇಂದ್ರ ಕಚೇರಿಗೆ ಬರಕೂಡದು ಮತ್ತು ಏನೇ ಸಮಸ್ಯೆಯಿದ್ದರೂ ಮೈತ್ರಿ ಸಹಾಯವಾಣಿಗೆ ತಿಳಿಸಬೇಕು ಎಂದು ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ ಫರ್ಮಾನು ಹೊರಡಿಸಿದೆ.
ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಮತ್ತು ಕಾಲೇಜುಗಳಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ನೌಕರರು ಪೂರ್ವಾನುಮತಿ ಇಲ್ಲದೇ ಅಧಿಕಾರಿಗಳನ್ನು ಭೇಟಿ ಮಾಡುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲೇ ಬೇಕೆಂದಿದ್ದರೆ, ಕಾಲೇಜು ಅಥವಾ ಕಚೇರಿ ಮುಖ್ಯಸ್ಥರಿಂದ ಅನುಮತಿ ಪತ್ರದ ಜತೆಗೆ ರಜೆ ಪಡೆದುಕೊಳ್ಳಬೇಕು. ಮುಖ್ಯಸ್ಥರ ಅನುಮತಿ ಪತ್ರ ಹಾಗೂ ರಜೆ ಪಡೆಯದೇ ಇದ್ದರೆ ಮೇಲಧಿಕಾರಿಗಳ ಭೇಟಿ ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟ ಸೂಚನೆ ಹೊಡಿಸಿದೆ.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಬೋಧಕ, ಬೋಧಕತೇರ ಸಿಬ್ಬಂದಿ ತಮ್ಮ ಕೆಲಸಕ್ಕಾಗಿ ಕೇಂದ್ರ ಕಚೇರಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಇಲಾಖೆ ಸಿಬ್ಬಂದಿ ತನ್ನ ಸಮಸ್ಯೆ ಹೇಳಿಕೊಳ್ಳಲು ಈಗಾಗಲೇ ಸಹಾಯವಾಣಿ ಮತ್ತು ಇ-ಮೇಲ್ ನೀಡಲಾಗಿದೆ. ಇದಾಗಿಯೂ ನೇರವಾಗಿ ಕಚೇರಿಗೆ ಬರುತ್ತಿದ್ದಾರೆ. ಇಂತಹ ಸಂದಿಗಟಛಿ ಪರಿಸ್ಥಿತಿಯಲ್ಲಿ ಕಚೇರಿಗೆ ಬರುವುದನ್ನು ತಪ್ಪಿಸಲು ಇಲಾಖೆಯಿಂದ ಈ ಸೂಚನೆ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯದ ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲ ಜಂಟಿ ನಿರ್ದೇಶಕರು, ಸರ್ಕಾರಿ, ಅನುದಾನಿತ ಪ್ರಥಮದರ್ಜೆ ಕಾಲೇಜು, ಕಾನೂನು, ಬಿ.ಇಡಿ ಹಾಗೂ ಚಿತ್ರಕಲೆ ಕಾಲೇಜುಗಳ ಪ್ರಾಂಶುಪಾಲರು ಈ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತುರ್ತು ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಕೇಂದ್ರ ಕಚೇರಿಗೆ ಬೋಧಕ, ಬೋಧಕೇತರ ಸಿಬ್ಬಂದಿ ಅಥವಾ ಅಧಿಕಾರಿಯನ್ನು ಕಳುಹಿಸಬಾರದು. ಎಲ್ಲಾ ಸಮಸ್ಯೆಗಳನ್ನು ಮೈತ್ರಿ ಸಹಾಯವಾಣಿ ಮೂಲಕವೇ ನೀಡಬೇಕು. ಸಹಾಯವಾಣಿಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೇ ಇರುವುದನ್ನು ಇ-ಮೇಲ್ ಮೂಲಕ ಕಳುಹಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಕೇಂದ್ರ ಕಚೇರಿಗೆ ಸಿಬ್ಬಂದಿ ಅಥವಾ ಅಧಿಕಾರಿ ಪದೇ ಪದೇ ಬರುವುದನ್ನು ತಡೆಯಬೇಕು ಎಂದು ಇಲಾಖೆಯಿಂದ ಖಡಕ್ ನಿರ್ದೇಶನ ನೀಡಲಾಗಿದೆ.
ಮಧ್ಯಾಹ್ನ 3ರಿಂದ 5.30ರವರೆಗೆ ಅವಕಾಶ: ಕೋವಿಡ್ 19 ಹರಡುವಿಕೆ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿ ಹಾಗೂ ನೌಕರರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ಸಹಾಯ ವಾಣಿ ಅಥವಾ ಇ-ಮೇಲ್‌ಗೆ ಕಳುಹಿಸಬೇಕು. ಹಾಗೆಯೇ ಕೇಂದ್ರ ಕಚೇರಿಯಲ್ಲಿ ಸಂದರ್ಶಕರಿಗೆ ನಿಗದಿಪಡಿಸಲಾಗಿರುವ ಸಮಯ ಮಧ್ಯಾಹ್ನ 3ರಿಂದ 5.30ರ ವರಗೆ ಮಾತ್ರ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಂತ್ರಿಕ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
* ರಾಜು ಖಾರ್ವಿ ಕೊಡೇರಿ